ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿ 5 ದಿನ ಕಳೆದಿವೆ.. ಆದರೂ ಕೂಡ ಇದುವರೆಗೂ ಯಾವುದೇ ಸುಳಿ ಸಿಗುತ್ತಿಲ್ಲ. ಈ ಪ್ರಕರಣ ದಾವಣಗೆರೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದ್ದರಿಂದ ಪೊಲೀಸರು ಅಲರ್ಟ್ ಆಗಿದ್ದು, ತನಿಖೆಗಾಗಿ ನಾಲ್ಕು ತಂಡ ರಚಿಸಿದ್ದಾರೆ. ಇನ್ನು ಪುತ್ರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಅನುಮಾನವೊಂದನ್ನು ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಇಂದು(ನ.03) ಮಾತನಾಡಿದ ರೇಣುಕಾಚಾರ್ಯ, ನನ್ನ ಮಗನ ವ್ಯವಸ್ಥಿತ ಕಿಡ್ನಾಪ್ ಆಗಿದೆ. ನನ್ನ ಮಗನನ್ನ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟರು ನಾನು ಅದನ್ನ ಪೂರೈಸಲು ಸಿದ್ದ. ವ್ಯವಸ್ಥಿವಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿಸಿದ್ದಾರೆ. ಇದು ವ್ಯವಸ್ಥಿತವಾಗಿ ಅಪಹರಣ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಚಂದ್ರು ಎಲ್ಲಿದ್ದಿಯೋ..ಬಾರೋ… ಅಣ್ಣನ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಾಸಕ ರೇಣುಕಾಚಾರ್ಯ
ಫೋನ್ ಮಾಡಲಿ. ಯಾವುದೇ ಬೇಡಿಕೆ ಇದ್ದರೂ ತಿಳಿಸಿ. ಮಗ ಚಂದ್ರಶೇಖರ್ಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. ಮಗನ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವೆ. ಸೂಕ್ಷ್ಮವಾಗಿ ಬಹುಮಾನ ನೀಡುವೆ. ಅಪಹರಿಸಿದವರು ಬೇಡಿಕೆ ಇದ್ರೆ ಹೇಳಲಿ ಎಂದರು.
ಚಂದ್ರಶೇಖರ್ ಸುಳಿವು ಸಿಗುತ್ತಿಲ್ಲ
ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಭಾನುವಾರ ರಾತ್ರಿ 11.30 ರಿಂದ ನಾಪತ್ತೆಯಾಗಿದ್ದು ಇದುವರೆಗೂ ಕೂಡ ಯಾವುದೇ ಸುಳಿವು ಸಿಗುತ್ತಿಲ್ಲ.. ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ವಾಪಸ್ ಆಗಿದ್ದ. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದಾನೆ. 11.30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಸಿಗ್ನಲ್ ಟ್ರೇಸ್ ಆಗಿಲ್ಲ. ಅಲ್ಲದೆ ಶಿವಮೊಗ್ಗ ದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ ಸಿಸಿ ಕ್ಯಾಮರಾ ಪುಟೇಜ್ ಮಾತ್ರ ಸಿಕ್ಕಿದೆ.. ಆದರೆ ಸುರಹೊನ್ನೆಯಿಂದ ಹೊನ್ನಾಳಿ ಗೆ ಬಂದ ಮಾಹಿತಿ ಸಿಗುತ್ತಿಲ್ಲ.. ಆದರೆ ಚಂದ್ರಶೇಖರ್ ಮೊಬೈಲ್ ಮಾತ್ರ ಹೊನ್ನಾಳಿ ಪಟ್ಟಣದ ಸರ್ಕಲ್ ನಲ್ಲಿ ಸ್ವಿಚ್ ಆಫ್ ಆಗಿದೆ..
ಇನ್ನು ಶಾಸಕ ರೇಣುಕಾಚಾರ್ಯ ಮಾತ್ರ ಮಗನನ್ನು ನೆನೆದು ಗಳಗಳನೆ ಅಳುತ್ತಿದ್ದಾರೆ.. ಬೆಳಗ್ಗೆಯಿಂದ ರೇಣುಕಾಚಾರ್ಯ ಆಪ್ತರು ಸಂಬಂಧಿಕರು ಹಾಗೂ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಧೈರ್ಯವನ್ನು ತುಂಬುತ್ತಿದ್ದಾರೆ. ಅಲ್ಲದೆ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಕರೆ ಮಾಡಿ ದೈರ್ಯ ತುಂಬಿದ್ದಾರೆ.
ಒಟ್ಟಾರೆಯಾಗಿ ಶಾಸಕ ರೇಣುಕಾಚಾರ್ಯ ಸಹೋದರ ಪುತ್ರನ ನಾಪತ್ತೆ ಪ್ರಕರಣ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿದ್ದು, ಯಾವ ಕಡೆ ಹೋಗಿದ್ದಾನೆ? ಎಲ್ಲಿ ಹೋಗಿದ್ದಾನೆ? ಎನ್ನುವುದು ಕೂಡ ಯಾರಿಗೂ ಒಂದು ಸುಳಿವೂ ಸಹ ಸಿಗುತ್ತಿಲ್ಲ. ಪೊಲೀಸರು ಕೂಡ ಈ ಪ್ರಕರಣವನ್ನು ಚಾಲೆಂಜ್ ಆಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
Published On - 2:55 pm, Thu, 3 November 22