ಜಿಲೆಟಿನ್ ದಾಸ್ತಾನು, ಬಳಕೆಗೆ ಶೀಘ್ರ ಕಟ್ಟುನಿಟ್ಟಿನ ಕಾನೂನು ಜಾರಿ: ಮುರುಗೇಶ್ ನಿರಾಣಿ
Murugesh Nirani: ಮುಂದಿನ ದಿನಗಳಲ್ಲಿ ಜಿಲಿಟಿನ್ ಪೂರೈಕೆ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದವರು ಮಾತ್ರ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುವ ಕಾನೂನನ್ನು ಜಾರಿ ಮಾಡುವ ಆಲೋಚನೆಯಿದೆ ಎಂದರು.
ಮಂಗಳೂರು: ಗಣಿಗಳಿಗೆ ಜಿಲೆಟಿನ್ ಸ್ಫೋಟಕ ಪೂರೈಕೆ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಇದಕ್ಕಾಗಿ ಹೊಸ ಕಾನೂನನ್ನು ಜಾರಿ ಮಾಡುವ ಚಿಂತನೆಯೂ ಇದೆ. ಸರ್ಕಾರದಿಂದ ಅಧಿಕೃತವಾಗಿ ಅನುಮತಿ ಪಡೆದವರು ಮಾತ್ರ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸುತ್ತೇವೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಬುಧವಾರ (ಫೆ.24) ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಹುಣಸೋಡು ಬಳಿಯ ಕಲ್ಲುಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡ ನಂತರ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದರು. ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಬಹುದೆಂಬ ಭೀತಿಯಿಂದಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ವೇಳೆ ಸ್ಫೋಟವಾಗಿದೆ. ನನಗೆ ತಿಳಿದ ಪ್ರಕಾರ ಈ ಜಿಲಟಿನ್ ಕಡ್ಡಿಗಳನ್ನು ಶಿವಮೊಗ್ಗ ಘಟನೆಗೂ ಮುನ್ನವೇ ಸಂಗ್ರಹಿಸಿಡಲಾಗಿತ್ತು. ಈಗಾಗಲೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿರುವುದರಿಂದ ನಾನು ಹೆಚ್ಚಿನ ಮಾಹಿತಿ ನೀಡುವುದು ಸರಿಯಲ್ಲ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಿರೇನಾಗವಲ್ಲಿ ಬಳಿ ನಡೆದ ಜಿಲಟಿನ್ ಸ್ಪೋಟ ಘಟನೆ ಅತ್ಯಂತ ದುರದೃಷ್ಟಕರ. ಇದರಲ್ಲಿ ಯಾರೇ ಭಾಗಿಯಾದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಯಾರೇ ಇದ್ದರೂ ಸುಮ್ಮನೆ ಬಿಡುವುದಿಲ್ಲ. ಅಮಾಯಕ ಜೀವಗಳ ಜೊತೆ ಚೆಲ್ಲಾಟವಾಡುವವರಿಗೆ ತಕ್ಕ ಶಿಕ್ಷೆಯಾಗಲಿದೆ. ತನಿಖಾ ವರದಿ ಬಂದ ನಂತರ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ತಮ್ಮ ದೆಹಲಿ ಭೇಟಿ ಕುರಿತಂತೆ ಮಾತನಾಡಿದ ನಿರಾಣಿ ನಾನು ದೆಹಲಿಗೆ ತೆರಳಿದ್ದು ನಿಜ. ಆದರೆ ನಾಯಕರನ್ನು ಭೇಟಿಯಾಗಿಲ್ಲ. ವೈಯಕ್ತಿಕ ಕೆಲಸ ಮತ್ತು ಇಲಾಖೆಯ ಕೆಲಸದ ನಿಮಿತ್ತ ಹೋಗಿದ್ದೆ. ಯಾವುದೇ ರಾಷ್ಟ್ರೀಯ ನಾಯಕರು ನನ್ನನ್ನ ಕರೆಸಿರಲಿಲ್ಲ. ನಾನು ಯಾರನ್ನೂ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ಸಮೀಕ್ಷೆ ಮಾಡಿ ಸಂರಕ್ಷಣೆ ಮಾಡುವ ಚಿಂತನೆಯಿದೆ. ರಾಜ್ಯದಲ್ಲಿರುವ ಖನಿಜ ಸಂಪತ್ತನ್ನು ಹಿಂದಿನ ಸರ್ಕಾರಗಳು ಹಳೆಯ ಪದ್ಧತಿಯಲ್ಲಿ ಸಮೀಕ್ಷೆ ಮಾಡಿದೆ. ನಾವು ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿಸಲಿದ್ದೇವೆ. ಇದರಿಂದ ನಿಖರ ಮಾಹಿತಿ ಸಿಗಲಿದೆ ಎಂದು ಮಾಹಿತಿ ನೀಡಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಇದನ್ನು ವೈಜ್ಞಾನಿಕವಾಗಿ ಸರ್ವೆ ಮಾಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಪ್ರಕರಣ: ಕರ್ತವ್ಯದಲ್ಲಿ ಅತೀವ ನಿರ್ಲಕ್ಷ ಆರೋಪ, PSI ಗೋಪಾಲ ರೆಡ್ಡಿ ಅಮಾನತು
ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಕ್ರಷರ್ ಹಾವಳಿಗೆ ಮುಚ್ಚಿಹೋದ ಪುರಾತನ ಹನುಮ ದೇಗುಲ!
Published On - 8:40 pm, Wed, 24 February 21