ಕಂತು ಕಟ್ಟಲಾಗದ ವೃದ್ಧೆಯ ಮನೆ ಸೀಜ್: ಜಗಳೂರಿನಲ್ಲಿ 15 ದಿನಗಳಿಂದ ಬೀದಿಯಲ್ಲಿ ಕುಟುಂಬ, ಮೈಕ್ರೋ ಫೈನಾನ್ಸ್ ವಿರುದ್ಧ ಆಕ್ರೋಶ
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಮರೇನಹಳ್ಳಿಯಲ್ಲಿ ಅನಾರೋಗ್ಯದಿಂದ ಕಂತು ಕಟ್ಟಲಾಗದ ವೃದ್ಧೆ ಗೌರಮ್ಮ ಅವರ ಮನೆಯನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸೀಜ್ ಮಾಡಿದ್ದಾರೆ. ಪರಿಣಾಮವಾಗಿ ಕಳೆದ 15 ದಿನಗಳಿಂದ ಕುಟುಂಬ ಬೀದಿಯಲ್ಲಿದೆ. ಸದ್ಯ, ಮೈಕ್ರೋ ಫೈನಾನ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಗ್ರಾಮಸ್ಥರು ಹಾಗೂ ರೈತ ಮುಖಂಡರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು
- ಜಗಳೂರಿನಲ್ಲಿ ವೃದ್ಧೆಯ ಮನೆ ಸೀಜ್, ಕುಟುಂಬ ಬೀದಿಗೆ
- ₹6.8 ಲಕ್ಷ ಸಾಲ, 3 ವರ್ಷ ನಿರಂತರ ಪಾವತಿ
- ಮನೆ ತೆರವುಗೊಳಿಸಿ ವೃದ್ಧೆಗೆ ನೆರವಾಗಲು ರೈತ ಮುಖಂಡರ ಆಗ್ರಹ
ದಾವಣಗೆರೆ, ನವೆಂಬರ್ 14: ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೂ, ಬಡ ಕುಟುಂಬಗಳ ಮೇಲಿನ ಒತ್ತಡ ನಿಂತಿಲ್ಲ ಎಂಬುದಕ್ಕೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮರೇನಹಳ್ಳಿಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ಕಂತು ಕಟ್ಟಿಲ್ಲ ಎಂಬ ಕಾರಣಕ್ಕೆ ಖಾಸಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ವೃದ್ಧೆಯೊಬ್ಬರ ಮನೆಯನ್ನು ಸೀಜ್ ಮಾಡಿ, ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಬೀದಿಗೆ ಬಿದ್ದ ವೃದ್ಧೆ ಕುಟುಂಬ
ಮರೇನಹಳ್ಳಿಯ ಗೌರಮ್ಮ ಮತ್ತು ಅವರ ಮಕ್ಕಳದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುವ ಅತ್ಯಂತ ಬಡ ಕುಟುಂಬ. ಮನೆಗೆ ಸೀಜ್ ನೋಟಿಸ್ ಅಂಟಿಸಲಾಗಿದ್ದು, ಗೌರಮ್ಮ ಮತ್ತು ಅವರ ತಾಯಿ ಮನೆಯ ಮುಂದೆಯೇ ಕುಳಿತು ಗೋಳಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಅವರು ಉಟ್ಟ ಬಟ್ಟೆಯಲ್ಲೇ ಬೀದಿಯಲ್ಲಿ ದಿನ ಕಳೆಯುತ್ತಿದ್ದಾರೆ.
₹6.8 ಲಕ್ಷ ಸಾಲ, ಕಮಿಷನ್ ಆಮಿಷದ ಆರೋಪ
ಈ ಹಿಂದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಮಿಷನ್ ಆಸೆಗೆ, ಕಡಿಮೆ ಬಡ್ಡಿಯ ಆಮಿಷ ತೋರಿಸಿ ಒತ್ತಾಯಪೂರ್ವಕವಾಗಿ ₹6.80 ಲಕ್ಷ ಸಾಲ ನೀಡಿದ್ದರು. ತಮಗೆ ಸಾಲ ಬೇಡ ಎಂದು ಗೌರಮ್ಮ ಹೇಳಿದ್ದರೂ, ಮಕ್ಕಳ ವ್ಯಾಪಾರಕ್ಕೆ ಅನುಕೂಲವಾಗುತ್ತದೆ, ಕಡಿಮೆ ಬಡ್ಡಿ ಸಿಗುತ್ತದೆ ಎಂದು ಹೇಳಿ ಸಿಬ್ಬಂದಿ ಒಪ್ಪಿಸಿದರು ಎಂದು ಅವರು ಆರೋಪಿಸಿದ್ದಾರೆ.
3 ವರ್ಷ 3 ತಿಂಗಳು ತಪ್ಪದೆ ಪಾವತಿ
ಸಾಲ ಪಡೆದಾಗಿನಿಂದ ಸುಮಾರು 3 ವರ್ಷ 3 ತಿಂಗಳು ಗೌರಮ್ಮ ಒಂದು ಕಂತನ್ನೂ ತಪ್ಪಿಸದೆ ಪಾವತಿಸಿದ್ದಾರೆ. ಸಾಲ ತೀರಿಸಲು ತಮ್ಮ ಇಬ್ಬರು ಮಕ್ಕಳನ್ನು ಬೇರೆಯವರ ಮನೆಯಲ್ಲಿ ಜೀತಕ್ಕೆ ಇಟ್ಟಿದ್ದಾಗಿ ಹೇಳಿದ್ದಾರೆ. ತಾವೂ ನಿತ್ಯ ಕೂಲಿ ಮಾಡುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಕೆಲಸಕ್ಕೆ ಹೋಗಲಾಗದೆ ಕಂತು ಕಟ್ಟಲು ಸಾಧ್ಯವಾಗಿಲ್ಲ.
ಆರೋಗ್ಯ ಸರಿಯಿಲ್ಲ, ಸ್ವಲ್ಪ ಸಮಯ ಕೊಡಿ ಎಂದು ವೃದ್ಧೆ ಕೈಮುಗಿದು ಬೇಡಿಕೊಂಡರೂ ಫೈನಾನ್ಸ್ ಸಿಬ್ಬಂದಿ ಕರುಣೆ ತೋರಿಲ್ಲ ಎಂದು ಆರೋಪಿಸಲಾಗಿದೆ. ನ್ಯಾಯಾಲಯದ ಆದೇಶ ತಂದು ಮನೆಗೆ ಬೀಗ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ತಕ್ಷಣದ ಕ್ರಮಕ್ಕೆ ರೈತ ಮುಖಂಡರ ಆಗ್ರಹ
ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ಕುಮಾರ್, ಸಾಲ ನೀಡುವಾಗ ಮರುಪಾವತಿ ಸಾಮರ್ಥ್ಯ ಪರಿಶೀಲಿಸದೆ ಕಮಿಷನ್‌ಗಾಗಿ ಸಾಲ ನೀಡಿ, ಈಗ ಕುಟುಂಬವನ್ನೇ ಬೀದಿಗೆ ತಳ್ಳಿರುವುದು ಆಘಾತಕಾರಿ ಎಂದಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಬಂಧಿತ ಮೈಕ್ರೋ ಫೈನಾನ್ಸ್ ಸಂಸ್ಥೆ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು, ಸೀಜ್ ಮಾಡಿದ ಮನೆಯನ್ನು ತಕ್ಷಣ ತೆರವುಗೊಳಿಸಿ ವೃದ್ಧೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




