ಶುಲ್ಕ ಕಡಿತ ವಿರೋಧಿಸಿದ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಸಜ್ಜಾದ ನಾಗರೀಕರು

ಶುಲ್ಕ ಕಡಿತ ವಿರೋಧಿಸಿದ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಸಜ್ಜಾದ ನಾಗರೀಕರು
ಸಂಗ್ರಹ ಚಿತ್ರ

Private Schools: ಈ ಹಿಂದೆ ಸರ್ಕಾರ ನೀಡಿದ ಆದೇಶದ ಪ್ರಕಾರ ಯಾವುದೇ ರೀತಿಯ ಆರ್ಥಿಕ ಹೊರೆಯನ್ನು ಈ ಬಾರಿ ಹೇರುವಂತಿಲ್ಲ. ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎನ್ನಲಾಗಿತ್ತು. ಆದರೆ, ಕೊರೊನಾ ಲಾಕ್​ಡೌನ್​ ಇದ್ದ ಸಂದರ್ಭದಲ್ಲೂ ಶಾಲಾ ಕ್ಯಾಂಪಸ್​ ಶುಲ್ಕವನ್ನು ಖಾಸಗಿ ಶಾಲೆಗಳು ವಸೂಲಿ ಮಾಡಿವೆ.

Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 24, 2021 | 6:45 PM


ಖಾಸಗಿ ಶಿಕ್ಷಣ ಸಂಸ್ಥೆಗಳು ಸದ್ಯ ಸರ್ಕಾರದ ವಿರುದ್ಧ ಗರಂ ಆಗಿವೆ. ಶೇ 30ರಷ್ಟು ಶುಲ್ಕ ಕಡಿತದ ಆದೇಶ ಮಾಡಿರುವ ಕಾರಣಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿವೆ. ಆದರೆ, ಹೀಗೆ ಶುಲ್ಕ ಕಡಿತದ ಕಾರಣಕ್ಕೆ ಪ್ರತಿಭಟಿಸುತ್ತಿರುವ ಖಾಸಗಿ ಶಾಲೆಗಳಿಗೆ ಜನಸಾಮಾನ್ಯರೇ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ HSR ಲೇಔಟ್​ನ ನಿವಾಸಿಗಳು ಖಾಸಗಿ ಶಾಲೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಗಳು ಶೇ 30ರಷ್ಟು ಶುಲ್ಕ ಕಡಿತಗೊಂಡರೆ ಶಿಕ್ಷಕರಿಗೆ ಸಂಬಳ ನೀಡುವುದು ಕಷ್ಟ ಎನ್ನುತ್ತಾರೆ. ಆದರೆ, ನಮಗೂ ಸಾಕಷ್ಟು ಒತ್ತಡಗಳಿದ್ದು ಹೆಚ್ಚಿನ ಮೊತ್ತ ಪಾವತಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಏಪ್ರಿಲ್​ ತಿಂಗಳಲ್ಲಿ ಸರ್ಕಾರ ಶುಲ್ಕ ಏರಿಸದಂತೆ ಸೂಚನೆ ನೀಡಿತ್ತು. ದಿ ಪಬ್ಲಿಕ್​ ಸ್ಕೂಲ್​ ಮಕ್ಕಳನ್ನು ಕಳುಹಿಸುವ ಪೋಷಕರು ವರ್ಷಕ್ಕೆ ₹1.62 ಲಕ್ಷ ಪಾವತಿಸಬೇಕಾಗಿದೆ. ಕಳೆದ ಅಕ್ಟೋಬರ್​ ತಿಂಗಳಲ್ಲಿ ಈ ಶಾಲೆಯ ಆಡಳಿತ ಮಂಡಳಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ರೀತಿಯಲ್ಲಿ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿತ್ತು. ಆದರೆ, ಈಗ ತನ್ನ ನಿಲುವನ್ನು ಬದಲಿಸಿರುವ ಆಡಳಿತ ಮಂಡಳಿ ಶೇ 13ರಷ್ಟು ಶುಲ್ಕ ಹೆಚ್ಚಿಸುವುದಾಗಿ ಹೇಳುತ್ತಿದೆ ಎಂದು ಸಿಟಿಜನ್​ ಟಾಸ್ಕ್ ಫೋರ್ಸ್​ ಸದಸ್ಯ ಮನೋಜ್​ ಕೆ. ಹೇಳಿದ್ದಾರೆ.

ಈ ಹಿಂದೆ ಸರ್ಕಾರ ನೀಡಿದ ಆದೇಶದ ಪ್ರಕಾರ ಯಾವುದೇ ರೀತಿಯ ಆರ್ಥಿಕ ಹೊರೆಯನ್ನು ಈ ಬಾರಿ ಹೇರುವಂತಿಲ್ಲ. ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎನ್ನಲಾಗಿತ್ತು. ಕೊರೊನಾ ಲಾಕ್​ಡೌನ್​ ಇದ್ದ ಸಂದರ್ಭದಲ್ಲೂ ಶಾಲಾ ಕ್ಯಾಂಪಸ್​ ಶುಲ್ಕವನ್ನು ಖಾಸಗಿ ಶಾಲೆಗಳು ವಸೂಲಿ ಮಾಡಿವೆ. ಆನ್​ಲೈನ್​ ಕ್ಲಾಸ್​ ಕಾರಣ ಕೆಲ ಖರ್ಚುವೆಚ್ಚಗಳೂ ಸೇರಿಕೊಂಡಿವೆ. ಇನ್ನೊಂದೆಡೆ ನಾವು ಕೆಲಸ ಮಾಡುತ್ತಿರುವ ಸಂಸ್ಥೆಗಳು ಸಹ ನಮ್ಮ ಸಂಬಳದಲ್ಲಿ ಯಾವುದೇ ಹೆಚ್ಚಳ ಮಾಡುತ್ತಿಲ್ಲ ಎಂದು ವೆಂಕಟೇಶ್​ ಎಂಬುವವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೆಲ ಖಾಸಗಿ ಶಾಲೆಗಳು ಸರ್ಕಾರದ ಆದೇಶವನ್ನು ಧಿಕ್ಕರಿಸಿ ಬಾಕಿ ಮೊತ್ತ ಕಟ್ಟಲು ಪೋಷಕರಿಗೆ ಒತ್ತಡ ಹಾಕುತ್ತಿವೆ. ಶುಲ್ಕ ಕಟ್ಟದಿದ್ದರೆ ಮಕ್ಕಳನ್ನು ಶಾಲೆಯಲ್ಲಿ ಯಾವ ರೀತಿ ನೋಡುತ್ತಾರೋ ಎನ್ನುವ ಹಿಂಜರಿಕೆಯಲ್ಲಿ ಪೋಷಕರಿದ್ದಾರೆ. ಇದು ಮಕ್ಕಳು ಮತ್ತು ಪೋಷಕರು ಇಬ್ಬರ ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕಾರಣಗಳಿಗಾಗಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯೂ ನಡೆದಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ದಿ ಸಿಟಿಜನ್​ ಟಾಸ್ಕ್​ ಫೋರ್ಸ್​ ಈಗಾಗಲೇ ಹೆಚ್​ಎಸ್​ಆರ್​ ಬಡಾವಣೆಯಲ್ಲಿರುವ ಪೋಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ. ಜೊತೆಗೆ, ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದ್ದು, ಖಾಸಗಿ ಶಾಲೆಗಳ ಮುಖ್ಯಸ್ಥರ ಜೊತೆಗೆ ಚರ್ಚಿಸಲೂ ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಶುಲ್ಕ ಕಡಿತ ಆದೇಶ ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಸಮಾವೇಶ


Follow us on

Related Stories

Most Read Stories

Click on your DTH Provider to Add TV9 Kannada