ದಾವಣಗೆರೆ: ಆನಾರೋಗ್ಯಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Jul 23, 2024 | 9:45 AM

ಮಕ್ಕಳಿಲ್ಲದೆ ಒಂಟಿ ಜೀವನ ನಡೆಸುತ್ತಿದ್ದ ದಂಪತಿಗೆ ವಿವಿಧ ಕಾಯಿಲೆಗಳಿದ್ದವು. ಮುಂದೆ ನಮ್ಮನ್ನು ನೋಡಿಕೊಳ್ಳುವವರ್ಯಾರು ಎಂದು ಬೇಸತ್ತು ಇಬ್ಬರೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ: ಆನಾರೋಗ್ಯಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ
ಷಣ್ಮುಖಪ್ಪ, ಇಂದ್ರಮ್ಮ
Follow us on

ದಾವಣಗೆರೆ, ಜುಲೈ.23: ಆನಾರೋಗ್ಯಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಷಣ್ಮುಖಪ್ಪ(65), ಇಂದ್ರಮ್ಮ(50) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಷಣ್ಮುಖಪ್ಪ ಮೃತಪಟ್ಟಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದ್ರಮ್ಮ ಪ್ರಾಣ ಬಿಟ್ಟಿದ್ದಾರೆ.

ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ದಂಪತಿಗೆ ಮಕ್ಕಳಿರಲಿಲ್ಲ. ಇಳಿ ವಯಸ್ಸಿನಲ್ಲಿ ನಮ್ಮ ಆರೈಕೆ ಮಾಡುವರು ಯಾರೆಂದು ಬೇಸತ್ತು ಇಬ್ಬರೂ ಕ್ರಿಮಿನಾಶಕ ಸೇವಿಸಿದ್ದಾರೆ. ವಿಚಾರ ತಿಳಿದ ಅಕ್ಕ-ಪಕ್ಕದ ಮನೆಯವರು ತಕ್ಷಣ ದಂಪತಿಯನ್ನು ಆಸ್ಪತ್ರೆಗೆ ಸೇರಿಸಲು ಶಿವಮೊಗ್ಗಕ್ಕೆ ತೆರಳಿದ್ದಾರೆ. ಈ ವೇಳೆ ಷಣ್ಮುಖಪ್ಪ ಮಾರ್ಗ ಮಧ್ಯೆ ಮೃತಪಟ್ಟಿದ್ದು ಇಂದ್ರಮ್ಮ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಇಂದ್ರಮ್ಮ ಕೂಡ ಪ್ರಾಣ ಬಿಟ್ಟಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಟ್ ಌಂಡ್​ ರನ್​ಗೆ ಯುವಕ ಬಲಿ

ಬೆಂಗಳೂರಿನ ಕನ್ನಿಂಗ್ ಹ್ಯಾಮ್​​ ರಸ್ತೆಯಲ್ಲಿ ನಿನ್ನೆ ರಾತ್ರಿ 10.30ಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಬೈಕ್​ ಸವಾರ ಆಯುಷ್ ಅಪ್ಪಯ್ಯ(21) ಮೃತ ದುರ್ದೈವಿ. ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ತೆರಳಿದ್ದ ಆಯುಷ್ ಬೈಕ್ ವಕ್ಫ್ ಬೋರ್ಡ್ ಬಳಿ ಬರುತ್ತಿದ್ದಂತೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಬೈಕ್​ಗೆ ಡಿಕ್ಕಿ ಹೊಡೆದು ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಅಪಘಾತದಿಂದ ಆಯುಷ್ ತಲೆಗೆ ಗಂಭೀರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದಲ್ಲೇ ಆಯುಷ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಆರೋಪಿ ಪತ್ತೆಗೆ ಹೈಗ್ರೌಂಡ್ಸ್ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಖ್ಯಾತ ಜನಪದ ಗಾಯಕ, ಸಾಹಿತಿ, ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ ನಿಧನ

ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ

ಬೆಂಗಳೂರಿನ ಯಶವಂತಪುರ To ತುಮಕೂರು ತಡೆಗೋಡೆ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಘಟನಾಸ್ಥಳಕ್ಕೆ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ವ್ಯಕ್ತಿಯ ಗುರುತು ಪತ್ತೆ ಹಚ್ಚುತ್ತಿದ್ದಾರೆ.

ಮಹಿಳೆ ಶವ ಪತ್ತೆ

ನಾಪತ್ತೆಯಾಗಿದ್ದ ಮಹಿಳೆಯ ಶವ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗೇರುತೋಟದ ಬಳಿ ಪತ್ತೆಯಾಗಿದೆ. ಜುಲೈ 16 ರಂದು ನಾಪತ್ತೆಯಾಗಿದ್ದ ಮಹಿಳೆಯ ಶವ ಭದ್ರಾ ನದಿಯಲ್ಲಿ ಪತ್ತೆಯಾಗಿದೆ. NR ಪುರ ಪಟ್ಟಣದ ಶಾರದಾ (55) ಮೃತ ದುರ್ದೈವಿ. NR ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಳಸ‌ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಲಾಗಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ