ದಾವಣಗೆರೆ, ಜು.18: ಜಿಲ್ಲೆಯ ಹರಿಹರ ತಾಲೂಕಿನ ಪುಣ್ಯಕ್ಷೇತ್ರ ಉಕ್ಕಡಗಾತ್ರಿ(Ukkadagatri) ಅಜ್ಜಯ್ಯನ ದರ್ಶನಕ್ಕೆ ಹಲವಾರು ವರ್ಷ ಭಕ್ತರು ತೆಪ್ಪದಲ್ಲಿ ಹೋಗುತ್ತಿದ್ದರು. ಈಗ ಸೇತುವೆ ಆಗಿದೆ. ಆದ್ರೆ, ಮಳೆಗಾಲ ಆರಂಭವಾದರೆ ಸಾಕು ಇಡಿ ಗ್ರಾಮವೇ ದ್ವೀಪ ಆಗುತ್ತದೆ. ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತದೆ. ಎಲ್ಲಿ ನೋಡಿದರಲ್ಲಿ ನೀರೇ ಕಂಡು ಬರುತ್ತದೆ. ಇದು ದಾವಣಗೆರೆ ಜಿಲ್ಲೆಯ ಕೊನೆಯ ಹಳ್ಳಿಯಾಗಿದ್ದು, ಹೀಗಾಗಿ ವರ್ಷದಲ್ಲಿ ಮೂರು ತಿಂಗಳ ಕಾಲ ದ್ವೀಪವಾಗುತ್ತದೆ.
ಒಂದು ಕಡೆಯಿಂದ ಪತ್ತೇಪುರ ಸೇತುವೆ, ಇನ್ನೊಂದು ಬದಿಯಿಂದ ತುಮ್ಮಿನಕಟ್ಟೆ ಹಳ್ಳದ ನೀರು ಜೊತೆಗೆ ಮತ್ತೊಂದು ಹಳ್ಳದ ನೀರು ಬಂದು ಗ್ರಾಮವನ್ನ ಸುತ್ತುವರೆಯುತ್ತದೆ. ಇದು ಪರಿಹಾರವೇ ಇಲ್ಲದ ಸಮಸ್ಯೆ ಆಗಿ ಬಿಟ್ಟಿದೆ. ತುಂಗಭದ್ರ ನದಿ ಆಚೆಗಿನ ಗ್ರಾಮಗಳು ದಾವಣಗೆರೆ ಜಿಲ್ಲೆಗೆ ಸೇರಿವೆ. ಈ ಕಡೆ ಇರುವ ಗ್ರಾಮಗಳು ಹಾವೇರಿ ಜಿಲ್ಲೆಗೆ ಸೇರಿವೆ. ಆದ್ರೆ, ಉಕ್ಕಡಗಾತ್ರಿ ಒಂದು ಗ್ರಾಮ ಮಾತ್ರ ದಾವಣಗೆರೆ ಜಿಲ್ಲೆಗೆ ಸೇರಿದೆ. ಸುತ್ತಲು ಹಾವೇರಿ ಜಿಲ್ಲೆಯ ಹಳ್ಳಿಗಳೇ ಇರುವುದರಿಂದ ಎನೋ ದಾವಣಗೆರೆ ಜಿಲ್ಲಾಡಳಿತ ಮಾತ್ರ ಇಡಿ ಗ್ರಾಮವನ್ನ ಮರೆತು ಬಿಟ್ಟಿದೆ. ಈ ಹಿಂದೆ ಎರಡು ವಿಧಾನ ಸಭೆ ಚುನಾವಣೆ ವೇಳೆ ಮತದಾನ ಬಹಿಷ್ಕಾರ ಸಹ ಮಾಡಲಾಗಿತ್ತು. ಆದ್ರೆ ಪರಿಹಾರ ಮಾತ್ರ ಸಿಕ್ಕಿಲ್ಲ.
ಇದನ್ನೂ ಓದಿ:ಕೊಡಗು: ಮಳೆ ಆರ್ಭಟಕ್ಕೆ ಜಲ ದಿಗ್ಬಂಧನವಾದ ಕುಟುಂಬ; ಅಸಹಾಯಕರಾಗಿ ನಿಂತಿರೋ ದಂಪತಿ
ಇನ್ನು ಇಲ್ಲಿನ ಜನ ಜಲ ದಿಗ್ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ಈಗ ಇರುವ ಎರಡು ಸೇತುವೆಗಳ ಎತ್ತರ ಹೆಚ್ಚಿಸಬೇಕಾಗಿದೆ. ಹೀಗೆ ಸೇತುವೆ ಎತ್ತರ ಹೆಚ್ಚಿಸಿದ್ರೆ ಮಾತ್ರ ಇವರಿಗೆ ವರ್ಷದ ಹನ್ನೇರಡು ತಿಂಗಳು ಸಹ ಯಾವುದೇ ತೊಂದರೆ ಆಗಲ್ಲ. ಆದ್ರೆ, ಈಗ ಮಾತ್ರ ವರ್ಷಕ್ಕೆ ಮೂರು ತಿಂಗಳ ಮಾತ್ರ ಇವರೆಲ್ಲಾ ಜೀವ ಕೈಯಲ್ಲಿ ಹಿಡಿದು ಬದುಕಬೇಕಾಗಿದೆ. ಪುಣ್ಯಕ್ಷೇತ್ರ ದರ್ಶನಕ್ಕೆ ಬರುವ ಜನ ಪ್ರತಿನಿಧಿಗಳು, ಈ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂಧಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ