ಕೋರ್ಟ್​​ನಲ್ಲೇ ಕಂಕಣಬಲ: 2 ವರ್ಷಗಳಲ್ಲಿ ಒಂದಾಯ್ತು ಒಡೆದು ಹೋದ 180 ಸಂಸಾರ, ಏಕಕಾಲದಲ್ಲಿ ಒಂದಾದ 8 ಜೋಡಿ

ಕೋರ್ಟ್ ಅಂದರೆ, ಕಾನೂನು ಸಂಘರ್ಷ, ವಾದ-ಪ್ರತಿವಾದ ಇತ್ಯಾದಿಗಳೇ ನೆನಪಿಗೆ ಬರುತ್ತವೆ. ಆದರೆ ಈಗ ಕಾಲ ಬದಲಾಗಿದೆ. ದಾವಣಗೆರೆಯಲ್ಲಿ ಮಾನವೀಯತೆ ತುಂಬಿಕೊಂಡಿರುವ ನ್ಯಾಯಮೂರ್ತಿಗಳ ಹಾಗೂ ವಕೀಲರ ವಿಶೇಷ ಪ್ರಯತ್ನದಿಂದ ಸಂಭ್ರಮ ಸೃಷ್ಟಿಯಾಗುತ್ತದೆ. ಹತ್ತಾರು ವರ್ಷ ಪ್ರತ್ಯೇಕವಾಗಿದ್ದ ಪತಿ ಪತ್ನಿಯರು ಒಂದಾಗುತ್ತಿದ್ದಾರೆ. ಎರಡು ವರ್ಷಗಳಲ್ಲಿ ಬರೋಬರಿ 180 ಜೋಡಿಗಳ ಒಡೆದು ಹೋದ ಸಂಸಾರ ಒಂದಾಗಿದೆ!

ಕೋರ್ಟ್​​ನಲ್ಲೇ  ಕಂಕಣಬಲ: 2 ವರ್ಷಗಳಲ್ಲಿ ಒಂದಾಯ್ತು ಒಡೆದು ಹೋದ 180 ಸಂಸಾರ, ಏಕಕಾಲದಲ್ಲಿ ಒಂದಾದ 8 ಜೋಡಿ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Nov 14, 2025 | 11:37 AM

ದಾವಣಗೆರೆ, ನವೆಂಬರ್ 14: ಕ್ಷುಲಕ ಕಾರಣಕ್ಕೆ ಜಗಳವಾಡಿ ಕೋರ್ಟ್​​ ಸುತ್ತಾಡಿ ಸುಸ್ತಾಗಿದ್ದವರು, ಪ್ರತ್ಯೇಕ ಆಗಬೇಕು ಎಂಬ ಸಂಕಲ್ಪ ಮಾಡಿಯೇ ನ್ಯಾಯವಾದಿಗಳ ಮೂಲಕ ಕೇಸ್ ನಡೆಸುತ್ತಿದ್ದವರು ಅಲ್ಲಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಬೇರೆಯಾಗಬೇಕು ಎಂದುಕೊಂಡಿದ್ದವರೆಲ್ಲಾ ವೈಮನಸ್ಸು ಬಿಟ್ಟು ಒಂದಾಗಿದ್ದಾರೆ. ದಾವಣಗೆರೆ (Davanagere) ನಗರದ ಕೌಟುಂಬಿಕ ನ್ಯಾಯಾಲಯದ (Family Court) ಆವರಣ ಒಂದು ರೀತಿಯಲ್ಲಿ ಸಾಮೂಹಿತ ವಿವಾಹದ ಕಲ್ಯಾಣ ಮಂಟಪವಾಗಿ ಕಾಣಿಸಿದೆ. ವಕೀಲರೇ ಇಲ್ಲಿ ಎರಡು ಕಡೆಯ ಬೀಗರು. ನ್ಯಾಯಮೂರ್ತಿಗಳೇ ಒಂದು ರೀತಿಯಲ್ಲಿ ಪ್ರಧಾನ ಪರೋಹಿತರು! ಇವರೇ ವಧು-ವರರಿಗೆ ಶುಭ ಹಾರೈಸುತ್ತಿದ್ದರು. ಮದುವೆ ನಡೆಸಿಕೊಡುತ್ತಿದ್ದರು. ಅಂದಹಾಗೆ, ಬೇರೆಯಾಗಬೇಕು ಎಂದುಕೊಂಡಿದ್ದ ಬರೋಬ್ಬರಿ 8 ಜೋಡಿಗಳು ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ತೀಚೆಗೆ ಮತ್ತೆ ಒಂದಾಗಿವೆ.

ಇದರೊಂದಿಗೆ, ಕಳೆದ ಎರಡು ವರ್ಷಗಳಲ್ಲಿ ಬರೋಬರಿ 180 ಜೋಡಿಗಳನ್ನು ಒಂದಾಗಿಸಿದ ಹೆಗ್ಗಳಿಕೆ ಈ ನ್ಯಾಯಾಲಯದ್ದಾಗಿದೆ. ನ್ಯಾಯಾಲಯದಲ್ಲಿ ವಕೀಲರು ಹಾಗೂ ನ್ಯಾಯಮೂರ್ತಿಗಳ ಮಾನವೀಯತೆಗೆ ಹಿಡಿದ ಕೈಗನ್ನಡಿ ಇದಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜೋಡಿಗಳ ಒಂದು ಮಾಡಿ ಸುಮ್ಮನಿರಲ್ಲ ಕೋರ್ಟ್!

ಬೇರೆಯಾಗಲು ಹೊರಟ ಜೋಡಿಗಳನ್ನು ಮತ್ತೆ ಒಂದುಮಾಡುವುದಷ್ಟೇ ಅಲ್ಲದೆ, ಪ್ರತಿ ತಿಂಗಳು ಆ ಜೋಡಿಗಳ ಬಗ್ಗೆ ಕೋರ್ಟ್ ಮೇಲಿ್ವಿಚಾರಣೆ ನಡೆಸುತ್ತದೆ. ಆ ಜೋಡಿ ಒಂದು ವರ್ಷದ ವರೆಗೆ ಒಂದಾಗಿ ಚೆನ್ನಾಗಿ ಸಹಬಾಳ್ವೆ ನಡೆಸಿದರೆ ಅಲ್ಲಿಗೆ ಪ್ರಕರಣವನ್ನು ಮುಕ್ತಾಯ ಮಾಡುತ್ತದೆ.

ಈ ನ್ಯಾಯಾಲಯದಲ್ಲಿ ವರ್ಷದಲ್ಲಿ ನಾಲ್ಕು ಸಲ ಲೋಕ ಅದಾಲತ್ ನಡೆಯುತ್ತದೆ. ಈ ವೇಳೆ, ವಕೀಲರು ಹಾಗೂ ನ್ಯಾಯಮೂರ್ತಿಗಳು ಪ್ರತ್ಯೇಕವಾದ ಪತಿ-ಪತ್ನಿಯರನ್ನು ಕರೆದು ಆತ್ಮೀಯವಾಗಿ ಮಾತಾಡುತ್ತಾರೆ. ಮನವರಿಕೆ ಮಾಡಿಕೊಡುತ್ತಾರೆ.

ಮಹಾವೀರ ಮ ಕರೆಣ್ಣವರ, ಹಿರಿಯ ಸಿವಿಲ್ ನ್ಯಾಯಧೀಶರು

ಇದಷ್ಟೆ ಅಲ್ಲದೆ, ದಾವಣಗೆರೆ ನಗರದ ರಾಮ್ ನಗರದಲ್ಲಿ ಇರುವ ರಾಜ್ಯ ಮಹಿಳಾನಿಯದಲ್ಲಿನ ಅನಾಥ ಹಾಗೂ ಹತ್ತಾರು ಕಾರಣಕ್ಕೆ ಮನೆ ಬಿಟ್ಟು ಬಂದ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಮದುವೆ ಮಾಡಿಸುತ್ತದೆ. ಇಂತಹ 40ಕ್ಕೂ ಹೆಚ್ಚು ಅನಾಥ ಹೆಣ್ಣು ಮಕ್ಕಳಿಗೆ ಗಂಡು ಹುಡುಕಿ ಮದುವೆ ಮಾಡಲಾಗಿದೆ. ಇದರಲ್ಲಿ ಸಹ ಕೋರ್ಟ್ ಪಾತ್ರ ಮಹತ್ವದ್ದಾಗಿದೆ. ಇತ್ತೀಚಿಗೆ ಇಬ್ಬರು ವಿಶೇಷ ಚೇತನ ಯುವಕ ಯುವತಿಗೆ ಮದ್ವೆ ಮಾಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್ – ದಾವಣಗರೆ ಮಧ್ಯೆ ಕೆಎಸ್​ಆರ್​ಟಿಸಿ ಫ್ಲೈಬಸ್​ ಸೇವೆಗೆ ಚಾಲನೆ

ಒಟ್ಟಿನಲ್ಲಿ, ನ್ಯಾಯಾಲಯದಿಂದಾಗಿ ಕಳೆದ 2 ವರ್ಷಗಳಲ್ಲಿ ಮತ್ತೆ ಒಂದಾದ 180 ಜೋಡಿಗಳ ಪೈಕಿ ಶೇ 99 ರಷ್ಟು ಜೋಡಿಗಳು ಮತ್ತೆ ನೆಮ್ಮದಿಯ ಬದುಕು ಸಾಗಿಸುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Fri, 14 November 25