ದಾವಣಗೆರೆ: ಜಿಲ್ಲೆಯ ಹರಿಹರ ನಗರದ ಹಿರಿಯ ಸ್ವಾತಂತ್ರ್ಯ ಯೋಧ ಜಿ.ಗೋವಿಂದರಾಜ್ (95) ಇಂದು ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಹರಿಹರ ಹಾಗೂ ದಾವಣಗೆರೆ ಸೇರಿದಂತೆ ಹಲವಾರು ಕಡೆ ನಡೆದ ಹೋರಾಟದಲ್ಲಿ ಗೋವಿಂದರಾಜ್ ಭಾಗಿ ಆಗಿದ್ದರು. ಜೊತೆಗೆ ಆರ್ಯ ಈಡಿಗರ ಸಮಾಜದ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು. ಇಂದು ಗೋವಿಂದರಾಜು ಅವರು ಮೂವರು ಪುತ್ರರು ಹಾಗೂ ಮೂರು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನ ಅಗಲಿದ್ದು, ಹರಿಹರ ನಗರದ ಧಾಲ್ಮಿಯಾ ವಿಶ್ರಮ್ಘಾಟ್ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ದೇಶದಲ್ಲಿ ಅಂದು ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮೂರು ಜನ 18 ರಿಂದ 20ವರ್ಷದೊಳಗಿನ ಚಿಗುರು ಮೀಸೆ ಯುವಕರು ಹೋರಾಟಕ್ಕೆ ಹೆಸರಾಗಿದ್ದರು. ಅವರೇ ಹರಿಹರದ ತ್ರಿಮೂರ್ತಿಗಳು ಚಂದ್ರಶೇಖರಯ್ಯ, ಜಿ.ಕೃಷ್ಣಮೂರ್ತಿ ಹಾಗೂ ಜಿ. ಗೋವಿಂದರಾಜ್. ಜಿಲ್ಲೆಯ ಹರಿಹರ ನಗರ ಸಿವಾಸಿಗಳಾದ ಇವರು ಪೋಸ್ಟ್ ಆಫೀಸ್ ಸೇರಿದಂತೆ ಹಲವಾರು ಕಡೆ ಹೋರಾಟ ಮಾಡುತ್ತಲೇ ಇದ್ದರು. ಹರಿಹರ ಅಂದರೆ ಕೈಗಾರಿಕೆಗೆ ಪ್ರಸಿದ್ಧವಾದ ಸ್ಥಳ ಆದ್ದರಿಂದ ಹಲವಾರು ಕಂಪನಿಗಳಿದ್ದವು ಇದೇ ಕಾರಣಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹತ್ತಾರು ಕಡೆಯಿಂದ ಬಂದ ಕಾರ್ಮಿಕ ವರ್ಗ ಇಲ್ಲಿ ನೆಲೆಸಿತ್ತು. ಇವರನ್ನೆಲ್ಲ ಹೋರಾಟಕ್ಕಾಗಿ ಸಜ್ಜುಗೊಳಿಸಿದ್ದು ಇದೇ ಹರಿಹರದ ತ್ರಿಮೂರ್ತಿಗಳು. ಅಂದು ಬ್ರಿಟಿಷ್ ಅಧಿಕಾರಿಗಳಿಗೆ ಕಿರಿಕಿರಿ ಆಗುವಷ್ಟು ಇವರ ಹೋರಾಟವಿದ್ದಿತ್ತು. ಈ ಮೂವರಲ್ಲಿ ಕೊನೆಯದಾಗಿ ಉಳಿದಿದ್ದ ಜಿ.ಗೋವಿಂದರಾಜ್ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 am, Mon, 16 January 23