
ದಾವಣಗೆರೆ, ಜನವರಿ 16: ಹೋರಿ ಹಬ್ಬಕ್ಕೆಂದು ತೆರಳಿದ್ದ ವ್ಯಕ್ತಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ಸಮೀಪ ನಡೆದಿದೆ. ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಬೈರನಹಳ್ಳಿ ಗ್ರಾಮದ ಚೇತನ್ (31) ಮೃತ ವ್ಯಕ್ತಿಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದು, ಯುವಕನ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
10 ವರ್ಷಗಳಿಂದ ಬೆಂಗಳೂರಿನ ಹೋಟೇಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಚೇತನ್ ಕಳೆದ 4 ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ. ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಕನಸು ಕಂಡು, ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಕುಳಗಟ್ಟೆ ಗ್ರಾಮದಲ್ಲಿ ಮಾರಿ ಹಬ್ಬ ಹಿನ್ನೆಲೆ ಜ. 5ರಂದು ಚೇತನ್ ಅಲ್ಲಿಗೆ ಹೋಗೋದಾಗಿ ಹೇಳಿ ತೆರಳಿದ್ದ. ಆದ್ರೆ ಚೇತನ್ ಶವ ಸುಟ್ಟ ರೀತಿಯಲ್ಲಿ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ಸಮೀಪದ ಅಡಿಕೆ ತೋಟದಲ್ಲಿ ಪತ್ತೆಯಾಗಿದೆ. ದೇಹ ಸುಟ್ಟು ಕರಕಲಾಗಿದ್ದ ಕಾರಣ ಆರಂಭದಲ್ಲಿ ಗುರುತು ಪತ್ತೆ ಪೊಲೀಸರಿಗೂ ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಹೊನ್ನಾಳಿ ಪೊಲೀಸರು ಮೃತದೇಹದ ಫೋಟೋವನ್ನು ಶೇರ್ ಮಾಡಿದ್ದರು. ಇದನ್ನು ಚೇತನ್ ಚಿಕ್ಕಪ್ಪನ ಮಗ ಲೋಕೋಶ್ ಗಮನಿಸಿದ್ದು, ಪೊಲೀಸರ ಜೊತೆ ತೆರಳಿ ಮೃತದೇಹ ಚೇತನ್ನದ್ದು ಎನ್ನುವುದನ್ನು ಖಚಿತಪಡಿಸಿದ್ದಾನೆ.
ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ; ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ
ಇನ್ನು ಚೇತನ್ ಕೆಲಸ ಮಾಡಿಕೊಂಡಿದ್ದ ಹೋಟೆಲ್ ಆತನ ಊರಿನಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಊರಿನ ಪಕ್ಕದಲ್ಲಿಯೇ ಮಾರಿ ಹಬ್ಬ ಇರುವ ಕಾರಣ ಅದನ್ನು ನೋಡಲು ಚೇತನ್ ಹೋಗಿದ್ದನಾದರೂ ಆತನ ಜೊತೆ ಯಾರಿದ್ದರು ಎನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ. ಕೊಂದು ಮೃತದೇಹವನ್ನು ಸುಟ್ಟಿರುವ ಹಲವು ಪ್ರಕರಣಗಳ ಆಧಾರದಲ್ಲಿ, ಈ ಘಟನೆಯೂ ಯಾವುದೋ ದ್ವೇಷದ ಕಾರಣಕ್ಕೆ ನಡೆದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಮತ್ತು FSL ವರದಿ ಬಂದ ಬಳಿಕ ಚೇತನ್ ಸಾವಿನ ಕಾರಣದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.