ಹೊನ್ನಾಳಿ: ಬಿಜೆಪಿ ನಾಯಕ ರೇಣುಕಾಚಾರ್ಯ ತಮ್ಮನ ಮಗ ಸಾವು; ಇಂದು ಅಂತ್ಯಸಂಸ್ಕಾರ, ತನಿಖೆ ಚುರುಕು, ರಾಜಕೀಯ ದ್ವೇಷದ ಶಂಕೆ ವ್ಯಕ್ತಪಡಿಸಿದ ಕುಟುಂಬ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 04, 2022 | 8:08 AM

ರಾಜಕೀಯದಲ್ಲಿ ಬೆಳೆಯುತ್ತಿದ್ದ ಚಂದ್ರಶೇಖರ್​ನನ್ನು ವ್ಯವಸ್ಥಿತವಾಗಿ ಮುಗಿಸಿದ್ದಾರೆ. ಚಂದ್ರಶೇಖರ್​​ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.

ಹೊನ್ನಾಳಿ: ಬಿಜೆಪಿ ನಾಯಕ ರೇಣುಕಾಚಾರ್ಯ ತಮ್ಮನ ಮಗ ಸಾವು; ಇಂದು ಅಂತ್ಯಸಂಸ್ಕಾರ, ತನಿಖೆ ಚುರುಕು, ರಾಜಕೀಯ ದ್ವೇಷದ ಶಂಕೆ ವ್ಯಕ್ತಪಡಿಸಿದ ಕುಟುಂಬ
ದುಃಖತಪ್ತ ರೇಣುಕಾಚಾರ್ಯ ಮತ್ತು ಮೃತ ಚಂದ್ರಶೇಖರ್
Follow us on

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತ ದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಚಂದ್ರಶೇಖರ್ ಅವರ ಶವವು ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆಯಾಗಿದೆ. ಮೊಬೈಲ್ ಸಹ ಕಾರಿನಲ್ಲಿಯೇ ಸಿಕ್ಕಿದೆ. 14 ಕಿಲೋಮೀಟರ್ ದೂರವನ್ನು ಚಂದ್ರಶೇಖರ್ ಕೇವಲ ಎಂಟು ನಿಮಿಷಗಳಲ್ಲಿ ಕ್ರಮಿಸಿರುವ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅ 30 ರಂದು ರಾತ್ರಿ 11.58ಕ್ಕೆ ನ್ಯಾಮತಿ ಪಟ್ಟಣದ ಸಿಸಿ ಕ್ಯಾಮೆರಾದಲ್ಲಿ ಕಾರ್ ಸಂಚರಿಸಿರುವುದು ದಾಖಲಾಗಿದೆ. 12.06ಕ್ಕೆ ಚಂದ್ರಶೇಖರ ಅವರ ಮೊಬೈಲ್ ಸ್ವಿಚ್​ ಆಫ್ ಆಗಿದೆ. ಕೇವಲ ಎಂಟು ನಿಮಿಷಗಳಲ್ಲಿ ನ್ಯಾಮತಿಯಿಂದ ದುರ್ಘಟನೆ ನಡೆದ ಸ್ಥಳಕ್ಕೆ ಚಂದ್ರಶೇಖರ್ ಅವರಿದ್ದ ಕಾರು ತಲುಪಿದೆ. ಅಪಘಾತದ ನಂತರ ಕಾರಿನಲ್ಲಿದ್ದ ಎರಡು ಏರ್​ಬ್ಯಾಗ್​ಗಳೂ ಓಪನ್ ಆಗಿವೆ. ಕಾರಿನಲ್ಲಿ ಇನ್ನೊಬ್ಬ ವ್ಯಕ್ತಿಯಿದ್ದು, ಅದು ಕಾಲುವೆಯಲ್ಲಿ ಬಿದ್ದ ವೇಗಕ್ಕೆ ಇನ್ನೊಬ್ಬ ವ್ಯಕ್ತಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ನಿವಾಸದಲ್ಲಿ ಚಂದ್ರಶೇಖರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಂದೂರಲ್ಲಿ ಚಂದ್ರಶೇಖರ್​ ಅಂತ್ಯಸಂಸ್ಕಾರಕ್ಕೆ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಹೊನ್ನಾಳಿ ನಿವಾಸದಲ್ಲಿ ಮಧ್ಯಾಹ್ನ 12ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಮಧ್ಯಾಹ್ನ 12 ಗಂಟೆಯ ನಂತರ ಮಠದ ವೃತ್ತದಿಂದ ಅಂತಿಮಯಾತ್ರೆ ಆರಂಭವಾಗಲಿದ್ದು, ಗೊಲ್ಲರಹಳ್ಳಿ ಮಾರ್ಗವಾಗಿ ಮಾಸಡಿ, ತರಗನಹಳ್ಳಿ, ಸಿಂಗಟಗೆರೆ, ಹನುಮನಹಳ್ಳಿ ಮಾರ್ಗವಾಗಿ ಹುಟ್ಟೂರು ಕುಂದೂರಿಗೆ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ರೇಣುಕಾಚಾರ್ಯ ಅವರ ತಂದೆ, ತಾಯಿ ಸಮಾಧಿ ಪಕ್ಕದಲ್ಲೇ ವೀರಶೈವ ವಿಧಗಳ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.

‘ಚಂದ್ರಶೇಖರ್​ ಕಡಿಮೆ ಅವಧಿಯಲ್ಲಿ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದ. ಚಂದ್ರಶೇಖರ್​ ಸಾವಿನ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತನಿಖೆ ಮಾಡಿಸುತ್ತಾರೆ. ಇಂದು ಮಧ್ಯಾಹ್ನ 3ಕ್ಕೆ ಮನೆಯಿಂದ ಮೆರವಣಿಗೆಯಲ್ಲಿ ಕೊಂಡೊಯ್ದು ಕುಂದೂರು ಗ್ರಾಮದ ತೆಂಗಿನತೋಟದಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿಳಿಸಿದರು.

ರೇಣುಕಾಚಾರ್ಯ ಅವರ ಮನೆ ಎದುರು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಬಂಧಿಕರು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆಯುವ ವೇಳೆ ಕಣ್ಣೀರು ಹಾಕುತ್ತಿದ್ದಾರೆ. ರೇಣುಕಾಚಾರ್ಯ ಅವರು ರಾತ್ರಿಯಿಡೀ ಶವದ ಮುಂದೆ ಕುಳಿತು ಕಣ್ಣೀರಿಟ್ಟರು. ಚಂದ್ರಶೇಖರ್​ನನ್ನು ಕಳೆದುಕೊಂಡು ಕುಟುಂಬ ಸದಸ್ಯರು ಆಘಾತದಲ್ಲಿದ್ದಾರೆ. ಅಂತಿಮದರ್ಶನಕ್ಕೆ ಬರುವವರಿಗಾಗಿ ಕೂರಲು ಮನೆ ಬಳಿ ಆಸನದ ವ್ಯವಸ್ಥೆ ಮಾಡಲಾಗಿದೆ.

‘ನನ್ನ ಮಗ ಚಂದ್ರು ಮಲಗಿದ್ದಾನೆ. ಅವನನ್ನು ನಾನು ಶವ ಎನ್ನುವುದಿಲ್ಲ. ನಾನು ಜನರ ಜನಪ್ರಿಯತೆಯನ್ನು ಪಡೆಯಲು ತುಂಬಾ ವರ್ಷ ಬೇಕಾಯಿತು. ಅವನು ಕಳೆದ ಒಂದು ವರ್ಷದಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ. ಕೊಲೆಯ ಬಗ್ಗೆ ನಾನು ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿವೆ. ನನ್ನ ಮಗನ ಕಾರನ್ನು ಪುರಸಭೆ ಸದಸ್ಯರು ಮುಖಂಡರಿಂದ ಎಲ್ಲರೂ ಹುಡುಕಿದ್ದಾರೆ. ಸಿಎಂ ಮತ್ತು ಗೃಹ ಸಚಿವರು ತನಿಖೆ ಮಾಡಿಸುವ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ಚಂದ್ರಶೇಖರ್ ಮೃತ ದೇಹವು ಕಾರಿನ ಹಿಂಬದಿಯ ಸೀಟಿನಲ್ಲಿ ಪತ್ತೆಯಾಗಿತ್ತು. ಹೀಗಾಗಿ ಕಾರು ಓಡಿಸುತ್ತಿದ್ದವರು ಯಾರು ಎನ್ನುವ ಅನುಮಾನ ಕಾಡುತ್ತಿದೆ. ಮಾರ್ಗದಲ್ಲಿರುವ ಮತ್ತಷ್ಟು ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲಿಸಲು ಪೊಲೀಸರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ದ್ವೇಷದ ಕೊಲೆ: ಕುಟುಂಬದ ಶಂಕೆ

ಬಿಜೆಪಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರು ಇದೊಂದು ರಾಜಕೀಯ ದ್ವೇಷದ ಕೊಲೆ ಎನ್ನುತ್ತಿದ್ದಾರೆ. ಚಂದ್ರು​ ತೆರಳುತ್ತಿದ್ದ ಕಾರನ್ನು ಸ್ಪಿಫ್ಟ್​ ಕಾರೊಂದು ಹಿಂಬಾಲಿಸುತ್ತಿದ್ದ ದೃಶ್ಯವು ಸಿಸಿಟಿವಿಯಲ್ಲಿ ದಾಖಲಅಗಿದೆ. ರಾಜಕೀಯದಲ್ಲಿ ಬೆಳೆಯುತ್ತಿದ್ದ ಚಂದ್ರಶೇಖರ್​ನನ್ನು ವ್ಯವಸ್ಥಿತವಾಗಿ ಮುಗಿಸಿದ್ದಾರೆ. ಚಂದ್ರಶೇಖರ್​​ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಚಂದ್ರಶೇಖರ್​ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. ಆತ ​ ಬಹಳ ಸೌಮ್ಯಸ್ವಭಾವದ ವ್ಯಕ್ತಿ ಎಂದು ಕುಟುಂಬ ಸದಸ್ಯರು ಕಣ್ಣೀರು ಮಿಡಿದರು.

Published On - 8:08 am, Fri, 4 November 22