ಕಡು ಬಡತನದ ಮಹಿಳೆ, ಗಂಡ ಮತ್ತು ಮಗ ಕೂಲಿನಾಲಿ ಮಾಡಿದರೆ, ಆಕೆ ಒಬ್ಬಳೇ ಇದ್ದ ಅರ್ಧ ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಮಾಡುತ್ತಾ ಬಂದಿದ್ದಾಳೆ. ಆದರೆ ಅಲ್ಲೊಂದು ಪೆಡಂಭೂತವೊಂದು ವಕ್ಕರಿಸಿಕೊಂಡಿದೆ. ಅಕೆ ಬೆಳೆದಿದ್ದ ಅಲ್ಪಸ್ಪಲ್ಪ ಬೆಳೆ ಕೂಡ ನಾಶವಾಗುತ್ತಿದ್ದು, ಬೆಳೆ (Agriculture Crop) ಕೈಗೆ ಸಿಗದೆ ನಾಶವಾಗುತ್ತಿದೆ. ಇದರಿಂದ ಆಕೆ ತೆಗೆದುಕೊಂಡ ನಿರ್ಧಾರ ಇಡೀ ಗ್ರಾಮದ ಜನರನ್ನು ನಿಬ್ಬೆರಗಾಗುವಂತೆ ಮಾಡಿದೆ. ಅ ಭೂತವೂ ಕೂಡ ನಡುಗಲು ಶುರುವಾಗಿದೆ. ಹಾಗಾದ್ರೆ ಆಕೆ ತೆಗೆದುಕೊಂಡ ನಿರ್ಧಾರವಾದರೂ ಏನು? ಆವುದದು ಭೂತ ಅಂತೀರಾ? ಇಲ್ಲಿದೆ ಕೊಟ್ರಮ್ಮನ ಹೈವೆ ಸ್ಟೋರಿ… (Davanagere Kotramma)
ಧೂಳೆಬ್ಬಿಸಿ ಸಾಲುಸಾಲಾಗಿ ಬರುತ್ತಿರುವ ಬೃಹದಾಕಾರದ ಲಾರಿಗಳು, ಲಾರಿಗಳನ್ನು (Lorry) ತಡೆದು ನಿಲ್ಲಿಸಿರುವ ಏಕಾಂಗಿ ಮಹಿಳೆ! ಲಾರಿಗಳ ಧೂಳಿನಿಂದ ಹಾಳಾಗಿ ಹೋಗಿರುವ ಬೆಳೆ.. ಇದೆಲ್ಲ ಜರುಗಿರುವುದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಬಳಿ (Highway). ಹೌದು ಹೀಗೆ ಲಾರಿಗಳನ್ನು ತಡೆದು ನಿಲ್ಲಿಸಿದ ದಿಟ್ಟ ಮಹಿಳೆಯ ಹೆಸರು ಕೊಟ್ರಮ್ಮ.. ಸಾರಥಿ, ಚಿಕ್ಕ ಬಿದರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮದ ರೈತರು ಪ್ರತಿನಿತ್ಯ ಅನುಭವಿಸುತ್ತಿರುವ ನರಕ ಯಾತನೆ ಎಂದರೆ ಲಾರಿಗಳ ಧೂಳು..
ಇಲ್ಲಿ ತುಂಗಾಭದ್ರ ನದಿಯ ತಟದಲ್ಲಿರುವ ರೈತರ ಜಮೀನುಗಳಿಂದ ಮಣ್ಣನ್ನು ಇಟ್ಟಿಗೆ ಭಟ್ಟಿಗಳಿಗೆ ಸಾಗಿಸುತ್ತಾರೆ.. ಪರವಾನಗಿ ಪಡೆದರೂ ಕೂಡ ಇದೊಂದು ಮಾಫಿಯಾವಾಗಿ ಬೆಳೆದು ಹೆಮ್ಮರವಾಗಿದೆ.. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.. ಪ್ರತಿನಿತ್ಯ ನೂರಾರು ಲಾರಿಗಳು ಮಣ್ಣು ಹೇರಿಕೊಂಡು ಹೋಗುತ್ತಿದೆ. ಹೋಗುವ ಹಾದಿಯಲ್ಲಿ ಸಿಗುವ ಜಮೀನಿಗಳಿಗೆ ಲಾರಿಗಳ ಧೂಳು ಹೆಚ್ಚಾಗಿದ್ದು, ಅ ಧೂಳು ಬೆಳೆಗಳನ್ನು ಏಳಿಗೆಯಾಗದಂತೆ ಮಾಡಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಇದರಿಂದ ಕಳೆದ ಒಂದು ವಾರದಿಂದ ಸಾರಥಿ ಗ್ರಾಮದ ರೈತ ಮಹಿಳೆ ಕೊಟ್ರಮ್ಮ ಲಾರಿಗಳನ್ನು ತಡೆದು ದಿಟ್ಟತನ ಪ್ರದರ್ಶನ ಮಾಡುತ್ತಿದ್ದಾರೆ. ಆಕೆಯ ಗಂಡ ಮತ್ತು ಮಕ್ಕಳು ಕೂಲಿ ಕೆಲಸಕ್ಕೆ ಹೋದರೆ ಈಕೆ ಮಾತ್ರ ಇದ್ದ ಅರ್ಧ ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾಳೆ! ಆದರೆ ಲಾರಿಗಳ ಧೂಳು ಈಕೆ ಬೆಳೆದ ತರಕಾರಿ ಬೆಳೆಗಳ ಮೇಲೆ ಕೂತು ಹೂವು ಕಾಯಿ ಬಿಡದೆ ರೋಗಕ್ಕೆ ತುತ್ತಾಗುವಂತೆ ಮಾಡುತ್ತಿದೆ. ಒಂದು ಬೆಳೆಗೆ 30 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದರೂ ನಷ್ಟವಾಗುತ್ತಿದೆ. ನಾಲ್ಕೈದು ಬೆಳೆ ಹೀಗೆಯೇ ನಷ್ಟವಾಗಿದೆ. ಇದರಿಂದ ರೋಸಿ ಹೋದ ಬಡ ರೈತ ಮಹಿಳೆ ಏಕಾಂಗಿಯಾಗಿ ಲಾರಿಗಳು ಚಲಿಸುವ ದಾರಿಯಲ್ಲಿ… ಅಡ್ಡಲಾಗಿ ಕುಳಿತು ಪ್ರತಿಭಟನೆ ಮಾಡಿದ್ದಾಳೆ.
ಇನ್ನು ಈಕೆಯ ಜಮೀನಿಗೆ ಮಾತ್ರವೇ ಹೀಗೆ ತೊಂದರೆಯಾಗುತ್ತಿಲ್ಲ. ದಾರಿಯ ಅಕ್ಕಪಕ್ಕದಲ್ಲಿರುವ ಜಮೀನುಗಳಿಗೂ ಇದೇ ರೀತಿ ತೊಂದರೆಯಾಗಿದೆ. ರಸ್ತೆಗಳು ಹೇಳತೀರದ ರೀತಿ ಹಾಳಾಗಿವೆ. ಅದರೆ ಯಾರೂ ಕೂಡ ಧ್ವನಿ ಎತ್ತಲು ಮುಂದೆ ಬರುತ್ತಿಲ್ಲ. ದಿಟ್ಟ ಮಹಿಳೆ ಕೊಟ್ರಮ್ಮ ಮಾತ್ರ ತಾನು ಮಕ್ಕಳಂತೆ ಬೆಳೆಸಿದ ಬೆಳೆಗಳು ಹಾಳಾಗುತ್ತಿರುವುದನ್ನು ನೋಡಿ ಇಡೀ ಮಣ್ಣು ಮಾಫಿಯಾ ವಿರುದ್ದ ತಿರುಗಿ ಬಿದ್ದಿದ್ದಾಳೆ!
ದಾರಿಗೆ ಟ್ಯಾಂಕರ್ ಮೂಲಕ ನೀರು ಹಾಕಿದರೆ ಧೂಳು ಕಡಿಮೆಯಾಗುತ್ತದೆ ಎಂದರೆ ಯಾರೂ ಕೇಳಿಸಿಕೊಳ್ಳುವರೆ ಇಲ್ಲ.. ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರು ಮಣ್ಣು ಮಾಫಿಯ ಅಭಾದಿತವಾಗಿ ನಡೆಯುತ್ತಲೇ ಇದೆ.. ಅಲ್ಲದೆ ಶಾಸಕ ಎಸ್ ರಾಮಪ್ಪ ಮಾತ್ರ ಚುನಾವಣೆಯಲ್ಲಿ ಮತ ಕೇಳಲು ಬರುತ್ತಾರೆಯೇ ವಿನಃ ಎಷ್ಟೇ ಸಮಸ್ಯೆ ಇದ್ದರೂ ಕಿವಿಗೆ ಹಾಕಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಇಡೀ ಮಣ್ಣು ಮಾಫಿಯಾ ವಿರುದ್ಧ ಎಷ್ಟೇ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಅಧಿಕಾರಿಗಳು ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿಯಬೇಕಾಗುತ್ತದೆ. ಶಾಸಕರು ಹಾಗೂ ಜನಪ್ರತಿನಿಧಿಗಳು ಜನರಿಂದ ಮತ ಹಾಕಿಸಿಕೊಳ್ಳುವುದಷ್ಟೇ ಅಲ್ಲ ಅವರ ಕಷ್ಟಕ್ಕೆ ಕೂಡ ಸ್ಪಂದಿಸಬೇಕಿದೆ.. ಏನೇ ಆಗಲಿ ಕೊಟ್ರಮ್ಮನ ದಿಟ್ಟತನ ಮಣ್ಣು ಮಾಫಿಯಾದವರಿಗೆ ಸ್ವಲ್ಪಮಟ್ಟಿಗೆ ನಡುಕ ತಂದಿದೆ. ಮುಂದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಿದೆ. (ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)
ಇದನ್ನೂ ಓದಿ:
Published On - 12:51 pm, Wed, 30 November 22