ಅವಳು ಆ ಮಗುವಿಗೆ ಜನ್ಮ ನೀಡಿ 12 ದಿನವಾಗಿತ್ತು. ತಾಳಿ ಕಟ್ಟಿದ ಗಂಡ ಸಾವನ್ನಪ್ಪಿದ್ದ. ಪತಿ ಅಗಲಿಕೆ ಬೇಸರ ಒಂದು ಕಡೆ ತನ್ನ ಕರುಳಿನ ಕುಡಿ ಇನ್ನೊಂದು ಕಡೆ. ದಿಟ್ಟತನ ಮಾಡಿ ಮಗಳನ್ನ ಓದಿಸಿ ಇಂಜಿನಿಯರ್ ಮಾಡಿದ್ದಳು ತಾಯಿ. ಕೆಲ ವರ್ಷ ಮಗಳ ಖಾಸಗಿ ಕಂಪನಿಯಲ್ಲಿ ಸೇವೆ ಕೂಡಾ ಸಲ್ಲಿದ್ದಳು. ವಿಧಿಯಾಟವೇ ಬೇರೆ ಆಗಿತ್ತು, ಕ್ಯಾನ್ಸರ್ (Cancer) ಎಂಬ ರೋಗ ಮುದ್ದಿನ ಮಗಳನ್ನು ಬಲಿ ತೆಗೆದುಕೊಂಡಿತು. ಆದ್ರೆ ತಾಯಿಗೆ ಮಾತ್ರ ಮಗಳನ್ನ ಬಿಟ್ಟು ಬದುಕಿರಲು ಸಾಧ್ಯವಿರಲಿಲ್ಲ. ಇಲ್ಲಿ ನೋಡಿ ಮಗಳಿಗಾಗಿ ಮಹಾ ತಾಯಿ (Mother) ಮಾಡಿದ ಕೆಲ್ಸಾ ಇಲ್ಲಿದೆ. ತಾಯಿ ಮಗಳ ಪ್ರೀತಿ – ಗ್ರೇಟ್ ಸ್ಟೋರಿ ನೋಡಿ.
ಅವರು ಶಿಕ್ಷಕಿಯಾಗಿ ಮಕ್ಕಳಿಗೆ ವಿದ್ಯಾದಾನ ಮಾಡುವ ಮುಖೇನಾ ಪರರ ಮಕ್ಕಳ ಬದುಕನ್ನು ಸುಂದರವಾಗಿಸಿದ ಶಿಕ್ಷಕಿ. ತನ್ನ ಮುದ್ದಿನ ಮಗಳಿಗೂ ಬಿಇ ಶಿಕ್ಷಣ ಕೊಡಿಸಿದ್ದರು. ಮಗಳಿಗೆ ಮದುವೆ ಮಾಡ್ಬೇಕೆಂದು ಕನಸು ಕಂಡಿದ್ದರು. ಆದರೆ ಅಮ್ಮ ತನ್ನ ಮಗಳ ಬಗ್ಗೆ ಕಂಡಿದ್ದ ಕನಸುಗಳಿಗೆ ಕ್ಯಾನ್ಸರ್ ಎಂಬ ಮಹಾಮರಿ ಕೊಳ್ಳಿಯಿಟ್ಟಿತು.
ದಾವಣಗೆರೆಯ (Davanagere Lady Teacher) ಶಿಕ್ಷಕಿ ಜಿಎನ್ ಕಮಲಮ್ಮರವರ ಪುತ್ರಿ ಕಾವ್ಯ ಹುಟ್ಟತ್ತಲೇ ತಂದೆಯ ಮುಖ ನೋಡದ ಮಗುವಾಗಿದ್ದಳು. ಅಂತಹವಳಿಗೆ ಕ್ಯಾನ್ಸರ್ ಬಳುವಳಿಯಾಗಿ ಬಂದಿತ್ತು. ನಾಲ್ಕು ವರ್ಷ ಅ ಮಹಾಮಾರಿಯೊಂದಿಗೆ ಹೋರಾಡಿದ ಕಾವ್ಯ ಕೊನೆಗೂ ಕ್ಯಾನ್ಸರ್ ಗೆ ಶರಣಾಗಿದ್ದಾಳೆ. ಅದ್ರೇ ಕಾವ್ಯ ಸಾವಿನ ಮುನ್ನ ಪಟ್ಟ ಮಹದಾಸೆಯನ್ನು ತಾಯಿ ಕಮಲಮ್ಮ ಈಡೇರಿಸಿದ್ದಾರೆ. ಮಗಳ ಸುಂದರ ಮೂರ್ತಿ ನಿರ್ಮಿಸಿ ‘ನನ್ನ ಮಗಳು ಜೀವಂತ ಇದ್ದಾಳೆ’ ಎಂದು ಭಾವಿಸಿ ಒಂಟಿ ಜೀವನ ಸಾಗಿಸುತ್ತಿದ್ದಾರೆ.
ಹೌದು ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಶಿಕ್ಷಕಿ ಜಿಎನ್ ಕಮಲಮ್ಮನವರ ಪುತ್ರಿ ಕಾವ್ಯರವರು ಇದ್ದಕ್ಕಿದ್ದಂತೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ಗೆ ತುತ್ತಾಗಿದ್ದ ನತದೃಷ್ಟ ಯುವತಿ. ಬಿಇ ಪದವಿ ಪಡೆದಿರುವ ಕಾವ್ಯರವರಿಗೆ ಗಂಡು ಓಕೆ ಆಗಿ ಮದುವೆಯೂ ನಿಶ್ಚಿಯಾವಾಗಿತ್ತು.
2019 ರ ಏಪ್ರಿಲ್ ಮೇ ತಿಂಗಳಲ್ಲೇ ಕಾವ್ಯ ವೈವಾಹಿಕ ಜೀವನಕ್ಕೆ ಕಾಲಿಡ್ಬೇಕಿತ್ತು. ದುರಂತ ಅಂದ್ರೇ ಹಸೆಮಣೆ ಏರುವ ಮೊದಲೇ ಕಾವ್ಯ ಕ್ಯಾನ್ಸರ್ ಗೆ ತುತ್ತಾಗಿದ್ದಳು. 2019 ರಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಆರಂಭ ಮಾಡಿದ್ದರು, ಹೀಗೆ ಸತತ ನಾಲ್ಕು ವರ್ಷಗಳ ಕಾಲ ಮಹಾಮಾರಿ ಕ್ಯಾನ್ಸರ್ ಜೊತೆ ಹೋರಾಡಿದ ನತದೃಷ್ಟೆ ಕಾವ್ಯ ಊಟ ಮಾಡ್ತಾ ಮಾಡ್ತಾ… ತಾಯಿಯ ಮಡಿಲಲ್ಲಿ ಮಲಗಿ ಡಿ.10, 2022 ರಂದು ಕೊನೆಯುಸಿರೆಳೆದಳು.
ತಾನು ಸಾವನಪ್ಪುವ ಮುನ್ನ ನನ್ನ ಸಮಾಧಿ ಮಾಡಿ ಉದ್ಯಾನವನ ನಿರ್ಮಿಸಿ ತನ್ನ ಮೂರ್ತಿ ಮಾಡ್ಸಮ್ಮಾ, ಮೃತದೇ ಹವನ್ನು ಡೊನೆಟ್ ಮಾಡು ಎಂದು ಆದರ್ಶದ ಕನಸು ಕಂಡಿದ್ದಳು. ಅದ್ರೇ ಡಿಸೀಜ್ ಇರುವುದರಿಂದ ಬಾಡಿ ಡೊನೇಶನ್ ಮಾಡಲಾಗಲ್ಲ ಎಂದು ವೈದ್ಯರು ನಿರಾಕರಿಸಿದ್ದರಿಂದ ತಾಯಿ ಕಮಲಮ್ಮನವರು ಒಂದೂವರೆ ಲಕ್ಷ ರೂಪಾಯಿ ನೀಡಿ ದಾವಣಗೆರೆ ತಾಲೂಕಿನ ಗೋಪನಾಳು ಗ್ರಾಮದಲ್ಲಿ 04 ಗುಂಟೆ ಜಮೀನಿ ಖರೀದಿ ಮಾಡಿ ಶವಸಂಸ್ಕಾರ ಮಾಡಿದ್ದರು.
ಕಾವ್ಯಳ ಕೊನೆಯಾಸೆಯಂತೆ ಉದ್ಯಾನವನ, ಗಿಡಗಳನ್ನು ನೆಟ್ಟು ಸಮಾಧಿ ಮಾಡಿ, ಅದರ ಮೇಲೆ ಡೈಮಂಡ್ ಶೇಪ್ ಕಮಾನು ನಿರ್ಮಿಸಿದ್ದಾರೆ. ಮಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ತಾಯಿ ಸೋತಿದ್ದರು. ಕ್ಯಾನ್ಸರ್ ಗೆ ತುತ್ತಾಗಿದ್ದ ತನ್ನ ಮುದ್ದು ಮಗಳು ಕಾವ್ಯಳನ್ನು ಉಳಿಸಿಕೊಳ್ಳಲು 04 ವರ್ಷಗಳಲ್ಲಿ ತಾಯಿ ಕಮಲಮ್ಮ ಒಟ್ಟು 40 ಲಕ್ಷ ಖರ್ಚು ಮಾಡಿದ್ದಾರೆ.
ಹುಟ್ಟತ್ತಲೇ ತಂದೆಯನ್ನು ಕಳೆದುಕೊಂಡಿದ್ದ ಮೃತ ಕಾವ್ಯರವರು ತಂದೆ ಇಲ್ಲ ಎಂಬ ಪಾಪ ಪ್ರಜ್ಞೆ ಹಾಗೂ ಅನಾಥ ಭಾವನೆ ಕಾಡಬಾರದೆಂಬ ರೀತಿಯಲ್ಲಿ ಸಾಕಿ ತಾಯಿ ಕಮಲಮ್ಮರವರೇ ತಂದೆ ಸ್ಥಾನ ತುಂಬಿದ್ದರು. ಕಾವ್ಯಳು ಸಹ ಉದಾತ್ತ, ಆದರ್ಶ ಹಾಗೂ ಮೌಲ್ಯಯುತ ಗುಣಗಳನ್ನು ಹೊಂದಿದ್ದಳು.
ರಾಣೇಬೆನ್ನೂರಿನ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಳು. ಬೆಂಗಳೂರಿನಲ್ಲಿ ಎರಡು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಳು. ತನ್ನ ಮೊಬೈಲ್ ನಲ್ಲಿ ಅದೊಮ್ಮೆ ಮಹಿಳೆಯೊಬ್ಬರ ಮೂರ್ತಿಯ ವಿಡಿಯೋವೊಂದನ್ನು ವೀಕ್ಷಿಸಿ ಈ ರೀತಿಯ ಗಿಫ್ಟ್ ನನಗೂ ಮಾಡ್ಸಮ್ಮಾ ಎಂದು ಅಮ್ಮನಿಗೆ ಸೂಚ್ಯವಾಗಿ ಹೇಳಿದ್ದಳು.
ಜೊತೆಗೆ, ಅಮ್ಮ ಈಗಾಗಲೇ ಜೀವನದುದ್ದಕ್ಕೂ ನೀನು ನೊಂದಿದ್ದೀಯಾ, ನನ್ನ ಮೂರ್ತಿ ಮನೆಯಲ್ಲಿ ಇದ್ರೇ ನಾನು ನಿಜವಾಗಿಯೂ ಮನೆಯಲ್ಲಿದ್ದೇನೆ ಎಂದು ಭಾವಿಸಿ ಜೀವನ ಮಾಡಬಹುದು. ನನ್ನ ಸಾವಿನ ಬಳಿಕ ಅಮ್ಮ ಕುಗ್ಗುವುದಿಲ್ಲ ಎಂಬ ಭಾವನೆ ಕಾವ್ಯಳ ತಲೆಗೆ ಬಂದಿತ್ತು. ಅದ್ದರಿಂದ ಮೂರ್ತಿ ಮಾಡ್ಸಮ್ಮಾ ಎಂದು ಜೀವ ಹೋಗುವ ಅಂತಿಮ ದಿನಗಳಲ್ಲಿ ಹೇಳಿದ್ದನ್ನು ನೆನೆದು ತಾಯಿ ಕಮಲಮ್ಮ ಕಣ್ಣೀರು ಹಾಕುತ್ತಾರೆ ಈಗ.
Also Read: 26/11 Mumbai Attack – 13 ವರ್ಷಗಳು ಕಳೆದರೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪು ಸದಾ ಹಸಿರು
ಮಗಳು ಜೊತೆಯಲ್ಲೇ ಇದ್ದಾಳೆಂಬ ಭಾವನೆ ಇರಲಿ ಎಂದು ಮೂರ್ತಿ ಮಾಡಿಸಿದ ತಾಯಿ ಕಮಲಮ್ಮ, ಮಗಳ ಆಸೆಯಂತೆ ಪುತ್ರಿ ಕಾವ್ಯ ಸಾವನಪ್ಪಿದ ಕೆಲವೆ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೂರ್ತಿ ಮಾಡುವವರನ್ನು ಹುಡುಕಿ ಕಲಾವಿದ ವಿಶ್ವನಾಥ್ ಎಂಬುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಬೆಂಗಳೂರು ಮೂಲದ ಕಲಾವಿದ ವಿಶ್ವನಾಥ್ ಅವರು 3.30 ಲಕ್ಷ ರೂಪಾಯಿಗೆ, ಸಿಲಿಕಾನ್ ಮಾದರಿಯ ಕಾವ್ಯಳ ಸುಂದರ ಮೂರ್ತಿಯನ್ನು ತಾಯಿಯ ಭಾವನೆಗೆ ಮಣಿದು ನಿರ್ಮಿಸಿಕೊಟ್ಟಿದ್ದಾರೆ.
ಈ ಮೂರ್ತಿಯ ವಿಶೇಷವೆಂದರೆ ಮನುಷ್ಯನ ಚರ್ಮದ ಮಾದರಿಯಲ್ಲೇ ಈ ಮೂರ್ತಿಯನ್ನು ನಿರ್ಮಿಸಿ ಕೊಟ್ಟಿರುವುದು. ಈ ಸಿಲಿಕಾನ್ ಮಾದರಿಯ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡು ತಾಯಿ ಕಮಲಮ್ಮ ಅವರು ಜೀವನ ನಡೆಸುತ್ತಿದ್ದಾರೆ. ಇನ್ನು ಕಾವ್ಯಳ ನೋವಿನ ಕಥೆ ಕೇಳಿ ಕಲಾವಿದ ವಿಶ್ವನಾಥ್ ರವರು 5 ಲಕ್ಷ ವೆಚ್ಚದ ಮೂರ್ತಿಯನ್ನು ಲಾಭವಿಲ್ಲದೆ, 3.30 ಲಕ್ಷ ರೂಪಾಯಿಗೆ ನಿರ್ಮಿಸಿಕೊಟ್ಟಿದ್ದಾರೆ.
ಈ ವೇಳೆ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ ಮೂರ್ತಿಯನ್ನು ಇರಿಸಿ ಮಗಳ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಮಗಳು ಕಾವ್ಯಳ ಮೂರ್ತಿ ಮನೆಯಲ್ಲಿರುವುದರಿಂದ ತಾಯಿ ಕಮಲಮ್ಮನವರು ಆ ಮೂರ್ತಿಯೇ ತನ್ನ ಮಗಳೆಂದು ಭಾಸ ಮಾಡಿಕೊಂಡು ಅದರೊಂದಿಗೆ ಲವಲವಿಕೆಯಿಂದ ಮಾತನಾಡಿಕೊಂಡು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಸರ್ಕಾರಿ ಶಿಕ್ಷಕರಾಗಿ 27 ವರ್ಷಗಳ ಕಾಲ ಸೇವೆ ಸೇವೆ ಸಲ್ಲಿಸಿರುವ ಕಮಲಮ್ಮನವರು ಮಕ್ಕಳಿಗೆ ವಿದ್ಯಾ ದಾನ ಮಾಡಿದ್ದಾರೆ. ಈಗ ನಿವೃತ್ತಿ ಹೊಂದಿದ ನಂತರ ನಿತ್ಯ ಮಗಳ ಮೂರ್ತಿಯೊಂದಿಗೆ ಬದುಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 am, Mon, 18 December 23