ವಿಶ್ವ ದಾಖಲೆಗಾಗಿ 7 ಕಿ.ಮೀ ಉದ್ದದ ಕನ್ನಡ ಧ್ವಜ; ವಿಶಿಷ್ಟ ರಾಜ್ಯೋತ್ಸವಕ್ಕೆ ಸಾಕ್ಷಿಯಾದ ದಾವಣಗೆರೆ

ದಾವಣಗೆರೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 7 ಕಿ.ಮೀ. ಉದ್ದದ ಕನ್ನಡ ಬಾವುಟದ ಐತಿಹಾಸಿಕ ಮೆರವಣಿಗೆ ನಡೆಸಲಾಯಿತು. 15 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದು, ಏಳು ಕಿಲೋಮೀಟರ್ ಉದ್ದದ ಧ್ವಜವನ್ನು ಇಪ್ಪತ್ತು ದಿನಗಳ ಕಾಲ ನಿರಂತರವಾಗಿ ಶ್ರಮವಹಿಸಿ ಸಿದ್ಧಪಡಿಸಿದ್ದಾರೆ. ಇದು ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆಗೆ ಸೇರುವ ನಿರೀಕ್ಷೆಯಿದೆ.

ವಿಶ್ವ ದಾಖಲೆಗಾಗಿ 7 ಕಿ.ಮೀ ಉದ್ದದ ಕನ್ನಡ ಧ್ವಜ; ವಿಶಿಷ್ಟ ರಾಜ್ಯೋತ್ಸವಕ್ಕೆ  ಸಾಕ್ಷಿಯಾದ ದಾವಣಗೆರೆ
ವಿಶ್ವ ದಾಖಲೆಗಾಗಿ ಕನ್ನಡ 7 ಕಿ.ಮೀ ಉದ್ದದ ಕನ್ನಡಮ್ಮದ ಬಾವುಟ; ವಿಶಿಷ್ಟ ರಾಜ್ಯೋತ್ಸವಕ್ಕೆ ಸಾಕ್ಷಿಯಾದ ದಾವಣಗೆರೆ
Updated By: ಭಾವನಾ ಹೆಗಡೆ

Updated on: Nov 28, 2025 | 2:29 PM

ದಾವಣಗೆರೆ, ನವೆಂಬರ್ 28:  70 ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಮತ್ತಷ್ಟು ಅವಿಸ್ಮರಣೆಗೊಳಿಸುವ ನಿಟ್ಟಿನಲ್ಲಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಿಶ್ವದಾಖಲೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ, ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ದಾವಣಗೆರೆ ಜಿಲ್ಲಾ ಘಟಕ ಇಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 7 ಕಿ.ಮೀ. ಉದ್ದದ ಕನ್ನಡ ಬಾವುಟದ ಐತಿಹಾಸಿಕ ಮೆರವಣಿಗೆ ನಡೆದಿದ್ದು, ಈ ಕನ್ನಡ ಧ್ವಜ ವಿಶ್ವದಾಖಲೆಯ ಸ್ಥಾನಮಾನವನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ.

ಬಾವುಟವನ್ನು ಹೊತ್ತೊಯ್ದ 15 ಸಾವಿರ ವಿದ್ಯಾರ್ಥಿಗಳು

ಗಾಂಧಿ ವೃತ್ತ, ಗುಂಡಿ ಮಹಾದೇವಪ್ಪ ವೃತ್ತ, ಶಾರದಾಂಬ ದೇವಸ್ಥಾನ ವೃತ್ತ, ರಿಂಗ್ ರಸ್ತೆ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಪಿ.ಬಿ. ರಸ್ತೆ, ರೇಣುಕ ಮಂದಿರ, ಎವಿಕೆ ರಸ್ತೆ, ಚೇತನಾ ಹೋಟೆಲ್ ರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಮರಳಿ ಬರುವಾಗ ಜಯದೇವ ವೃತ್ತ ಮೂಲಕ ಬಾವುಟದ ಸಂಚಾರ‌ ನಡೆಯಿತು. ಮೆರವಣಿಗೆಯಲ್ಲಿ ಬಾವುಟವನ್ನು ಹೊತ್ತೊಯ್ಯಲು 15 ಸಾವಿರ ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

ಬಾವುಟವು ನಗರದ 7 ಪ್ರಮುಖ ವೃತ್ತಗಳನ್ನು ದಾಟುವ ಮೂಲಕ ವಿಶ್ವ ದಾಖಲೆ ಸೇರಲಿದೆ. 7 ಕಿ.ಮೀ. ಉದ್ದದ ಬಾವುಟವು ನಗರದ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ನ ಮುಖ್ಯಸ್ಥ ಮೃಣಾಲ್ ಬಂಕಾಪುರ ನೇತೃತ್ವದಲ್ಲಿ ತಯಾರಾಗಿದ್ದು, ಏಳು ಕಿಲೋಮೀಟರ್ ಉದ್ದದ ಧ್ವಜವನ್ನು ಐದು ಜನ ಟೈಲರ್ಗಳು ಹಾಗೂ ಹದಿನೈದು ಜನ ಸಹಾಯಕರು ಸೇರಿದಂತೆ ಒಟ್ಟು ಇಪ್ಪತ್ತು ದಿನಗಳ ಕಾಲ ನಿರಂತರವಾಗಿ ಶ್ರಮವಹಿಸಿ ಸಿದ್ಧಪಡಿಸಿದ್ದಾರೆ. ಪ್ರತಿ ಕಿ.ಮೀ.ಗೆ ಒಂದರಂತೆ ವಿಶೇಷ ಹೆಸರುಗಳಲ್ಲಿ 7 ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

7 ಕಿ.ಮೀ  ಉದ್ದದ ಕನ್ನಡ ಧ್ವಜವನ್ನು ಹಿಡಿದು ಸಾಗಿದ ದೃಶ್ಯ

ಇದನ್ನೂ ಓದಿ ಬೆಳಗಾವಿ: ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ದುಷ್ಕರ್ಮಿಗಳಿಂದ ಐವರಿಗೆ ಚಾಕು ಇರಿತ

ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರಲಿದೆಯಾ ಕನ್ನಡ ಧ್ವಜ

ಬಾವುಟದ ಮುಂದೆ ವಿಶೇಷವಾಗಿ ಭುವನೇಶ್ವರಿ, ಇಮ್ಮಡಿ ಪುಲಕೇಶಿ, ಸಿದ್ದಗಂಗಾ ಮಠ, ಗಾಜಿನಮನೆ, ಸಂತೆಬೆನ್ನೂರು ಪುಷ್ಕರಣಿ, ಸಂತೆಬೆನ್ನೂರು ಜಿಲ್ಲೆಯ ನಿರ್ಮಾತೃ ಜೆ.ಎಚ್.ಪಟೇಲ್ ಅವರ ಸ್ಥಬ್ದ ಚಿತ್ರ ಸೇರಿ ಒಟ್ಟು ಏಳು ಸ್ಥಬ್ದ ಚಿತ್ರ ಮೆರವಣಿಗೆಗೆ ಮೆರುಗು ನೀಡಿವೆ. ಏಳೂ ಕಿಲೋಮೀಟರ್ ಉದ್ದದ ಧ್ವಜವನ್ನು ಹೊತ್ತು ಸಾಗಲು ವಿದ್ಯಾರ್ಥಿಗಳು ಸೇರಿದಂತೆ 15 ಸಾವಿರಕ್ಕೂ ಅಧಿಕ ಜನ ಸಿದ್ದರಾಗಿದ್ದಾರೆ, ಭವ್ಯ ಮೆರವಣಿಗೆ ಕಣ್ತುಂಬಿಕೊಂಡರು ಬೆಣ್ಣೆ ನಗರಿ ದಾವಣಗೆರೆ ಜನ. ದಾವಣಗೆರೆ ನಗರದ ಪ್ರಮುಖ ರಸ್ತೆಗಳೆಲ್ಲ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು.ಜಗತ್ತಿನಲ್ಲಿ ಇಷ್ಟು ಉದ್ದದ ಧ್ವಜ ಎಲ್ಲಿಯೂ ದಾಖಲಾಗಿರದ ಹಿನ್ನೆಲೆಯಲ್ಲಿ ಈ ಕನ್ನಡ ಧ್ವಜ ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶ್ವದಾಖಲೆಯ ಸ್ಥಾನಮಾನವನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:22 pm, Fri, 28 November 25