M-CCTNS ಆ್ಯಪ್ ಮೂಲಕ ಹತ್ಯೆಗೀಡಾದ ವ್ಯಕ್ತಿಯ ಗುರುತು ಪತ್ತೆಯಾಯ್ತು! ಇದು ರಾಜ್ಯದಲ್ಲಿ ಮೊದಲ ಕೇಸ್: ಏನಿದು ಆ್ಯಪ್ ಮರ್ಮ?
M-CCTNS: ಪೊಲೀಸ್ ಇಲಾಖೆ ಇತ್ತೀಚೆಗೆ ಹೊಸ ತಂತ್ರಜ್ಞಾನದ ಮೊರೆ ಹೊಗಿದ್ದು, ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ ಆ್ಯಪ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಬಹುದಾಗಿದೆ.
ಅಲ್ಲೊಂದು ಭೀಕರ ಹತ್ಯೆ ಆಗಿತ್ತು. ಮೈ ತುಂಬಾ ಖಾರದ ಪುಡಿ ಹಾಕಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ನಂತರ ಕುತ್ತಿಗೆ ಕತ್ತರಿಸಲಾಗಿತ್ತು. ಆದ್ರೆ ಅಲ್ಲಿ , ಮೃತಪಟ್ಟ ವ್ಯಕ್ತಿ ಯಾರು, ಈ ರೀತಿ ಪೈಶಾಚಿಕವಾಗಿ ಸಾಯಿಸಿರುವವರು ಯಾರು ಎಂಬುದೇ ಪೊಲೀಸರಿಗೆ ತಲೆನೋವಾಗಿತ್ತು. ಅಂದು ಸ್ಮಾರ್ಟ್ ಸಿಟಿಯ ರಿಂಗ್ ರಸ್ತೆಯಲ್ಲಿ ನಡೆದ ಭೀಕರ ಮರ್ಡರ್ ಬಗ್ಗೆ ಪತ್ತೆ ಕಾರ್ಯ ಶುರುವಾಗಿತ್ತು. ಈ ಮಧ್ಯೆ ಪೊಲೀಸ್ ಇಲಾಖೆ ಒಂದು ಆ್ಯಪ್ ಸಿದ್ಧಪಡಿಸಿದೆ. ಇದೇ ಆ್ಯಪ್ ಹತ್ಯೆಯಾದ (Murder) ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿದೆ! ತತ್ಫಲವಾಗಿ ಹತ್ಯೆಯಾದ ವ್ಯಕ್ತಿಯ ಪತ್ನಿ ಹಾಗೂ ಅವಳ ಪ್ರಿಯತಮ ಜೈಲುಪಾಲಾಗಿದ್ದಾರೆ. ಹೀಗೆ ಕರ್ನಾಟಕದಲ್ಲಿ ಪೊಲೀಸ್ ಆ್ಯಪ್ (M-CCTNS) ಮೂಲಕ ಹತ್ಯೆ ಪ್ರಕರಣ ಪತ್ತೆಯಾದ ಮೊದಲ ಕೇಸ್ ಇದಂತೆ. ಇಲ್ಲಿದೆ ನೋಡಿ ಪೊಲೀಸ್ ಕಮಾಲ್ ಆ್ಯಪ್ ಸ್ಟೋರಿ. ಅಂದು ಮಾರ್ಚ್ 23 ರಂದು ಬೆಳಗ್ಗೆ ದಾವಣಗೆರೆ ಸ್ಮಾರ್ಟ್ ನಗರದ ರಿಂಗ್ ರಸ್ತೆಯಲ್ಲಿ ಮರ್ಡರ್ ನಡೆದಿತ್ತು. ನೋಡಿದ್ರೆ ಯಾವುದೋ ರೌಡಿ ಗ್ಯಾಂಗ್ ಆಸಾಮಿ ಇರಬೇಕು ಎಂದು ತಿಳಿಯಲಾಗಿತ್ತು. ಗುರುತು ಮಾತ್ರ ಪತ್ತೆ ಆಗಲಿಲ್ಲ. ಎಷ್ಟೆ ಪ್ರಯತ್ನಿಸಿದರೂ ಮರ್ಡರ್ ಆದ ವ್ಯಕ್ತಿ ಯಾರು ಎಂಬುದನ್ನ ತಿಳಿಯುವುದೇ ಪೊಲೀಸರಿಗೆ ಸವಾಲಿನ ಪ್ರಶ್ನೆ ಆಗಿತ್ತು. ಆಗ ಪೊಲೀಸರಿಗೆ ನೆನಪಾಗಿದ್ದೆ ಆ ನೂತನ ಮಾಯಾ ಆ್ಯಪ್.
ದಾವಣಗೆರೆ ನಗರದ ವಿದ್ಯಾನಗರ ಪೊಲೀಸರು (Davanagere Police) ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ (M-CCTNS) ಆ್ಯಪ್ ಮೂಲಕ ಕೊಲೆಯಾದ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಿದ್ದಾರೆ. ರಾಜ್ಯ ಪೊಲೀಸ್ ಇಲಾಖೆ ಹಲವು ತಂತ್ರಜ್ಞಾನಗಳನ್ನು ಅಳವಡಿಕೊಳ್ಳುತ್ತಿದ್ದು, ಇವುಗಳ ಮೂಲಕ ಅಪರಾಧ ಪ್ರಕರಣಗಳನ್ನು ಸುಲಭವಾಗಿ ಭೇದಿಸಲು ಸಹಾಯವಾಗುತ್ತಿದೆ. ಪೊಲೀಸ್ ಇಲಾಖೆ ಇತ್ತೀಚೆಗೆ ಹೊಸ ತಂತ್ರಜ್ಞಾನದ ಮೊರೆ ಹೊಗಿದ್ದು, ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ ಆ್ಯಪ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಬಹುದಾಗಿದೆ.
ವಿದ್ಯಾನಗರ ಪೊಲೀಸರು ಮರ್ಡರ್ ಆದ ವ್ಯಕ್ತಿಯ ಗುರುತನ್ನು ಇದೇ ರೀತಿ ಪತ್ತೆ ಹಚ್ಚಿದ್ದಾರೆ. ಹತ್ಯೆಗೀಡಾಗಿರುವ ವ್ಯಕ್ತಿ ದಾವಣಗೆರೆ ಕಟಿಂಗ್ ಶಾಪ್ ನ ಉದ್ಯೋಗಿ ಮಹಾಂತೇಶ್ ಅಂತಾ. ಆತನ ಹೆಬ್ಬೆರಳು ಸ್ಕ್ಯಾನ್ ಮಾಡಿ ಆ್ಯಪ್ ಗೆ ಹಾಕಿದಾಗ ಆತನ ಹೆಸರು ಮತ್ತು ವಿಳಾಸ ಬಂದಿದೆ. ಅಂದ್ರೆ ಇಂತಹ ಯಾವುದೇ ವ್ಯಕ್ತಿಯ ಹೆಸರು ಈ ಮೊದಲೇ ಪೊಲೀಸ್ ರೆಕಾರ್ಡ್ನಲ್ಲಿ ದಾಖಲಾಗಿರಬೇಕು. ಹೀಗೆ ಈ ಹಿಂದೆ ಪಡೆದ ಫಿಂಗರ್ ಪ್ರಿಂಟ್ಸ್ ಸಕಾಲದಲ್ಲಿ ನೆರವಿಗೆ ಬರುತ್ತದೆ.
ಇದನ್ನೂ ಓದಿ:
ಮಾಲೂರು ಯುವಕ ತನ್ನ ಹೊಸ ಮೊಬೈಲಿನಿಂದ ಅಚಾನಕ್ಕಾಗಿ ಯುವತಿಗೆ ಮೆಸೇಜ್ ಮಾಡಿದ್ದೇ ಅವನ ಸಾವಿಗೆ ಕಾರಣವಾಯ್ತಾ?
ಅದೇ ಮಾದರಿಯಾಗಿ ಮಹಾಂತೇಶನ ಗುರ್ತು ಪತ್ತೆ ಹಚ್ಚಿದ್ದೆ ತಡ ವಿಚಾರಣೆ ಮಾಡಲಾಗಿ ಆತನ ಪತ್ನಿ ಸೌಮ್ಯ ಹಾಗೂ ಅವಳ ಪ್ರಿಯಕರ ಚಂದ್ರಶೇಖರ್ ಇಬ್ಬರೂ ಸೇರಿ ಈ ಹತ್ಯೆ ಮಾಡಿದ್ದರು. ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿದ್ದರು. ಇಬ್ಬರೂ ಈಗ ಜೈಲು ಸೇರಿದ್ದಾರೆ. ಪೊಲೀಸರು ಎಂ-ಸಿಸಿಟಿಎನ್‌ಎಸ್ ಆ್ಯಪ್ ಬಳಸಿ, ಈ ಡಿವೈಸನ್ನು ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಮುಖಾಂತರ ಮೃತ ವ್ಯಕ್ತಿಯ ಬೆರಳು ಮುದ್ರೆಯನ್ನು ಪರಿಶೀಲಿಸಿದಾಗ ಆ ವ್ಯಕ್ತಿಯ ಹಿನ್ನೆಲೆ ಪತ್ತೆಯಾಗಿದೆ.
ರಾತ್ರಿ ಗಸ್ತಿನ ಸಮಯದಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸಲು ಈ ಅಪ್ಲಿಕೇಶನ್ನ್ನು ಬಳಸಲಾಗುತ್ತದೆ. ಇದೇ ಮೊದಲ ಬಾರಿಗೆ ಮೃತ ದೇಹವನ್ನು ಗುರುತಿಸಲು ಅಪ್ಲಿಕೇಶನ್ನ್ನು ಬಳಸಲಾಯಿತು. ಕಳೆದ ವರ್ಷ ನವೆಂಬರ್‌ನಲ್ಲಿ ಬೆಂಗಳೂರು ಪೊಲೀಸರು ಎಂ-ಸಿಸಿಟಿಎನ್‌ಎಸ್ ಆ್ಯಪ್ ಮೂಲಕ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದರು. ಈ ಹಿಂದೆ ಸಂಗ್ರಹಿಸಿದ ಡೇಟಾ ಬೇಸ್ ಆಧಾರದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮೂಲಕ ಆರೋಪಿಯ ಹಿನ್ನೆಲೆ ತಿಳಿದು ಬಂದಿತ್ತು. ಆತ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದವ.
ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ
Published On - 5:49 pm, Tue, 4 April 23