ದಾವಣಗೆರೆ ಸೆ.23: ಶಿವಮೊಗ್ಗ (Shivamogga) ಭದ್ರಾ ಜಲಾಶಯದಿಂದ (Bhadra Dam) ಭತ್ತದ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ರೈತರ (Farmers Strike) ಪ್ರತಿಭಟನೆ ತೀವ್ರಗೊಂಡಿದೆ. ಹರಿಹರ (Harihar) ತಾಲೂಕಿನ ಮಲೇಬೆನ್ನೂರಿನಲ್ಲಿ ಧರಣಿ ವೇಳೆ ರೈತರೊಬ್ಬರು ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು (Police) ಕೂಡಲೆ ರೈತನ ಕೈಯಿಂದ ಕ್ರಿಮಿನಾಶಕದ ಬಾಟಲ್ ಕಸಿದುಕೊಂಡರು.
ರೈತರ ಪ್ರತಿಭಟನೆಯಿಂದ ಎಚ್ಚೆತ್ತ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಭದ್ರಾ ನೀರಿನ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಇನ್ನೇರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ದಾವಣಗೆರೆ ಜಿಲ್ಲೆ ಭತ್ತದ ಬೆಳೆಗೆ ಭದ್ರಾ ನೀರು ಬರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ನಾನು ಇರುವ ತನಕ ನೂರಕ್ಕೆ ನೂರರಷ್ಟು ನೀರು ಬಂದೇ ಬರುತ್ತದೆ ಎಂದು ಭರವಸೆ ನೀಡಿದರು.
ಶಿವಮೊಗ್ಗದ ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಹರಿಸುವುದನ್ನ ಸ್ಥಗಿತ ಗೊಳಿಸಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಲಾಗಿದೆ. ನೀರು ಬಿಡಲು ಅನುಕೂಲ ಆಗುವಂತೆ ಅಧಿಕಾರಿಗಳು ಜಲಾಶಯದಲ್ಲಿ ನೀರು ಇದೆ ಎಂದು ವರದಿ ಕೊಟ್ಟಿದ್ದಾರೆ. ಇನ್ನೇರಡು ದಿನಗಳಲ್ಲಿ ನೀರು ಬಿಡುತ್ತಾರೆ. ಯಾವುದೇ ಕಾರಣಕ್ಕೆ ನೀರು ಸ್ಥಗಿತ ಮಾಡಲ್ಲ. ರೈತರು ತಾಳ್ಮೆಯಿಂದ ಇರಬೇಕು ಎಂದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹೇಳಿದರು.
ಇದನ್ನೂ ಓದಿ: ಭದ್ರಾ ನೀರು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ರೈತರು ಆತಂಕ ಪಡಬೇಕಾಗಿಲ್ಲ: ಶಾಸಕ ಬಸವರಾಜು ಶಿವಗಂಗಾ
ಭದ್ರಾ ಜಲಾಶಯದಿಂದ ಭತ್ತದ ಬೆಳೆಗೆ ನೀರು ಹರಿಸಬೇಕೋ ಅಥವಾ ಬೇಸಿಗೆ ವೇಳೆ ಅಡಿಕೆ ತೋಟ ಉಳಿಸಿಕೊಳ್ಳಲು ನೀರು ಸಂರಕ್ಷಿಸಿಕೊಳ್ಳುವ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಭತ್ತಕ್ಕೆ ನೀರು ಹರಿಸಿ ಎಂಬುವುದು ದಾವಣಗೆರೆ ಜಿಲ್ಲೆಯ ರೈತರ ಬೇಡಿಕೆಯಾಗಿದೆ. ಆದರೆ ತೋಟಗಳಲ್ಲಿ ಬೆಳೆದು ನಿಂತಿರುವ ಅಡಿಕೆ ಗಿಡಗಳನ್ನು ಸಂರಕ್ಷಿಸಿಕೊಳ್ಳಲು ಬೇಸಿಗೆ ವೇಳೆಯೇ ನೀರು ಬಿಡಿ ಎಂಬುವುದು ತರೀಕೆರೆ ಮತ್ತು ಭದ್ರಾವತಿ ಭಾಗದ ರೈತರ ಮನವಿಯಾಗಿದೆ.
ಇನ್ನು ನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಆಯೋಜಿಸದೆ ಆಗಸ್ಟ್ 10 ರಂದು ಭದ್ರಾ ಬಲದಂಡೆ ಕಾಲುವೆಗೆ ನೀರು ಹರಿಸುವ ತೀರ್ಮಾನ ಕೈಗೊಂಡಿತ್ತು. ಇದರಂತೆ ಸತತ 100 ದಿನಗಳ ಕಾಲ ನೀರು ಹರಿಸುವ ಅಧಿಸೂಚನೆ ಹೊರಡಿಸಲಾಗಿತ್ತು. ಭದ್ರ ಬಲ ಮತ್ತು ಎಡದಂಡೆ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ 53 ಸಾವಿ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.
ಆದರೆ ಬರದ ಛಾಯೆ ಆವರಿಸಿದ್ದರಿಂದ ಅಡಿಕೆ ಬೆಳಗಾರರು ಹೋರಾಟ ನಡೆಸಿ ನೀರು ಹರಿಸದಂತೆ ತಡೆದರು. ಇದರ ಫಲವಾಗಿ ಸೆ.20 ರಂದು ಕಾಲುವೆಗೆ ನೀರು ಹರಿಯುವುದು ಬಂದ್ ಆಯ್ತು. ಇದು ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕಾಲುವೆಯ ಕೊನೆಯ ಹಂತದ ರೈತರಿಗೆ ಇದರಿಂದ ಸಮಸ್ಯೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Sat, 23 September 23