ದಾವಣಗೆರೆ ಚಿಕ್ಕಮಲ್ಲನಹೊಳೆಯಲ್ಲಿ ನಿಗೂಢ ಸ್ಫೋಟ, ಹಲವು ಗ್ರಾಮಗಳಿಗೆ ಕೇಳಿಸಿದ ಸದ್ದು: ಬೆಚ್ಚಿಬಿದ್ದ ಜನ
ವಿಚಿತ್ರ ಹಾಗೂ ನಿಗೂಢ ಸ್ಫೋಟದ ಸದ್ದು ಕೇಳಿರುವುದು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಜನರ ಆತಂಕಕ್ಕೆ ಕಾರಣವಾಗಿದೆ. ಅಕ್ಕಪಕ್ಕದ ಗ್ರಾಮಗಳಿಗೂ ಈ ಸದ್ದು ಕೇಳಿದ್ದು, ಸ್ಫೋಟದ ಸದ್ದಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯ ಅಧಿಕಾರಿಗಳು ಚಿಕ್ಕಮಲ್ಲನಹೊಳೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದಾವಣಗೆರೆ, ಡಿಸೆಂಬರ್ 16: ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಡಿಸೆಂಬರ್ 14ರಂದು ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಕೇಳಿಬಂದ ವಿಚಿತ್ರ ಸ್ಫೋಟದ ಶಬ್ದ ಗ್ರಾಮಸ್ಥರಲ್ಲಿ ಭಾರಿ ಆತಂಕ ಮೂಡಿಸಿದೆ. ಬಾಂಬ್ ಸ್ಫೋಟದಂತಿದ್ದ ಈ ಶಬ್ದಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಇದೇ ಶಬ್ದವು ಅಕ್ಕಪಕ್ಕದ ಹಲವು ಗ್ರಾಮಗಳಲ್ಲೂ ಕೇಳಿಸಿಕೊಂಡಿದ್ದು, ಆತಂಕ ಇನ್ನಷ್ಟು ಹೆಚ್ಚಾಗಿದೆ. ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಕೇಳಿದ ಸ್ಫೋಟದ ಸದ್ದು ಅಲ್ಲಿ ಮಾತ್ರವಲ್ಲದೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲ್ಲೂಕಿನ ಕೋಲಮ್ಮನಹಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಲ್ಲಹಳ್ಳಿ ಸೇರಿದಂತೆ ಮೂರ್ನಾಲ್ಕು ಗ್ರಾಮಗಳಲ್ಲಿ ಕೇಳಿಸಿಕೊಂಡಿದೆ ಎನ್ನಲಾಗಿದೆ.
ಅಚಾನಕ್ ಕೇಳಿಬಂದ ಈ ಸ್ಫೋಟದ ಸದ್ದು ಏನೆಂಬುದರ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದು, ಇಡೀ ಗ್ರಾಮದಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಭೂ ಮತ್ತು ಗಣಿ ಇಲಾಖೆ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಬ್ದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆದರೆ ಇನ್ನೂ ಸ್ಪಷ್ಟ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆತಂಕ ಮಾತ್ರ ಕಡಿಮೆಯಾಗಿಲ್ಲ.
ಇದನ್ನೂ ಓದಿ: ಬೀಸುವ ಗಾಳಿಯಿಂದಲೇ ಬಾಟಲ್ಗೆ ನೀರು ತುಂಬಿಕೊಳ್ಳಬಹುದು! ದಾವಣಗೆರೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಿಶಿಷ್ಟ ಸಂಶೋಧನೆ



