ದಾವಣಗೆರೆ: ಸಂಚಾರಿ ನಿಯಮ‌ ಉಲ್ಲಂಘನೆ ಶುಲ್ಕ ಪಾವತಿ ಸೌಲಭ್ಯ; ಇನ್ಮುಂದೆ ಅಂಚೆ ಕಚೇರಿಗಳಲ್ಲಿ ಲಭ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 29, 2023 | 7:34 PM

ಸಂಚಾರಿ ನಿಯಮ‌ ಉಲ್ಲಂಘನೆಯ ಶುಲ್ಕ ಪಾವತಿ ಸೌಲಭ್ಯವನ್ನು ಇನ್ನು ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಈ ಹಿಂದೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದಂಡ ಶುಲ್ಕ ಕಟ್ಟುವ ಕಾಟಕ್ಕೆ ಬ್ರೇಕ್ ಬಿದ್ದಿದೆ. ಈ ಹಿಂದೆ ಮಂಗಳೂರಿನಲ್ಲಿ ಇಂತಹ ಸೌಲಭ್ಯ ಆರಂಭವಾಗಿತ್ತು. ಈಗ ಬೆಣ್ಣೆ ನಗರಿ ದಾವಣಗೆರೆ ಬಂದಿದೆ. 

ದಾವಣಗೆರೆ: ಸಂಚಾರಿ ನಿಯಮ‌ ಉಲ್ಲಂಘನೆ  ಶುಲ್ಕ ಪಾವತಿ ಸೌಲಭ್ಯ; ಇನ್ಮುಂದೆ ಅಂಚೆ ಕಚೇರಿಗಳಲ್ಲಿ ಲಭ್ಯ
ದಾವಣಗೆರೆ
Follow us on

ದಾವಣಗೆರೆ, ಅ.29: ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಅಂಚೆ ಕಚೇರಿ(Post Office)ಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಿನ್ನೆ(ಅ.28) ಚಾಲನೆ ಸಿಕ್ಕಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಇಂತಹ ವ್ಯವಸ್ಥೆಗೆ ತಮ್ಮ ಕಚೇರಿಯ ಸಭಾಂಗಣದಲ್ಲಿ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ‘ದಾವಣಗೆರೆ (Davanagere) ಜಿಲ್ಲೆಯಲ್ಲಿ 2021ರಲ್ಲಿ 241, 2022ರಲ್ಲಿ 305 ಹಾಗೂ 2023ರಲ್ಲಿ 241 ಜನರು ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ಸುಮ್ಮನೆ ದಂಡ ಹಾಕುತ್ತಾರೆ ಎಂದು ದೂರುವುದಲ್ಲ. ಶೇಖಡಾ 90ರಷ್ಟು ಅಪಘಾತಗಳು ನಿರ್ಲಕ್ಷ್ಯದಿಂದ ಸಂಭವಿಸುತ್ತವೆ. ಎಚ್ಚರಿಕೆಯಿಂದ ವಾಹನ ಚಲಾಯಿಸುವತ್ತ ಗಮನ ಹರಿಸಬೇಕಿದೆ. ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸ್ಥಳದಲ್ಲೇ ದಂಡ ವಿಧಿಸುವುದರ ಜೊತೆಗೆ ಮನೆಗೆ ನೋಟಿಸ್ ಕಳುಹಿಸಲಾಗುತ್ತದೆ ಎಂದು ಹೇಳಿದರು.

ಪೋಸ್ಟ್ ಆಫೀಸ್​ಗೆ ಹೋಗಿ ದಂಡ ಶುಲ್ಕ ಕಟ್ಟಲು ಅವಕಾಶ

ದಂಡದ ಹಣವನ್ನು ಪಾವತಿಸಲು ಕರ್ನಾಟಕ ಒನ್‌ನಲ್ಲೂ ಅವಕಾಶವಿಲ್ಲದೇ ಇದ್ದುದರಿಂದ ಪೊಲೀಸ್ ಠಾಣೆಗಳಲ್ಲೇ ಬಂದು ದಂಡ ಪಾವತಿಸಬೇಕಾಗಿತ್ತು.ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ‌ಕಿರಿಕಿರಿ ತಪ್ಪಿಸಲು ಅಂಚೆ ಇಲಾಖೆಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಜಿಲ್ಲೆಯಲ್ಲಿ ಈವರೆಗೆ 1.32 ಲಕ್ಷ ಚಲನ್ ನೀಡಿದ್ದು, ಅವುಗಳಲ್ಲಿ 1.11ಲಕ್ಷ ಚಲನ್ ಬಾಕಿ ಇದೆ. ಇವರೆಲ್ಲಾ ಪೊಲೀಸ್ ಠಾಣೆ ಬದಲು ಪೋಸ್ಟ್ ಆಫೀಸ್ ಗೆ ಹೋಗಿ ದಂಡ ಶುಲ್ಕ ಕಟ್ಟ ಬಹುದಾಗಿದೆ.

ಇದನ್ನೂ ಓದಿ:Mangaluru News: ಸಂಚಾರ ನಿಯಮ ಉಲ್ಲಂಘನೆ; 222 ಡಿಎಲ್​​ಗಳ ಅಮಾನತಿಗೆ ಮಂಗಳೂರು ಪೊಲೀಸರ ಶಿಫಾರಸು

ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಬಹುದು

ಇನ್ನು 10 ಹಾಗೂ 15 ಕೇಸ್‌ಗಳು ಇರುವವರಿಗೆ ವಿಭಜಿಸಿ ನೋಟಿಸ್ ನೀಡಿತ್ತು. ನವೆಂಬರ್‌ವರೆಗೆ ದಂಡದಲ್ಲಿ ಶೇ 50ರಷ್ಟು ರಿಯಾಯಿತಿಯನ್ನು ನೀಡಲಾಗಿತ್ತು. ಅಂಚೆ ಇಲಾಖೆಯ ಸಹಯೋಗದೊಂದಿಗೆ ನೋಟಿಸ್ ನೀಡಿರುವವರು ಎಲ್ಲಿ ಬೇಕಾದರೂ ದಂಡ ಪಾವತಿಸಬಹುದು. ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸಬಹುದು. ಸ್ಮಾರ್ಟ್‌ಸಿಟಿಯಿಂದ ಅಳವಡಿಸಿರುವ ಸರ್ವೆಲೆನ್ಸ್ ಕ್ಯಾಮೆರಾ ಅಳವಡಿಸಿರುವುದರಿಂದ ತುಂಬಾ ಸಹಾಯವಾಗಿದೆ. ಜನರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಗುರಿಯ ಒಂದು ಭಾಗವಾಗಿದೆ. ರಾಜ್ಯದಲ್ಲೇ ಮಂಗಳೂರಿನಲ್ಲಿ ಮೊದಲು ಈ ಯೋಜನೆಯನ್ನು ಜಾರಿಗೊಳಿಸಿದ್ದು, ಅಲ್ಲಿ ಯಶಸ್ವಿಯಾಗಿದೆ. 2ನೇಯದಾಗಿ ದಾವಣಗೆರೆಯಲ್ಲಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ 260 ಅಂಚೆ ಕಚೇರಿಗಳಿವೆ. 47 ಗಣಕೀಕೃತ ಕಚೇರಿಗಳಿದ್ದು ಅಲ್ಲಿ ದಂಡ ಶುಲ್ಕ ಕಟ್ಟ ಬಹುದಾಗಿದೆ ಎಂದರು.

ದೇಶದಲ್ಲಿ 1.50 ಲಕ್ಷ ಅಂಚೆ ಕಚೇರಿಗಳು ಇದ್ದು, ಪ್ರತಿ ಹಳ್ಳಿಗಳಲ್ಲೂ ಸೇವೆ ಇದೆ. ಕೋರ್ ಬ್ಯಾಂಕಿಂಗ್ ಸಿಸ್ಟಮ್ ಅಳವಡಿಸಿಕೊಂಡಿದ್ದು, ಯಾವುದೇ ಒಂದು ರಾಷ್ಟ್ರೀಕೃತ ಬ್ಯಾಂಕ್‌ಗೆ ಸರಿಸಾಟಿಯಾಗಿ ಸೇವೆ ಒದಗಿಸುತ್ತಿವೆ. ವಿಮೆ ಸೇವೆ ಎಲ್‌ಐಸಿ ಬಿಟ್ಟರೆ 2ನೇ ಸ್ಥಾನದಲ್ಲಿ ವಿಮಾ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಮೊದಲು ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮಾತ್ರ ಸೇವೆ ನೀಡುತ್ತಿದ್ದೆವು. ಈಗ ಹಂತಹಂತವಾಗಿ ಎಲ್ಲರಿಗೂ ವಿಸ್ತರಿಸುತ್ತಿದೆ. ಸಾಮಾನ್ಯ ಸೇವೆಗಳು ಪ್ರತಿಯೊಂದು ಅಂಚೆ ಕಚೇರಿಯಲ್ಲೂ ಲಭ್ಯ ಇರುವಂತೆ ಅಂಚೆ ಇಲಾಖೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ