ದಾವಣಗೆರೆ: ಬೀರಲಿಂಗೇಶ್ವರ ಕಾರ್ತಿಕೋತ್ಸದ ಪ್ರಯುಕ್ತ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಕೆಂಡೋತ್ಸವ ಹಾಗೂ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ. ಬೀರಲಿಂಗೇಶ್ವರ ಅಖಾಡದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯದ ನೂರಾರು ಪೈಲ್ವಾನರು ಭಾಗಿಯಾಗಿದ್ದಾರೆ. ಸದ್ಯ ಸ್ಥಳೀಯ ಶಾಸಕ ಎಂ.ಪಿ.ರೇಣುಕಾಚಾರ್ಯ (MLA Renukacharya) ಕುಸ್ತಿ ಅಖಾಡಕ್ಕೆ ಬಂದು ಪೈಲ್ವಾನರಿಗೆ ಶುಭ ಹಾರೈಸಿದ್ದಾರೆ.
ಸಂಭ್ರಮದಿಂದ ನಡೆದ ಬೀರಲಿಂಗೇಶ್ವರ ಕಾರ್ತೀಕೋತ್ಸವ
ಜಿಲ್ಲೆಯ ಹೊನ್ನಾಳಿ ಪಟ್ಟಣ ಬೀರಲಿಂಗೇಶ್ವರ ಅಂದರೆ ಸುತ್ತಲಿನ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದ ಪುಣ್ಯ ಕ್ಷೇತ್ರ. ರಾಜ್ಯದ ವಿವಿಧ ಭಾಗಗಳಿಂದ ಈಗ ಸಾವಿರಾರು ಭಕ್ತರು ಇಲ್ಲಿ ಬಂದು ಬೀರಲಿಂಗೇಶ್ವರನ ದರ್ಶನ ಪಡೆಯುತ್ತಾರೆ. ಸುತ್ತಲಿನ ಗ್ರಾಮದ ಹತ್ತಕ್ಕೂ ಹೆಚ್ಚು ದೇವರ ಪಲ್ಲಕ್ಕಿಗಳು ಬೀರಲಿಂಗೇಶ್ವರ ಕ್ಷೇತ್ರಕ್ಕೆ ಬರುತ್ತವೆ. ತುಂಗಾಭದ್ರರ ನದಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ತೀಕೋತ್ಸವ ಆರಂಭವಾಗುತ್ತದೆ. ಹೀಗೆ ತುಂಗಾಭದ್ರ ನದಿಯಿಂದ ಪೂಜೆ ಮಾಡಿ ಬಂದ ತಕ್ಷಣವೇ ಹೊನ್ನಾಳಿ ಪಟ್ಟಣದ ದುರ್ಗದ ಬಯಲಿನಲ್ಲಿ ಹಾಕಿದ ಕೆಂಡೋತ್ಸವದಲ್ಲಿ ದೇವರ ಮಕ್ಕಳೆ ಎಂದು ಕರೆಯುವ ಕುಮಾರಸ್ವಾಮೀ ಹಾಗೂ ಅಣ್ಣಪ್ಪ ಸ್ವಾಮೀ ಅವರು ಕೆಂಡ ತುಳಿದು ಹರಕೆ ತಿರಿಸುತ್ತಾರೆ. ಇವರೇ ಮುಂದೆ ಮುಳ್ಳಿನ ಹಾಗೂ ಮೊಳೆಗಳ ಗದ್ದುಗೆ ಮೇಲೆ ಕುಳಿತು ಮುಳ್ಳುಗದ್ದಿಗೆ ಉತ್ಸವ ನಡೆಸುತ್ತಾರೆ. ಈ ಉತ್ಸವದ ಹಿನ್ನೆಲೆ ಸಾವಿರಾರು ಜನ ಭಕ್ತರು ಸುಮಾರು ಐದು ಕಿಲೋ ಮೀಟರ್ ದೂರದ ವರೆಗೆ ಕುಳಿತುಕೊಂಡು ಹರಕೆ ತಿರಿಸುತ್ತಾರೆ.
ಬೀರಲಿಂಗೇಶ್ವರ ಕಾರ್ತೀಕೋತ್ಸವಕ್ಕೆ ಗಾಳಿ ದುರ್ಗಮ್ಮ, ಸುಡಗಾಡು ಸಿದ್ಧಪ್ಪ, ಗೋಪಗೊಂಡನಹಳ್ಳಿ ಬೀರಪ್ಪ, ಹೀಗೆ ಹತ್ತಾರು ಕಡೆಯಿಂದ ದೇವರ ಪಲ್ಲಕ್ಕಿಗಳು ಸೇರಿದ್ದವು. ಇಲ್ಲಿನ ಪ್ರಮುಖ ಆಕರ್ಷಣೆ ಅಂದರೆ ಕೆಂಡೋತ್ಸವ. ದೇವರ ಮಕ್ಕಳು ಕೆಂಡೋತ್ಸವದಲ್ಲಿ ಪಾಲ್ಗೊಂಡ ಬಳಿಕ ಭಕ್ತರು ಕೆಂಡ ತುಳಿದು ತಮ್ಮ ಹರಕೆ ತಿರುಸುತ್ತಾರೆ. ಹೀಗೆ ಮೂರು ದಿನಗಳ ಕಾಲ ಇಡಿ ಹೊನ್ನಾಳಿ ಪಟ್ಟಣದಲ್ಲಿ ಉತ್ಸವ ನಡೆಯುತ್ತದೆ.
ಬೀರಲಿಂಗೇಶ್ವರ ಕಾರ್ತೀಕೋತ್ಸವದ ಮತ್ತೊಂದು ಆಕರ್ಷಣೆ ಅಂದರೆ ಕುಸ್ತಿ. ಈ ಕುಸ್ತಿಯನ್ನು ಕುವೆಂಪು ಅವರ ಕಾದಂಬರಿ ಹಾಗೂ ಜಿ.ಎಸ್ ಶಿವರುದ್ರಪ್ಪ ಅವರ ಕಥೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಹೊನ್ನಾಳಿ ಹೊಡೆತ ಎನ್ನುತ್ತಾರೆ. ಹೊನ್ನಾಳಿ ಹೊಡೆತ ಅಂದರೆ ಇಲ್ಲಿನ ಪೈಲ್ವಾನರು ಡಾವ್ ಹಾಕಿದರೆ ಎದುರಾಳಿ ಮಣ್ಣು ಮುಕ್ಕುವುದು ಖಚಿತ ಎಂದೇ ಅರ್ಥ. ಮೂರು ದಿನಗಳ ಕಾಲ ಇಲ್ಲಿ ಕುಸ್ತಿಗಳು ನಡೆಯುತ್ತವೆ. ಮೊದಲ ದಿನ ಮಕ್ಕಳ ಕುಸ್ತಿ ಹಾಗೂ ಉಳಿದ ಎರಡು ದಿನ ರಾಜ್ಯ ಮಟ್ಟದ ಕುಸ್ತಿಗಳು ನಡೆಯುತ್ತವೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಸಾವಿರಕ್ಕೂ ಹೆಚ್ಚಚ ಪೈಲ್ವಾನರು ಬೀರಲಿಂಗೇಶ್ವರಪ ಕಾರ್ತೀಕೋತ್ಸವದ ಕುಸ್ತಿಯಲ್ಲಿ ಪಾಲ್ಗೊಳ್ಳುತ್ತಾರೆ.
ಕುಸ್ತಿ, ಕೆಂಡೋತ್ಸವ, ತುಂಗಾಭದ್ರ ನದಿ ಪೂಜೆ, ಮುಳ್ಳುಗದ್ದಿಗೆ ಉತ್ಸವ ಹೀಗೆ ಹತ್ತು ಹಲವಾರು ಸಂಪ್ರದಾಯಗಳ ತಾಣವಾದ ಬೀರಲಿಂಗೇಶ್ವರ ಕಾರ್ತೀಕೋತ್ಸವ ಸಂಭ್ರಮಕ್ಕೆ ಇನ್ನೊಂದು ಹೆಸರು. ಹರಕೆಗಾಗಿ ಹಲವಾರು ಕಡೆಯಿಂದ ಬರುವ ಭಕ್ತರು ಹೊನ್ನಾಳಿಗೆ ಬಂದು ಮೂರು ದಿನಗಳ ವಾಸ್ತವ್ಯ ಹೂಡುವುದು ಇನ್ನೊಂದು ವಿಶೇಷ.
ಇದನ್ನೂ ಓದಿ:
ಪುನೀತ್ ನಿಧನದ ಬಳಿಕ ಹೊಸ ಬದಲಾವಣೆಯತ್ತ ಶಾಸಕ ರೇಣುಕಾಚಾರ್ಯ; ಅಂಧ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು
ಮನೆಗೆ ಬಂದವರನ್ನು ಪ್ರೇರೇಪಿಸಿದ ಶಾಸಕ ರೇಣುಕಾಚಾರ್ಯ; 100ಕ್ಕೂ ಹೆಚ್ಚು ಯುವಕರಿಂದ ನೇತ್ರದಾನದ ಪತ್ರಕ್ಕೆ ಸಹಿ
Published On - 9:06 am, Fri, 10 December 21