
ದಾವಣಗೆರೆ, ಸೆಪ್ಟೆಂಬರ್ 11: ಹುಬ್ಬಳ್ಳಿ ಹುಡುಗ ನವೀನ್ ಎಂಬಾತ ಮೂರು ವರ್ಷಗಳ ಹಿಂದೆ ದಾವಣಗೆರೆಗೆ (Davanagere) ಬಂದು ಪೇಪರ್ ವ್ಯಾನ್ ಓಡಿಸುತ್ತಿದ್ದ. ಆಗ ಹರಪನಹಳ್ಳಿ ಮೂಲದ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆ ಎರಡು ಮಕ್ಕಳ ತಾಯಿ. ಆದರೂ ಅವರಿಬ್ಬರ ನಡುವೆ ಪರಿಚಯವಾಗಿ, ನಂತರ ಪ್ರೀತಿ ಮೂಡಿತು. ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಆ ಮಹಿಳೆ ಪ್ರಿಯಕರನಿಗಾಗಿ ಪತಿಯನ್ನೇ ಬಿಟ್ಟು ಬಂದಳು. ಮಕ್ಕಳನ್ನೂ ಕರೆದುಕೊಂಡೇ ಬಂದು ಬಿಟ್ಟಿದ್ದಳು!
ಇಬ್ಬರು ಮಕ್ಕಳ ತಾಯಿ ಹಾಗೂ ಯುವಕನ ಪ್ರೇಮ ಪ್ರಕರಣಕ್ಕೆ ತಿರುವು ದೊರೆಯಲು ಅದೊಂದು ಬೆಳವಣಿಗೆ ಸಾಕಾಯಿತು. ನವೀನ್ಗೆ ಕೆಎಸ್ಆರ್ಟಿಸಿಯಲ್ಲಿ ಉದ್ಯೋಗ ದೊರೆತಿದೆ. ಒಳ್ಳೆಯ ಉದ್ಯೋಗ ದೊರೆಯುತ್ತಿದ್ದಂತೆಯೇ ಆತನಿಗೆ ಮಹಿಳೆ ಬೇಡವಾಗಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆ ದಾವಣಗೆರೆ ನಗರದ ಶಾಮನೂರ ರಸ್ತೆಯ ಟ್ಯಾಂಕ್ ಪಾರ್ಕ್ನಲ್ಲಿ ಭಾರಿ ಜಗಳ, ಹೊಡೆದಾಟ ನಡೆದಿದೆ. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ.
ಹರಪನಹಳ್ಳಿ ಮೂಲದ ಮಹಿಳೆ ನವೀನ್ನನ್ನೇ ನಂಬಿ ಬಂದಿದ್ದು, ಪತಿಯಿಂದ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಾಳೆ. ಆದರೆ, ಈಗ ನವೀನ್ ಕೆಎಸ್ಆರ್ಟಿಸಿಯಲ್ಲಿ ಕೆಲಸ ಸಿಗುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದಾನೆ. ನನ್ನ ಚಿನ್ನಾಭರಣ ಹಾಗೂ ಹಣ ಪಡೆದು ಈಗ ವಂಚಿಸುತ್ತಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಇದೀಗ ನ್ಯಾಯ ಬೇಕೆಂದು ದಾವಣಗೆರೆ ಬಡಾವಣೆ ಠಾಣೆ ಪೊಲೀಸರ ಮೊರೆ ಹೋಗಿದ್ದಾಳೆ.
ಇದನ್ನೂ ಓದಿ: ಕರ್ನಾಟಕದ ಮಾಜಿ ಶಾಸಕರಿಗೆ ಡಿಜಿಟಲ್ ಅರೆಸ್ಟ್: 30 ಲಕ್ಷ ರೂ ಪಂಗನಾಮ!
ಕಳೆದ ಹಲವು ದಿನಗಳಿಂದ ಇಬ್ಬರ ನಡುವೆ ಜಗಳ ಆಗುತ್ತಲೇ ಇದೆ. ಆದರೆ ಬುಧವಾರ ಮಾತ್ರ ಸಾರ್ವಜನಿಕವಾಗಿಯೇ ಪಾರ್ಕ್ನಲ್ಲೇ ಹೊಡೆದಾಡಿಕೊಂಡ ಕಾರಣ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರನ್ನೂ ಬಡಾವಣೆ ಠಾಣೆ ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಆತ ತನಗೆ ವಂಚನೆ ಮಾಡುತ್ತಿದ್ದಾನೆ ಎಂದು ಪೊಲೀಸರ ಬಳಿ ಮಹಿಳೆ ದೂರಿದ್ದಾಳೆ. ಆದರೆ, ಆತ ಮದ್ಯಪಾನದ ಅಮಲಿನಲ್ಲಿರುವುದರಿಂದ ಮರುದಿನ ವಿಚಾರಣೆ ಮಾಡುವುದಾಗಿ ಪೊಲೀಸರು ಹೇಳಿ ಕಳುಹಿಸಿದ್ದಾರೆ. ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
Published On - 7:55 am, Thu, 11 September 25