ದಾವಣಗೆರೆ: ಜಿಲ್ಲೆಯ ದೊಡ್ಡಬಾತಿ ಗ್ರಾಮದ ಹಜರತ್ ಚಮನ್ ಶಾ ವಲಿ ದರ್ಗಾದ ಅಂಗಳದಲ್ಲಿ ದುಡ್ಡಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ದರ್ಗಾದಲ್ಲಿ ಭಕ್ತರು ಕಾಣಿಕೆ ಹಾಕಲು ಹುಂಡಿ ಇದ್ದು, ಈ ಹುಂಡಿಗೆ ಭಕ್ತರು ಹಣವನ್ನು ಹಾಕುತ್ತಾರೆ. ಆದರೆ ಇಂತಹ ಹುಂಡಿಯಿಂದ ಇಂದು ಬೆಳಿಗ್ಗೆಯಿಂದ ಹೊಗೆ ಬರಲು ಶುರುವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಇದೊಂದು ಸೂಕ್ಷ್ಮವಾದ ಸ್ಥಳ. ದರ್ಗಾ ಸಮಿತಿಯವರೇ ಆಗಾಗ ಜಗಳವಾಡುತ್ತಿರುತ್ತಾರೆ. ಯಾರೋ ಕಿಡಿಗೇಡಿಗಳು ಎನೋ ಮಾಡಿದ್ದಾರೆ ಎಂಬ ಆಂತಂಕ ಶುರುವಾಗಿದ್ದು, ದುಡ್ಡು ತುಂಬಿದ ಹುಂಡಿಯಿಂದ ಹೊಗೆ ಬರುವುದನ್ನ ನೋಡಿ ಪೂಜಾರಿಗಳು ನೀರು ಹಾಕಿ ಇದ್ದ ವಿಚಾರಗಳನ್ನ ತಹಶೀಲ್ದಾರ್ ಮತ್ತು ವಕ್ಫ್ ಮಂಡಳಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಹುಂಡಿ ತೆರೆದು ನೋಡಿದ್ದಾರೆ. ಆಗ ಇದರಲ್ಲಿ ಅಪಾರ ಪ್ರಮಾಣದ ನೋಟುಗಳು ಬೆಂಕಿಗೆ ಆಹುತಿ ಆಗಿರುವುದು ಗೊತ್ತಾಗುತ್ತದೆ. ದೊಡ್ಡ ಬಾತಿ ದರ್ಗಾ ಎಂದರೆ ಸಾಕು ಅದೊಂದು ಪ್ರಸಿದ್ಧವಾದ ಸ್ಥಳ. ಎಲ್ಲಾ ಧರ್ಮಿಯರು ಇಲ್ಲಿಗೆ ಬರುತ್ತಾರೆ. ಮೇಲಾಗಿ ಈ ಹುಂಡಿಯನ್ನು 5 ವರ್ಷಗಳ ಹಿಂದೆ ಅಂದರೆ 2016ರಲ್ಲಿ ತೆರೆಯಲಾಗಿತ್ತು. ಹುಂಡಿಯಲ್ಲಿ ಸಾಕಷ್ಟು ಹಣವೂ ಸಂಗ್ರಹವಾಗಿತ್ತು. ದರ್ಗಾ ಪ್ರದೇಶದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಸಹ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನಗಳಿಂದ ದರ್ಗಾ ಪ್ರದೇಶದಲ್ಲಿ ಗಲಾಟೆಗಳು ಆಗುತ್ತಿರುವ ಹಿನ್ನೆಲೆ ಸಿಸಿ ಕ್ಯಾಮರಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಈ ದರ್ಗಾ ವಕ್ಫ್ ಮಂಡಳಿಗೆ ಸೇರಿದೆ. ಪೊಲೀಸರು ಬಂದು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಇಲ್ಲೊಬ್ಬ 8ರಿಂದ 10 ವರ್ಷದ ಬಾಲಕ ದರ್ಗಾಕ್ಕೆ ಬಂದು, ದೇವರಿಗೆ ನಮಸ್ಕಾರ ಮಾಡಿ ಅಗರಬತ್ತಿ ಕಡ್ಡಿ ಎಲ್ಲಿ ಇಡಬೇಕು ಎಂದು ಗೊತ್ತಾಗದೇ ನೇರವಾಗಿ ದರ್ಗಾದ ಹುಂಡಿಗೆ ಹಾಕಿದ್ದ. ಅಗರಬತ್ತಿ ಕಡ್ಡಿ ಹುಂಡಿ ಒಳಗೆ ಬಿಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲು ಶುರುವಾಗಿದೆ.
ಬಾಲಕನೊಬ್ಬ ಗೊತ್ತಾಗದೆ ಹುಂಡಿಯಲ್ಲಿ ಅಗರಬತ್ತಿ ಹಾಕಿದ್ದರಿಂದ ಬಾರಿ ಅನಾಹುತವೇ ಆಗಿದ್ದು, ಲಕ್ಷಾಂತರ ರೂಪಾಯಿ ಸುಟ್ಟು ಹೋಗಿವೆ. ಈಗಾಗಲೇ 20ಕ್ಕೂ ಹೆಚ್ಚು ಜನ ಹಣದ ಎಣಿಕೆ ಆರಂಭಿಸಿದ್ದು, ಸುಮಾರು 10 ಲಕ್ಷ ರೂಪಾಯಿ ಎಣಿಕೆ ಆಗಿದೆ. ಇನ್ನು ಬೇಕಾದಷ್ಟು ದುಡ್ಡು ಎಣಿಕೆ ಮಾಡಬೇಕಾಗಿದೆ. ಮೇಲಾಗಿ ಎಷ್ಟು ಹಣ ಸುಟ್ಟು ಹೋಗಿದೆ ಎಂದು ಖಚಿತವಾಗಿ ಹೇಳುವುದು ಕೂಡ ಕಷ್ಟವಾಗಿದೆ. ಸಿಸಿ ಕ್ಯಾಮರಾದಿಂದ ಸತ್ಯ ಗೊತ್ತಾಗಿದ್ದು, ದೊಡ್ಡದೊಂದು ಆತಂಕ ದೂರವಾಗಿದೆ.
ಇದನ್ನೂ ಓದಿ: ನಾಳೆ ಕೇಂದ್ರ ಚುನಾವಣಾ ಆಯೋಗದ ಸಭೆ: 5 ರಾಜ್ಯಗಳ ವಿಧಾನಸಭೆ ಚುನಾವಣಾ ವೇಳಾಪಟ್ಟಿ ಬಗ್ಗೆ ಸಮಾಲೋಚನೆ