ದಾವಣಗೆರೆ: ಗುಂಡು ಹಾರಿಸಿಕೊಂಡು ದಾವಣಗೆರೆ ಮೂಲದ ಯೋಧ (soldier) ಆತ್ಮಹತ್ಯೆ ಮಾಡಿಕೊಂಡಿರುವಂತಹ ದುರಂತ ನಡೆದಿದೆ. ತಾಲೂಕಿನ ಹದಡಿ ಗ್ರಾಮದ ನಾಗರಾಜ್(32) ಆತ್ಮಹತ್ಯೆಗೆ ಶರಣಾದ ಯೋಧ. ಕರ್ತವ್ಯದಲ್ಲಿದ್ದಾಗ ನಿನ್ನೆ ಬೆಳಗ್ಗೆ 4ಗಂಟೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ವೈಯಕ್ತಿಕ ಕಾರಣ ಎನ್ನಲಾಗುತ್ತಿದೆ. ಪಂಜಾಬ್, ಹರಿಯಾಣ ಸೆಕ್ರೆಟರಿಯೇಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 6 ವರ್ಷಗಳಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಾಗಿದ್ದರು. ದಾವಣಗೆರೆ ಮೂಲದ ಶಿಲ್ಪಾ ಎಂಬುವರನ್ನ ಮದುವೆ ಆಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ನಾಗರಾಜ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಸ್ವಗ್ರಾಮ ಹದಡಿಗೆ ತರಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ ರಿಷ್ಯಂತ ತಿಳಿಸಿದ್ದಾರೆ.
ಬೆಂಗಳೂರು: ಲೋಕಯುಕ್ತ ಅಧಿಕಾರಿಗಳಂತೆ ನಟಿಸಿ ಸರ್ಕಾರಿ ನೌಕರರಿಂದ ಸುಲಿಗೆ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆರೋಪಿಗಳನ್ನು ನಾಗೇಶ್ವರರೆಡ್ಡಿ ಉಪ್ಪಲೂರು (33), ಬಾಚುಪಲ್ಲಿ ವಿನೀತ್ ಕುಮಾರ್ ರೆಡ್ಡಿ (22) ಮತ್ತು ಶಿವಕುಮಾರ್ ರೆಡ್ಡಿ (19) ಎಂದು ಗುರುತಿಸಲಾಗಿದೆ. ಮೂವರೂ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. ಆರೋಪಿ ಶ್ರೀನಾಥ್ ರೆಡ್ಡಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಪೊಲೀಸರು ತನ್ನನ್ನು ಹಿಡಿಯುತ್ತಾರೆಂಬ ಆತಂಕದಲ್ಲಿ ಓಡಿದ್ದ ವ್ಯಕ್ತಿ ರೈಲ್ವೆ ಫ್ಲೈ ಓವರ್ನಿಂದ ಬಿದ್ದು ಮೃತ ಶಂಕೆ
ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರ ಪ್ರಕಾರ, ಮಾರ್ಚ್ 20 ರಂದು ರಾತ್ರಿ 7.30 ರ ಸುಮಾರಿಗೆ ಆಶಾ ಭರತ್ ಎಂಬುವವರಿಗೆ ಆರೋಪಿಗಳಲ್ಲಿ ಒಬ್ಬರಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಲೋಕಾಯುಕ್ತದಿಂದ ಅಶೋಕ್ ರಾವ್ ಎಂದು ಹೇಳಿಕೊಂಡಿದ್ದಾನೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಜಂಟಿ ನಿರ್ದೇಶಕ ಭರತ್ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಲಿದ್ದಾರೆ ಎಂದು ಹೇಳಿದ್ದರು.
ಅದೇ ರೀತಿಯಾಗಿ ದೊಣ್ಣೆಯಿಂದ ಹೊಡೆದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಪಿಳ್ಳಣ್ಣ ಗಾರ್ಡನ್ನಲ್ಲಿ ನಡೆದಿದೆ. ಸತೀಶ್(22) ಕೊಲೆಯಾದ ಯುವಕ. ನಿನ್ನೆ (ಏ.02)ರ ತಡರಾತ್ರಿ ದುಷ್ಕರ್ಮಿಗಳು ದೊಣ್ಣೆಯಿಂದ ಸತೀಶ್ನ ತೆಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ರೈಲ್ವೆ ಟ್ರ್ಯಾಕ್ ಬಳಿ ಇರುವ ಖಾಲಿ ಜಾಗದಲ್ಲಿ ಮೃತದೇಹ ಬಿಸಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಮನಗರ: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಬೈಕ್ನಲ್ಲಿ ತೆರಳುತ್ತಿದ್ದ ತಂದೆ, ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಸಾಬರಪಾಳ್ಯ ಬಳಿ ನಡೆದಿದೆ. ಕಲ್ಯಾ ಗ್ರಾಮದ ನಿವಾಸಿ ಯೋಗೇಶ್(47), ಪುತ್ರಿ ಹರ್ಷಿತಾ(14) ಮೃತ ದುರ್ದೈವಿಗಳು. ಯೋಗೇಶ್ ಮಗಳನ್ನು ಬೈಕ್ನಲ್ಲಿ ಶಾಲೆಗೆ ಬಿಡಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:13 pm, Mon, 3 April 23