ಕಾಪಿರೈಟ್ ಕೇಸ್​ನಿಂದ​ ಕಾಂಗ್ರೆಸ್ ಟ್ವಿಟರ್ ಖಾತೆ ಬಂದ್: ಜೈಲಿಗೆ ಕಳಿಸಿದರೂ ಕೇರ್ ಮಾಡಲ್ಲ ಎಂದ ಡಿಕೆ ಶಿವಕುಮಾರ್

ಜನರ ಹೃದಯವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅದು ಸದಾ ನಮ್ಮ ಪರವಾಗಿ ಮಿಡಿಯುತ್ತಿರುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾಪಿರೈಟ್ ಕೇಸ್​ನಿಂದ​ ಕಾಂಗ್ರೆಸ್ ಟ್ವಿಟರ್ ಖಾತೆ ಬಂದ್: ಜೈಲಿಗೆ ಕಳಿಸಿದರೂ ಕೇರ್ ಮಾಡಲ್ಲ ಎಂದ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 08, 2022 | 10:03 AM

ಬೆಳಗಾವಿ: ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಸಂಬಂಧಿಸಿದ ವಿಡಿಯೊ ತುಣುಕಿಗೆ ಕೆಜಿಎಫ್​ನ ಹಾಡೊಂದನ್ನು ಬಳಸಿದ್ದರಿಂದ ಕಾಪಿರೈಟ್ ಉಲ್ಲಂಘನೆಯಾಗಿದೆ ಎಂಬ ದೂರು ಆಧರಿಸಿ ಕಾಂಗ್ರೆಸ್​ನ ಟ್ವಿಟರ್​ ಖಾತೆಯನ್ನು ನಿರ್ಬಂಧಿಸಲು ಬೆಂಗಳೂರು ಕೋರ್ಟ್ ಆದೇಶ ನೀಡಿದೆ. ಈ ಕುರಿತು ನಿನ್ನೆ (ನ 7) ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದರು.

ಮಾಜಿ ಸಚಿವ ವಿನಯ ಕುಲಕರ್ಣಿ 54ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ರಾಹುಲ್ ಗಾಂಧಿ ಡ್ಯಾನ್ಸ್​ಗೆ ನಮ್ಮ ಕಾರ್ಯಕರ್ತರೊಬ್ಬರು ಕೆಜಿಎಫ್ ಹಾಡು ಸೇರಿಸಿ ವಿಡಿಯೊ ಮಾಡಿದ್ದರು. ಅದನ್ನು ಟ್ವಿಟರ್​ನಲ್ಲಿ ಪ್ರಕಟಿಸಲಾಗಿತ್ತು. ಇದನ್ನೇ ನೆಪವಾಗಿಸಿ ನಮ್ಮ ಟ್ವಿಟರ್ ಖಾತೆ ಬ್ಲಾಕ್ ಮಾಡಿಸಲಾಗಿದೆ. ನೀವು ಟ್ವಿಟರ್‌ ಖಾತೆಯನ್ನದಾರೂ ಬ್ಲಾಕ್‌ ಮಾಡಿಸಿ ಅಥವಾ ರಾಹುಲ್ ಗಾಂಧಿ ಅವರನ್ನಾದರೂ ಜೈಲಿಗೆ ಹಾಕಿಸಿ. ನಮ್ಮ ಹೋರಾಟ, ಪ್ರಯತ್ನಗಳು ನಿಲ್ಲುವುದಿಲ್ಲ. ನಾವು ಎಂಥದ್ದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿದ್ದೇವೆ’ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ನನ್ನನ್ನು ಅಥವಾ ವಿನಯ್ ಕುಲಕರ್ಣಿಯನ್ನು ಬೇಕಿದ್ದರೂ ಜೈಲಿಗೆ ಹಾಕಿಸಿ. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಿ. ಜನರ ಹೃದಯವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅದು ಸದಾ ನಮ್ಮ ಪರವಾಗಿ ಮಿಡಿಯುತ್ತಿರುತ್ತದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಪ್ರಧಾನಮಂತ್ರಿಯ ಹುದ್ದೆಯನ್ನೇ ಸ್ಥಾನವನ್ನು ತ್ಯಾಗ ಮಾಡಿದವರು. ಇಂಥ ತ್ಯಾಗಿಗಳ ಮುಂದಾಳತ್ವದ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ತೆಗೆಯಲು ಎಲ್ಲರೂ ಕೈಜೋಡಿಸಬೇಕಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಇನ್ನೂ ಆದೇಶದ ಪ್ರತಿ ಸಿಕ್ಕಿಲ್ಲ

ಕಾಂಗ್ರೆಸ್ ಪಕ್ಷದ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್​​ ಖಾತೆ ನಿರ್ಬಂಧಿಸುವಂತೆ ಬೆಂಗಳೂರು ನ್ಯಾಯಾಲಯ ಆದೇಶ ಹೊರಡಿಸಿರುವ ಕುರಿತು ಪ್ರತಿಕ್ರಿಯಿಸಿದರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC), ‘ಟ್ವಿಟರ್​ ಖಾತೆಗಳನ್ನು ನಿರ್ಭಂದಿಸುವಂತೆ ಬೆಂಗಳೂರು ನ್ಯಾಯಾಲಯ ಆದೇಶ ಹೊರಡಿಸಿದ್ದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದೆವು. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನಾವು ಹಾಜರಾಗಿರಲಿಲ್ಲ. ಆದೇಶದ ಪ್ರತಿಯೂ ನಮಗೆ ಲಭ್ಯವಾಗಿಲ್ಲ. ಈ ಕುರಿತು ನಾವು ಕಾನೂನಾತ್ಮಕವಾಗಿ ಏನು ಪರಿಹಾರ ಕಂಡುಕೊಳ್ಳಬಹುದೆಂದು ಯೋಚಿಸುತ್ತೇವೆ’ ಎಂದು ಟ್ವೀಟ್​ ಮಾಡಿದೆ.

Published On - 10:01 am, Tue, 8 November 22