ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ದರೋಡೆ ಹಾಗೂ ದೇವಸ್ಥಾನದ ನಿಧಿ ಕಳ್ಳರ ಗ್ಯಾಂಗ್​ ಹಿಡಿದ ದಾವಣಗೆರೆ ಪೊಲೀಸ್ರು

| Updated By: ಆಯೇಷಾ ಬಾನು

Updated on: Jul 24, 2023 | 9:12 AM

ದರೋಡೆ ಹಾಗೂ ದೇವಸ್ಥಾನದ ನಿಧಿ ಕಳ್ಳರ ಗ್ಯಾಂಗನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಕಳ್ಳರು ದೇವಾಲಯದ ನಿಧಿಗಾಗಿ ಶೋಧ ನಡೆಸುತ್ತಿದ್ದದ್ದು ಬಯಲಾಗಿದೆ.

ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ದರೋಡೆ ಹಾಗೂ ದೇವಸ್ಥಾನದ ನಿಧಿ ಕಳ್ಳರ ಗ್ಯಾಂಗ್​ ಹಿಡಿದ ದಾವಣಗೆರೆ ಪೊಲೀಸ್ರು
ಜಗಳೂರು ಪೊಲೀಸರು
Follow us on

ದಾವಣಗೆರೆ, ಜುಲೈ 24: ಜಿಲ್ಲೆಯ ಜಗಳೂರು ಪೊಲೀಸರು(Jagalur Police) ಭರ್ಜರಿ ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ದರೋಡೆ ಹಾಗೂ ದೇವಸ್ಥಾನದ ನಿಧಿ ಕಳ್ಳರ ಗ್ಯಾಂಗನ್ನು ಬಂಧಿಸಿದ್ದಾರೆ. ಹೊಂಚು ಹಾಕುತ್ತಿದ್ದಾಗಲೇ 6 ಜನ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದು ದಾವಣಗೆರೆಯ ಅಜಾದ್‌ನಗರ ನಿವಾಸಿ ದಿವಾನ್‌ಸಾಬ್‌ ಜಾವೀದ್, ಜಗಳೂರು ನಿವಾಸಿ ಪಿ.ಕಲ್ಲೇಶಿ(48), ಹುಬ್ಬಳ್ಳಿಯ ಮಲ್ಲಿಕಾರ್ಜುನ(30), ಹನುಮಂತ ಸೋಪಾನಿ ಪವಾರ್(33), ಅಮೀರ್‌ಖಾನ್‌ ಪಠಾಣ್, ಇಳಕಲ್ ಮೂಲದ ಮುರ್ತಾಜಾಸಾಬ್ ಬಂಧಿತ ಆರೋಪಿಗಳು.

ಈ ಖದೀಮರು ವಿವಿಧ ಪುರಾತನ ದೇವಾಲಯ ಗುರುತಿಸಿ ನಿಧಿ ಹುಡುಕುತ್ತಿದ್ದರು. ಇನ್ನು ಪೊಲೀಸರ ತನಿಖೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ. ಬಿದರಕೆರೆ-ಸಂತೆ ಮುದ್ದಾಪುರ ಗ್ರಾಮಗಳ ನಡುವೆ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಬಂಧಿತರು ಆಂಜನೇಯಸ್ವಾಮಿ ದೇವಸ್ಥಾನದ ಮುಂದಿರುವ ಬಸವಣ್ಣ ದೇವಸ್ಥಾನದಲ್ಲಿ ನಿಧಿಗಾಗಿ ಗುಂಡಿ ಅಗೆದಿದ್ದರು. ಬಸವಣ್ಣನ ಮೂರ್ತಿ ಕಿತ್ತು ಪಕ್ಕದಲ್ಲಿಟ್ಟು ಶೋಧನೆ ಮಾಡಿದ್ದರು. ಸದ್ಯ ನಿನ್ನೆ ರಾತ್ರಿ ಗಸ್ತಿನಲ್ಲಿದ್ದ ಜಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಅಡ್ಡೆಯನ್ನು ಪತ್ತೆ ಹಚ್ಚಿದ ವಿವಿಪುರಂ ಪೊಲೀಸರು, ಓರ್ವ ಅರೆಸ್ಟ್

ಜಗಳೂರು ತಾಲೂಕಿನ ಲಿಂಗಣ್ಣಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ಕಂಡು ಅನುಮಾನಗೊಂಡ ಗಸ್ತು ಪೊಲೀಸ್ ಕಾರಿನ ಬಳಿ ಬರುತ್ತಿದ್ದಂತೆ, ಹೊರಗೆ ನಿಂತಿದ್ದ ಇಬ್ಬರು ಏಕಾಏಕಿ ಓಡಿಹೋಗಲು ಯತ್ನಿಸಿದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರನ್ನೂ ಬೆನ್ನಟ್ಟಿ ಪೊಲೀಸರು ಹಿಡಿದಿದ್ದು ನಂತರ ಇತರರು ಕೂಡ ಸಿಕ್ಕಿಬಿದ್ದಿದ್ದಾರೆ. ಆಗ ಇವರೆಲ್ಲ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆ ಮಾಡಿ ನಿಧಿಗಾಗಿ ಶೋಧ ನಡೆಸುತ್ತಿರುವುದು ಬಯಲಾಗಿದೆ.

ಬಂಧಿತ ಆರೋಪಿಗಳಿಂದ 1 ಕಾರು, ಕಬ್ಬಿಣದ ಸುತ್ತಿಗೆ, ಕೈಗವಸು, ಕಟ್ಟಿಂಗ್ ಪ್ಲೇಯರ್, ಕಬ್ಬಿಣದ ಪ್ಲಾಟ್‌ ಚಿಸೆಲ್‌, ಸುರ್‌ಸುರ್‌ಬತ್ತಿ, ಖಾರದ ಪುಡಿ ಪಾಕೇಟ್​, ಮೊಬೈಲ್‌ಗಳು, ಟಾರ್ಚ್, ಚಾಕು ಜಪ್ತಿ ಮಾಡಲಾಗಿದೆ. ಪಿಎಸ್‌ಐ ಎಸ್.ಡಿ.ಸಾಗರ್, ಸಿಬ್ಬಂದಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ದಾವಣಗೆರೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ