Crime News: ಕೌಟುಂಬಿಕ ಕಲಹ, ಮೈ ಮೇಲೆ ಬಿಸಿನೀರು, ಕಾರದ ಪುಡಿ ಎರಚಿ ಒನಕೆಯಿಂದ ಹಲ್ಲೆ ನಡೆಸಿ ಮಾವನನ್ನು ಕೊಂದ ಸೊಸೆ

| Updated By: ಆಯೇಷಾ ಬಾನು

Updated on: Nov 08, 2022 | 10:16 AM

ರಾಜ್ಯದಲ್ಲಿಂದು ಅನೇಕ ಕಡೆ ಅಪಘಾತಗಳು, ಅವಘಡಗಳು ಸಂಭವಿಸಿವೆ. ಅಪಘಾತಗಳ ರೌಂಡಪ್ ಸುದ್ದಿ ಇದಾಗಿದ್ದು ದಾವಣಗೆರೆಯಲ್ಲಿ ಸೊಸೆ ಮಾವನನ್ನೇ ಕೊಂದಿರುವ ಘಟನೆ ನಡೆದಿದೆ. ಇಂದು ಚಂದ್ರ ಗ್ರಹಣ ಹಿನ್ನೆಲೆ ಅಪಘಾತಗಳು ಹೆಚ್ಚು ಎಂದು ಹೇಳಲಾಗುತ್ತಿದೆ.

Crime News: ಕೌಟುಂಬಿಕ ಕಲಹ, ಮೈ ಮೇಲೆ ಬಿಸಿನೀರು, ಕಾರದ ಪುಡಿ ಎರಚಿ ಒನಕೆಯಿಂದ ಹಲ್ಲೆ ನಡೆಸಿ ಮಾವನನ್ನು ಕೊಂದ ಸೊಸೆ
ಘಟನಾ ಸ್ಥಳದಲ್ಲಿ ಆರೋಪಿ ಮಹಿಳೆ ಜೊತೆ ಪೊಲೀಸರ ತನಿಖೆ
Follow us on

ದಾವಣಗೆರೆ: ಕೌಟುಂಬಿಕ ಕಲಹ ಹಿನ್ನೆಲೆ ಮೈ ಮೇಲೆ ಬಿಸಿನೀರು, ಕಾರದ ಪುಡಿ ಎರಚಿ ಒನಕೆಯಿಂದ ಹಲ್ಲೆ ನಡೆಸಿ ಮಾವನನ್ನು ಸೊಸೆ ಕೊಲೆ ಮಾಡಿರುವ ಭಯಾನಕ ಘಟನೆ ದಾವಣಗೆರೆ ಜಿಲ್ಲೆ ಹರಿಹರ ನಗರದ ವಿದ್ಯಾನಗರದಲ್ಲಿ ನಡೆದಿದೆ. ಬಿ.ಎಂ.ಜ್ಯೋತಿ(28) ಎಂಬ ಮಹಿಳೆ ತನ್ನ ಮಾವ ಪಿ.ಶಿವಕುಮಾರ್​​(70) ಅವರನ್ನು ಕೊಲೆ ಮಾಡಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮೂಲದ ಕುಟುಂಬ ಕಳೆದ ಆರು ತಿಂಗಳಿಂದ ಹರಿಹರದಲ್ಲಿ ವಾಸವಾಗಿತ್ತು. ಕೊಲೆಯಾದ ಶಿವಕುಮಾರ ಪುತ್ರ ಪಿ.ವೀರೇಶ ಹರಿಹರದ ಕಾರ್ಗೀಲ್ ಕಂಪನಿಯ ಉದ್ಯೋಗಿಯಾಗಿದ್ದಾರೆ. ಆರೋಪಿ‌ ಸೊಸೆಯನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ರವಾನಿಸಲಾಗಿದೆ.

ಸೇತುವೆಗೆ ಬೈಕ್​ ಡಿಕ್ಕಿಯಾಗಿ ಸವಾರ ಸಾವು

ತುಮಕೂರು: ಜ್ಯೋತಿ ನಗರದಲ್ಲಿ ನಿರ್ಮಾಣ ಹಂತದ ಸೇತುವೆಗೆ ಬೈಕ್​ ಡಿಕ್ಕಿಯಾಗಿ ಸವಾರ ಶಿವಕುಮಾರ್(38)​ ಮೃತಪಟ್ಟಿದ್ದಾರೆ. ತುಮಕೂರಿನ ಆಚಾರ್ಯ ಐಟಿಐ ಕಾಲೇಜಿನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಮೃತ ದುರ್ದೈವಿ. ತನ್ನ ಪಲ್ಸರ್ ಬೈಕ್ ನಲ್ಲಿ ತುಮಕೂರು ಕಡೆಯಿಂದ ಬೆಳಗುಂಬ ಕಡೆಗೆ ಹೋಗುವಾಗ ನಿರ್ಮಾಣ ಹಂತದ ಸೇತುವೆಗೆ ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿರ್ಮಾಣ ಹಂತದ ಸೇತುವೆಗೆ ಸೂಚನಾ ಫಲಕಗಳನ್ನ ಹಾಕದೇ ನಿರ್ಲಕ್ಷ್ಯವಹಿಸಿರುವುದು ಸಾವಿಗೆ ಒಂದು ರೀತಿಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಂಪಂಗಿರಾಮನಗರ: ತಾನು ಲೈಫ್​ ಎಂಜಾಯ್ ಮಾಡಲು ತನ್ನದೆ ಮಗುವನ್ನು ಮಹಡಿಯಿಂದ ಬಿಸಾಕಿ ಕೊಂದಿದ್ದ ಹೆತ್ತಮ್ಮ!

ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ಮಾನ್ಸಿ(40), ಉಜ್ವಲ್​​ ಬಾರ್ವಿ(44) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಚಿನ್ ಬಾರ್ವಿ ಎಂಬಾತನಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಿರುಪತಿ ದರ್ಶನ ಮುಗಿಸಿ ಮಹಾರಾಷ್ಟ್ರಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಭರಮಸಾಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬ್ಬು ತುಬ್ಬಿದ ಟ್ರ್ಯಾಕ್ಟರ್, ಬೈಕ್ ನಡುವೆ ಡಿಕ್ಕಿ ಮಹಿಳೆ ಸಾವು

ಮೈಸೂರು ಊಟಿ ರಸ್ತೆಯ ಮಲ್ಲನ ಮೂಲೆ ಬಳಿ ಕಬ್ಬು ತುಬ್ಬಿದ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಮೈಸೂರಿನ ಸಾತಗಳ್ಳಿ ಗ್ರಾಮದ ಗೌರಮ್ಮ (35) ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೆಟ್ಟಗುಂಡನಹಳ್ಳಿ ಗ್ರಾಮದ ಬಳಿ ಕಾರು ಪಲ್ಟಿ, ನಾಲ್ವರು ಪಾರು

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಶೆಟ್ಟಗುಂಡನಹಳ್ಳಿ ಜಗಳೂರು ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಅಪಘಾತವೊಂದು ಸಂಭವಿಸಿದ್ದು ನಾಲ್ವರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ. ಜಗಳೂರು ಕಡೆಯಿಂದ ಹೋಗುತ್ತಿದ್ದ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಕಾರಿನಲ್ಲಿದ್ದ ನಾಲ್ವರು ಪಾರಾಗಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್ ಬಂಧನ

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಪೆಡ್ಲರ್​ ಆಸೀಫ್​ ಬಂಧಿಸಿದ ಡಿ.ಜೆ.ಹಳ್ಳಿ ಠಾಣೆ ಪೊಲೀಸರು; ಬಂಧಿತನಿಂದ 5.50 ಲಕ್ಷ ಮೌಲ್ಯದ 9 ಕೆಜಿ 400 ಗ್ರಾಂ ಗಾಂಜಾ ವಶಕ್ಕೆ; ಆಂಧ್ರದಿಂದ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಆಸೀಫ್​​

ಆನ್ಲೈನ್ ಡೆಲಿವರಿ ರೀತಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರಾಜ್ಯ ಪೆಡ್ಲರ್ ಆಸೀಫ್​ನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೋಜಿಕೋಡ್ ಮೂಲದ ಗಾಂಜಾ ಪೆಡ್ಲರ್ ಆಸೀಫ್, ಆಂಧ್ರದ ವೈಜಾಗ್ ನಿಂದ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ. ಸದ್ಯ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದು ಬಂಧಿತನಿಂದ 5.50 ಲಕ್ಷ ಮೌಲ್ಯದ 9 ಕೆಜಿ 400 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.