ಕೊಡಗು: ಮಳೆ ಆರ್ಭಟಕ್ಕೆ ಜಲ ದಿಗ್ಬಂಧನವಾದ ಕುಟುಂಬ; ಅಸಹಾಯಕರಾಗಿ ನಿಂತಿರೋ ದಂಪತಿ
ಕರ್ನಾಟಕ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ವರುಣಾರ್ಭಟಕ್ಕೆ ರಸ್ತೆಗಳು ಮುಳುಗಡೆ ಆಗಿದ್ದು, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡ ಕುಸಿತದ ಆತಂಕ ಶುರುವಾಗಿದೆ. ಈ ಮಧ್ಯೆ ಕೊಯನಾಡು ಗ್ರಾಮದಲ್ಲಿ ಕುಟುಂಬವೊಂದು ಜಲ ದಿಗ್ಬಂಧನಕ್ಕೆ ಒಳಗಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಕೊಡಗು, ಜು.17: ಮಳೆಯ ಆರ್ಭಟಕ್ಕೆ ಅಕ್ಷರಶಃ ಕರುನಾಡು ನಲುಗಿದೆ. ಅದರಂತೆ ಮಡಿಕೇರಿ (Madikeri) ತಾಲ್ಲೂಕಿನ ಸಂಪಾಜೆ ಗ್ರಾಮದ ಬಂಡಡ್ಕ ಗ್ರಾಮದಲ್ಲಿ ನಾಲ್ಕು ಕುಟುಂಬ ವಾಸಿಸುತ್ತವೆ. ಇವರಿಗೆ ಮಳೆಗಾಲ ಬಂತೆಂದರೆ ‘ಪಯಸ್ವಿನಿ ನದಿ’ ದಾಟಲು ಶಾಶ್ವತ ಸೇತುವೆ ಇಲ್ಲ. ನದಿ ನೀರು ಕಡಿಮೆ ಇದ್ದಾಗ ನದಿಯನ್ನ ಕಾಲ್ನಡಿಗೆಯಲ್ಲೇ ದಾಟಿ ಬರುತ್ತಾರೆ. ಆದ್ರೆ, ಇದೀಗ ಪ್ರವಾಹ ಜಾಸ್ತಿ ಇರುವುದರಿಂದ ನದಿ ದಾಟಲಾಗುವುದಿಲ್ಲ. ಸಧ್ಯ ಇಲ್ಲಿ ಪ್ರವಾಹದ ಕಾರಣ ಮೂರು ಕುಟುಂಬಗಳು ಈಗಾಗಲೇ ಊರು ತ್ಯಜಿಸಿವೆ. ಆದ್ರೆ, ವಯಸ್ಸಾದ ತಾಯಿ ಇರುವ ಕಾರಣ ಲಿಂಗಪ್ಪ ದಂಪತಿ ಅಲ್ಲೇ ಉಳಿದುಕೊಂಡಿದ್ದಾರೆ. ಇವರಿಗಾಗಿ ಕೆಲ ದಿನಗಳ ಹಿಂದೆ ಕಾಲು ಸಂಕ ನಿರ್ಮಾಣ ಮಾಡಲು ಗ್ರಾಮಸ್ಥರು ಮುಂದಾಗಿದ್ದರು. ಆದ್ರೆ, ಕಾಲು ಸಂಕ ನದಿಯಲ್ಲಿ ಕೊಚ್ಚಿ ಹೋಗಿದ್ದು, ಸಧ್ಯ ಈ ಕುಟುಂಬಕ್ಕೆ ಜಲದಿಗ್ಬಂಧನ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೂ ಕುಸಿತದ ಆತಂಕ
ಇತ್ತ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೂ ಕುಸಿತದ ಆತಂಕ ಎದುರಾಗಿದೆ. ಹೌದು, ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪ 2018ರಲ್ಲಿ ಬೃಹತ್ ಭೂ ಕುಸಿತವಾಗಿತ್ತು. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿತ್ತು. ಇದೀಗ ಅದೇ ಸ್ಥಳದಲ್ಲಿ ಬೃಹತ್ ಬೆಟ್ಟ ನಿಧಾನಕ್ಕೆ ಜರಿಯಲಾರಂಭಿಸಿದೆ. ಗುಡ್ಡದ ಮೇಲಿನಿಂದ ಕಲ್ಲು ಮಣ್ಣು ರಸ್ತೆಗೆ ಉರುಳುತ್ತಿವೆ. ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಪರ್ಕ ಕಡಿತವಾಗುವ ಆತಂಕವಿದೆ. ಹಾಗಾಗಿ ವಾಹನ ಸವಾರರು ಆತಂಕದಲ್ಲೇ ಹೆದ್ದಾರಿಯಲ್ಲಿ ಸಂಚರಿಸುವಂತಾಗಿದೆ.
ಇದನ್ನೂ ಓದಿ:ದಕ್ಷಿಣ ಕನ್ನಡದಲ್ಲಿ ಮಳೆ ಅವಾಂತರ; ಹಲವೆಡೆ ಜಲ ದಿಗ್ಬಂಧನ, ಗುಡ್ಡ ಕುಸಿತ
ಉಳಿದಂತೆ ಗ್ರಾಮೀಣ ಕೊಡಗು ಮಳೆಯಿಂದ ತತ್ತರಿಸಿಹೋಗಿದೆ. ಹತ್ತಾರು ಕಡೆ ಮರಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ ತಲೆದೋರಿದೆ. ಇನ್ನೂ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆಯಾಗುವ ಸಂಭವವಿದೆ. ಹಾಗಾಗಿ ಜನಜೀವನ ಇನ್ನೂ ತತ್ತರವಾಗುವ ಸಂಭವವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ