
ದಾವಣಗೆರೆ, ಡಿಸೆಂಬರ್ 28: ಸರ್ಕಾರಿ ಅಧಿಕಾರಿಗಳು (Government officer) ಅಂದರೆ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಹೋಗಿ, ಸಂಜೆ 5 ಗಂಟೆಗೆ ಮನೆಗೆ ಹೋಗುತ್ತಾರೆ ಎನ್ನುವ ಮಾತು ಎಲ್ಲೆಡೆ ಕೇಳಿಬರತ್ತೆ. ಆದರೆ ಇಲ್ಲೊಬ್ಬರು ಅಧಿಕಾರಿ ಬೆಳ್ಳಂಬೆಳಗ್ಗೆ ಎದ್ದು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ ಗ್ರಾಮದ ವೀಕ್ಷಣೆ ಬಳಿಕ ಬೆಳಗ್ಗೆ 10 ಗಂಟೆಗೆ ಕಚೇರಿಗೆ ತೆರಳಿ ಕಾರ್ಯನಿರ್ವಹಿಸುತ್ತಾರೆ.
ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠಲ್ ರಾವ್, ಅಭಿವೃದ್ಧಿಗೆ ಹೊಸ ಭಾಷೆ ಬರೆಯಲು ಮುಂದಾಗಿದ್ಧಾರೆ. ಅಧಿಕಾರಿಗಳ ಬೆಳಗಿನ ನಡೆ, ಗ್ರಾಮಗಳ ಕಡೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳ್ಳಂಬೆಳಗ್ಗೆ ಗ್ರಾಮಗಳಿಗೆ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದ್ದಾರೆ.
ಇದನ್ನೂ ಓದಿ: ವಿವಿಧ ಕೇಸ್ಗಳನ್ನ ಭೇದಿಸಿದ ದಾವಣಗೆರೆ ಪೊಲೀಸ್: 20.38 ಕೋಟಿ ರೂ ಮಾಲು ವಾರಸುದಾರರಿಗೆ ಹಸ್ತಾಂತರ
ದಿನಕ್ಕೆ ಎರಡರಿಂದ ಮೂರು ಪಂಚಾಯಿತಿಗಳಿಗೆ ಭೇಟಿ ನೀಡಿ ಅಧ್ಯಕ್ಷರು, ಸದಸ್ಯರ ಜೊತೆ ಔಪಚಾರಿಕ ಸಭೆ ನಡೆಸಿ ಪಂಚಾಯಿತಿಯ ಕುಂದು, ಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಗ್ರಂಥಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ.
ಇನ್ನು ಸ್ವಚ್ಛತಾ ಕಾರ್ಯ ಹೇಗೆ ನಡೆಯುತ್ತಿದೆ, ಪ್ರತಿನಿತ್ಯ ತ್ಯಾಜ್ಯ ವಿಲೇವಾರಿ ವಾಹನ ಬರುತ್ತಿದೆಯಾ, ಗ್ರಾಮದಲ್ಲಿ ಏನೇನು ಸಮಸ್ಯೆ ಇದೆ ಅಂತ ಗ್ರಾಮಸ್ಥರ ಬಳಿ ಮಾಹಿತಿ ಪಡೆದುಕೊಂಡು ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಕಾರ್ಯ ಕೂಡ ಮಾಡುತ್ತಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ್ ವಿಠಲ್ ರಾವ್ ಈಗಾಗಲೇ ಮಾಯಕೊಂಡ, ಅಣಜಿ, ನರಗನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದು, ನಿತ್ಯ ಬೆಳಗ್ಗೆ 6 ಗಂಟೆಯಿಂದ ಅವರ ದಿನಚರಿ ಶುರುವಾಗುತ್ತದೆ. ಗ್ರಾಮ ಪಂಚಾಯತಿಗಳನ್ನು ಭೇಟಿ ಮಾಡೋದು, ಸರ್ಕಾರಿ ವಸತಿ ಶಾಲೆ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಅವರ ಜೊತೆಯೇ ಊಟ, ಉಪಹಾರ ಮಾಡುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಚಿಕ್ಕಮಲ್ಲನಹೊಳೆಯಲ್ಲಿ ನಿಗೂಢ ಸ್ಫೋಟ, ಹಲವು ಗ್ರಾಮಗಳಿಗೆ ಕೇಳಿಸಿದ ಸದ್ದು: ಬೆಚ್ಚಿಬಿದ್ದ ಜನ
ಯಾವ ದಿನ, ಯಾವ ಗ್ರಾಮಕ್ಕೆ ಹೋಗುತ್ತಾರೆ ಎನ್ನುವುದು ಮೊದಲೇ ನಿಗದಿಯಾಗಿರುವುದಿಲ್ಲ. ಬೆಳಗ್ಗೆ ಎದ್ದ ತಕ್ಷಣ ಸಿಇಒ ಅವರಿಗೆ ಹೋಗಬೇಕೆನಿಸಿದ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಜಿಲ್ಲಾ ಕೇಂದ್ರದಿಂದ ನೂರಾರು ದೂರದಲ್ಲಿರುವ ಗ್ರಾಮಕ್ಕೂ ಕೂಡ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಬಗೆಹರಿಸಲಿದ್ದಾರೆ. ಅಲ್ಲದೆ ಜನರು ಅಧಿಕಾರಿಗಳನ್ನು ಹುಡುಕಿ ಕಚೇರಿ ಅಲೆಯುವುದಲ್ಲ ಅಧಿಕಾರಿಗಳೇ ಜನರ ಬಳಿ ಹೋಗಬೇಕು ಎನ್ನುವ ಉದ್ದೇಶ ಇವರದ್ದಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ನಡೆ ಬಗ್ಗೆ ಜನರು ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಮಟ್ಟದ ಓರ್ವ ಅಧಿಕಾರಿ ಹೀಗೆ ಗ್ರಾಮಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಅಧಿಕಾರಿಗಳು ಮೈ ಚಳಿ ಬಿಟ್ಟು ಕೆಲಸ ಮಾಡುತ್ತಾರೆ. ಅಲ್ಲದೆ ಸಾಮಾನ್ಯ ಜನರಿಗೂ ಜಿಲ್ಲಾ ಮಟ್ಟದ ಅಧಿಕಾರಿ ಅಂದರೆ ಯಾರು, ಅವರ ಕಾರ್ಯ ಏನು ಅನ್ನೋದು ಗೊತ್ತಾಗುತ್ತದೆ. ಅಧಿಕಾರಿಗಳಿಗೂ ಗ್ರೌಂಡ್ ಲೆವೆಲ್ ಮಾಹಿತಿ ಲಭ್ಯ ಆಗುತ್ತದೆ. ಗಿತ್ತೆ ಮಾಧವ್ ವಿಠಲ್ ರಾವ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರ ಕಾರ್ಯ ಇತರೆ ಅಧಿಕಾರಿಗಳಿಗೂ ಮಾದರಿ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.