ದಾವಣಗೆರೆ, ಜು.13: ಸಂಸಾರದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ದಂಪತಿಗಳ ಮಧ್ಯೆ ಮನಸ್ತಾಪ ಉಂಟಾಗುವುದು ಸಹಜ. ಆದ್ರೆ, ಇಲ್ಲಿ ಮನಸ್ತಾಪ ವಿಕೋಪಕ್ಕೆ ತಿರುಗಿ ವಿಚ್ಛೇದನ(Divorce)ಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ದರು. ಇದೀಗ ದೂರವಾಗಿದ್ದ ದಂಪತಿಗಳನ್ನು ಮತ್ತೆ ಒಂದುಗೂಡಿಸಿ ಸುಖ ಜೀವನ ನಡೆಸುವಂತೆ ಮಾಡಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ದಾವಣಗೆರೆ(Davanagere)ಯ ಕೌಟುಂಬಿಕ ನ್ಯಾಯಾಲಯ. ಹೌದು, ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆರವರ ನೇತೃತ್ವದಲ್ಲಿ ನಡೆದ ಎರಡನೇ ರಾಷ್ಟ್ರೀಯ ಲೋಕ ಆದಾಲತ್ನಲ್ಲಿ 16 ಜೋಡಿಗಳು ನ್ಯಾಯಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಮತ್ತೆ ಕೂಡಿಕೊಂಡಿದ್ದಾರೆ.
ಇಂದು(ಶನಿವಾರ) ದೇಶದಾದ್ಯಂತ ರಾಷ್ಟ್ರೀಯ ಲೋಕ ಆದಾಲತ್ ನಡೆಯುತ್ತಿದ್ದು, 8,800 ವಿವಿಧ ಪ್ರಕರಣಗಳು ರಾಜಿಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಇದರಲ್ಲಿ ವಿಚ್ಛೇದನ ಸೇರಿದಂತೆ ನಾನಾ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದ 16 ಜೋಡಿಗಳು ಮತ್ತೆ ಸತಿ-ಪತಿಗಳಾಗುವಂತೆ ರಾಜೀ ಮಾಡಿಸಿ ಜೀವನಕ್ಕೆ ದಾರಿ ಮಾಡಿಕೊಡಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪವಾಗಿ ಮೂರ್ನಾಲ್ಕು ವರ್ಷಗಳಿಂದ ದೂರವಿದ್ದ ಸತಿ-ಪತಿಗಳು ವಿಚ್ಛೇದನ ಮರೆತು, ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಇಡೀ ದಾವಣಗೆರೆ ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಾಕ್ಷಿಯಾಗಿದೆ.
ಇದನ್ನೂ ಓದಿ:ಖ್ಯಾತ ನಟಿ ಜೊತೆ ಹೆಚ್ಚಿತಾ ಆಪ್ತತೆ? ಯುವ ರಾಜ್ಕುಮಾರ್ ವಿಚ್ಛೇದನಕ್ಕೆ ಇದೇ ಕಾರಣ ಆಯ್ತಾ?
ನಾನಾ ಕಾರಣಗಳಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗಳಿಗೆ ನ್ಯಾಯಾಧೀಶರು, ವಕೀಲರು, ಸಂಧಾನಕಾರರು ಮನವೊಲಿಸಿ, ಇದೀಗ 16 ಜೋಡಿಗಳು ವೈಮನಸ್ಸು ಬಿಟ್ಟು ಪರಸ್ಪರ ಹಾರ ಬದಲಿಸಿ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ. ರಜಿಯಾಬಾನು-ರಸುಲ್ಲಾ, ಸೈಯದ್ ಗೌಸ್-ಸೈಯದ್ ನಿಷಾನ್ ತಾಜ್, ಉದಯ್-ನಾಗರತ್ನ, ಶಾರುಕ್ ದರ್ವೇಜ್-ರುಕ್ಸಾನಾ ಬಾನು, ಅಣ್ಣಕ್ಕ-ಭರಮಪ್ಪ ಸೇರಿದಂತೆ 16 ಜೋಡಿಗಳದ್ದು ಒಂದೊಂದು ಕತೆ ಇದ್ದು, ಇದೀಗ ಎಲ್ಲಾ ಮನಸ್ತಾಪ ಮರೆತು ಪರಸ್ಪರ ಸಿಹಿ ತಿನಿಸಿ ಮೂಲಕ ಮತ್ತೆ ಒಂದಾಗಿದ್ದು, ನ್ಯಾಯಾಧೀಶರ ಹಿತನುಡಿಗಳನ್ನು ಅರಿತು ಮತ್ತೆ ನಮ್ಮನ್ನು ಒಂದು ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿ ಉತ್ತಮ ಜೀವನ ನಡೆಸುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ನೆಮ್ಮದಿ ಇಲ್ಲದೆ ದೂರವಾಗಿ ಪರಸ್ಪರ ಒಂಟಿಯಾಗಿ ಬದುಕುತ್ತಿದ್ದ ದಂಪತಿಗಳು, ನ್ಯಾಯಾಲಯ ಮಧ್ಯಪ್ರವೇಶದಿಂದ ಮತ್ತೆ ಒಂದಾಗಿದ್ದಾರೆ. ನ್ಯಾಯಾಲಯದ ಈ ಸಮಾಜಮುಖಿ ಕಾರ್ಯವನ್ನು ನಿಜಕ್ಕೂ ಮೆಚ್ಚುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ