ಪತ್ನಿಯ ಮೇಲೆ ಅನುಮಾನದಲ್ಲಿ ಹಳೇ ಸ್ನೇಹಿತನ ಕೊಂದ ಪತಿ: ಕೆಲವೇ ಗಂಟೆಗಳಲ್ಲಿ ಆರೋಪಿ ಪತ್ತೆ ಮಾಡಿದ ಪೊಲೀಸ್ ಶ್ವಾನ

| Updated By: ಆಯೇಷಾ ಬಾನು

Updated on: Jul 18, 2024 | 9:41 AM

ಇವರಿಬ್ಬರ ನಡುವೆ ಬಹುದಿನಗಳಿಂದ ಅನೈತಿಕ ಸಂಬಂಧ ಇತ್ತು. ಈ ವಿಚಾರ ಪತಿಗೂ ಗೊತ್ತಾಗಿತ್ತು. ಆಗ ಕೊಲೆಯೊಂದು ನಡೆದಿದೆ. ಇಲ್ಲಿ ಇಂಟರೆಸ್ಟಿಂಗ್ ಎಂದರೆ ಈ ಕೊಲೆ ಕೇಸ್ ಪತ್ತೆ ಹಚ್ಚಿದ್ದು ತುಂಗ ಟು ಎಂಬ ಪೊಲೀಸ್ ಶ್ವಾನ. ಅಲ್ಲದೆ ಈ ಶ್ವಾನ ಎಂಟು ಕಿಲೋ ಮೀಟರ್ ಸುರಿಯುತ್ತಿರುವ ಮಳೆಯಲ್ಲಿ ಓಡಿ ಇನ್ನೊಂದು ಕೊಲೆಯನ್ನು ಸಹ ತಪ್ಪಿಸಿದೆ. ಕೊಲೆಗಾರನನ್ನ ಜೈಲಿಗೆ ಕಳುಹಿಸಿದೆ. ತುಂಗಾ ಟು ಶ್ವಾನದ ಇಂಟರೆಸ್ಟಿಂಗ್ ಸುದ್ದಿ ಇಲ್ಲಿ ಓದಿ.

ಪತ್ನಿಯ ಮೇಲೆ ಅನುಮಾನದಲ್ಲಿ ಹಳೇ ಸ್ನೇಹಿತನ ಕೊಂದ ಪತಿ: ಕೆಲವೇ ಗಂಟೆಗಳಲ್ಲಿ ಆರೋಪಿ ಪತ್ತೆ ಮಾಡಿದ ಪೊಲೀಸ್ ಶ್ವಾನ
ತುಂಗಾ ಟು ಪೊಲೀಸ್ ಶ್ವಾನ
Follow us on

ದಾವಣಗೆರೆ, ಜುಲೈ.18: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರ ಬಳಿಯ ಚನ್ನಾಪುರ ಗ್ರಾಮದಲ್ಲಿ ಸುಖ ಜೀವನ ನಡೆಸುತ್ತಿದ್ದ ರಂಗಸ್ವಾಮಿ ಹಾಗೂ ರೂಪಾ ಎನ್ನುವ ದಂಪತಿ ಈ ಸುದ್ದಿಯ ಮುಖ್ಯ ಪಾತ್ರಧಾರಿಗಳು. ದಂಪತಿ ನಡುವೆ ವಿಲನ್ ಆಗಿ ಬಂದಿದ್ದ ಸಂತೋಷ್ ಎಂಬಾತನ ಕೊಲೆ (Murder) ನಡೆದಿದೆ. ಕೊಲೆ ಮಾಡಿದ ರಂಗಸ್ವಾಮಿ ಜೈಲು ಸೇರಿದ್ದು ರೂಪಾಗೆ ಗಂಭೀರ ಗಾಯಗಳಾಗಿವೆ. ಪೊಲೀಸ್ ಶ್ವಾನವು ಕೊಲೆ ಆರೋಪಿ ರಂಗಸ್ವಾಮಿ ತನ್ನ ಪತ್ನಿ ಮೇಲೆ ಹಲ್ಲೆ ನಡೆಸುವಾಗ ಪತ್ತೆಹಚ್ಚಿದೆ. ಈ ಮೂಲಕ ರೂಪಾಳ ಪ್ರಾಣ ಉಳಿಸಿದೆ.

ರೂಪಾ, ತನ್ನೂರಿನ ಪಕ್ಕದ ಸಂತೆಬೆನ್ನೂರಿನಲ್ಲಿ ಬ್ಯುಟಿ ಪಾರ್ಲರ್ ನಡೆಸುತ್ತಿದ್ದಳು. ಸುಖ ಜೀವನ ನಡೆಸುತ್ತಿದ್ದ ರಂಗಸ್ವಾಮಿ ಹಾಗೂ ರೂಪಾಳ ನಡುವೆ ಸಂಶಯ ಎಂಬ ಬಿರುಕು ಕಾಣಿಸಿಕೊಂಡಿದೆ. ಇದೀಗ ಕೊಲೆಯೊಂದು ನಡೆದು ಹೋಗಿದೆ. ಸಂತೆಬೆನ್ನೂರು ನಿವಾಸಿ ಸಂತೋಷ ಎಂಬಾತ ಗಾರೆ ಕೆಲ್ಸ ಮಾಡಿಕೊಂಡಿದ್ದ. ಈತ ರೂಪಾಳ ಹಳೆಯ ಪ್ರೇಮಿ. ಅದು ಮದ್ವೆ ಆದ ಮೇಲೆ ಸಹ ಶುರುವಾಗಿತ್ತು. ರೂಪಾಗೂ ಈ ಸಂತೋಷಗೂ ಅನೈತಿಕ ಸಂಬಂಧ ಇದೆ ಎಂಬ ಸಂಶಯ ರಂಗಸ್ವಾಮಿಗೆ ಬಂದಿದೆ. ಇದೇ ಸಿಟ್ಟಿನಲ್ಲಿ ನಿನ್ನೆ ತಡ ರಾತ್ರಿ ಸಂತೆಬೆನ್ನೂರಿನಲ್ಲಿ ಬಾಡಾ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮಚ್ಚಿನಿಂದ ಹೊಡೆದು ರಂಗಸ್ವಾಮಿ, ಸಂತೋಷನ ಹತ್ಯೆ ಮಾಡಿದ್ದಾನೆ. ಸದ್ಯ ಕೊಲೆಗಾರ ರಂಗಸ್ವಾಮಿ ಈಗ ಜೈಲು ಸೇರಿದ್ದಾನೆ.

ಇದನ್ನೂ ಓದಿ: ಬಾಡಿ ಶೇಮಿಂಗ್, ಸಹೋದ್ಯೋಗಿಗಳ ವರ್ತನೆಯಿಂದ ಬೇಸತ್ತು ಬ್ಯಾಂಕ್​ ಉದ್ಯೋಗಿ ಆತ್ಮಹತ್ಯೆ

ಹೀಗೆ ತಡ ರಾತ್ರಿ ಸಂತೋಷನ ಕೊಲೆ ಮಾಡಿದ ರಂಗಸ್ವಾಮಿ ತನ್ನ ಪತ್ನಿಯನ್ನು ಕೊಲೆ ಮಾಡುವ ಪ್ಲಾನ್ ಮಾಡಿಕೊಂಡು ಸಂತೆಬೆನ್ನೂರಿನಿಂದ ನೇರವಾಗಿ ಚನ್ನಾಪುರಕ್ಕೆ ಬಂದಿದ್ದ. ಅಲ್ಲಿ ಪತ್ನಿಗೆ ಹಿಂಸೆ ನೀಡಲು ಶುರು ಮಾಡಿದ್ದ. ಇಷ್ಟರಲ್ಲಿ ಸಂತೆಬೆನ್ನೂರು ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ರಾತ್ರಿ ಸುರಿಯುತ್ತಿರುವ ಮಳೆಯಲ್ಲೇ ಪೊಲೀಸರು ಶ್ವಾನದೊಂದಿಗೆ ಚನ್ನಾಪುರಕ್ಕೆ ಹೋಗಿದ್ದು ಪೊಲೀಸ್ ಶ್ವಾನ ಆರೋಪಿಯನ್ನು ಪತ್ತೆ ಹಚ್ಚಿದೆ. ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಿತ್ಯ ತನ್ನೂರಿನಿಂದ ಸಂತೆಬೆನ್ನೂರಿಗೆ ಬಂದು ಬ್ಯುಟಿಪಾರ್ಲರ್ ನಡೆಸುತ್ತ ಅದೇ ಊರಿನ ಸಂತೋಷ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂಬ ಆರೋಪ ರೂಪಾಳ ಮೇಲಿದೆ. ಪತಿ-ಪತ್ನಿ ಇಬ್ಬರೂ ಸುಖ ಜೀವನ ನಡೆಸುತ್ತಿದ್ದರು. ಒಟ್ಟಿಗೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಆದ್ರೆ ಪತ್ನಿಯ ಬಗ್ಗೆ ಪತಿಗೆ ಬಂದ ಸಂಶಯದಿಂದಾಗಿ ಕೊಲೆಯೊಂದು ನಡೆದಿದೆ. ಬಾಳಿ ಬದುಕಬೇಕಿದ್ದ ಯುವಕ ಕೊಲೆಯಾಗಿದ್ದಾನೆ. ಕೈ ಹಿಡಿದ ಪತ್ನಿ ತವರು ಮನೆ ಪಾಲಾಗಿದ್ದಾಳೆ. ಸದ್ಯ ಅನೈತಿಕ ಸಂಬಂಧ, ಕೊಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ಪಿ ಉಮಾ ಪ್ರಶಾಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ