ದಾವಣಗೆರೆ: ವಿಶಾಲವಾದ 28 ಎಕರೆ ಪ್ರದೇಶ. ಪಕ್ಕದಲ್ಲಿಯೇ ಪ್ರಸಿದ್ಧ ಕುಂದವಾಡ ಕೆರೆ. ಬೆಂಗಳೂರಿನ ಲಾಲ್ಬಾಗ್ನಲ್ಲಿನ ಗಾಜಿನ ಮನೆಗಿಂತ ಹತ್ತು ಪಟ್ಟು ದೊಡ್ಡದಾದ ಕಟ್ಟಡ. ಬೆಣ್ಣೆನಗರಿಯ ಗ್ಲಾಸ್ಹೌಸ್ ಈಗ ಪ್ರವಾಸಿಗರ ಹಾಟ್ ಸ್ಫಾಟ್. ಧಾರಾವಾಹಿ, ಸಿನಿಮಾ ಶೂಟಿಂಗ್ಗಳಿಗೂ ನೆಚ್ಚಿನ ತಾಣ.
ದಾವಣಗೆರೆಯ ಕುಂದವಾಡ ಕೆರೆ ಪಕ್ಕ ತಲೆ ಎತ್ತಿರುವ ಗಾಜಿನ ಮನೆ ಈಗ ಜಿಲ್ಲೆಯ ಪ್ರವಾಸೋದ್ಯಮಕ್ಕೇ ಹೊಸ ಸ್ಪರ್ಶ ಕೊಟ್ಟಿದೆ. ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಗಾಜಿನ ಮನೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡ್ತಿದ್ದಾರೆ. ಗ್ಲಾಸ್ ಹೌಸ್ ಎದುರು ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸ್ತಿದ್ದಾರೆ.
ಇನ್ನು ಮೈಸೂರು ದಸರಾ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನ ಸೇರಿದಂತೆ ಮಕ್ಕಳನ್ನ ಆಕರ್ಷಿಸಲು ನಾನಾ ಗೇಮ್ಸ್, ಪಕ್ಕದಲ್ಲೇ ಇರೋ ವಿಶಾಲವಾದ ಕೆರೆ ಪರಿಸರಕ್ಕೆ ಪ್ರವಾಸಿಗರು ಮಾರುಹೋಗ್ತಿದ್ದಾರೆ. KRS ಮಾದರಿಯಲ್ಲೇ ಸಂಗೀತಯುಕ್ತ ಬೆಳಕಿನ ಕಾರಂಜಿಯೂ ಇಲ್ಲಿ ರೂಪುಗೊಳ್ತಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳು ನಡೀತಿವೆ. ಇವುಗಳ ಜೊತೆಗೆ ಫ್ರೀ ವೆಡ್ಡಿಂಗ್, ಸಿನಿಮಾ, ಧಾರವಾಹಿ ಚಿತ್ರೀಕರಣಗಳಿಗೂ ಈ ಗಾಜಿನ ಮನೆ ಹೆಚ್ಚಾಗಿ ಬಳಕೆಯಾಗ್ತಿರೋದು, ಪ್ರವಾಸೋದ್ಯಮದ ಆದಾಯ ಹೆಚ್ಚಿಸ್ತಿದೆ.
ದಾವಣಗೆರೆಯಲ್ಲಿ ಈವರೆಗೂ ಇಂತಹದ್ದೊಂದು ಪ್ರವಾಸಿ ತಾಣವೇ ಇರಲಿಲ್ಲ. ಪ್ರವಾಸೋದ್ಯಮ ಅಂದ್ರೆ ಪಕ್ಕದ ಶಿವಮೊಗ್ಗ, ಹಾವೇರಿಗೆ ಹೋಗುವಂತಹ ಸ್ಥಿತಿ ಇತ್ತು. ಆದ್ರೀಗ ಗಾಜಿನ ಮನೆಯ ನಿರ್ಮಾಣ ಈ ಎಲ್ಲಾ ಕೊರತೆಗಳನ್ನ ನೀಗಿಸಿದೆ. ಸುತ್ತಮಯತ್ತಲಿನ ಜಿಲ್ಲೆಗಳ ಜನರನ್ನು ತನ್ನತ್ತ ಸೆಳೆಯುತ್ತಿದೆ.
ಒಟ್ನಲ್ಲಿ ಬೆಣ್ಣೆ ದೋಸೆಯ ಜೊತೆಗೆ ಗಾಜಿನ ಮನೆಯಿಂದಲೂ ಸದ್ಯ ದಾವಣಗೆರೆ ಫೇಮಸ್ ಆಗ್ತಿದೆ. ಸಂಗೀತ ಕಾರಂಜಿಯೂ ಶೀಘ್ರ ಆರಂಭಗೊಂಡಿದ್ದೇ ಆದಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಬಹುದೆಂಬ ನಿರೀಕ್ಷೆ ಪ್ರವಾಸೋದ್ಯಮ ಇಲಾಖೆಯದ್ದು.
ಬಸವರಾಜ್ ದೊಡ್ಮನಿ ಟಿವಿ, ದಾವಣಗೆರೆ
ಇದನ್ನೂ ಓದಿ: ಕೊವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ