Shamanur Shivashankarappa Funeral: ಪಂಚಪೀಠ ಶ್ರೀಗಳ ಸಮ್ಮುಖದಲ್ಲಿ ಶಾಮನೂರು ಶಿವಶಂಕರಪ್ಪ ಕ್ರಿಯಾಸಮಾಧಿ
ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ವಿಧಿವಿಧಾನ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ನೆರವೇರಿತು. ಪಂಚಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಪತ್ನಿ ಸಮಾಧಿ ಪಕ್ಕದಲ್ಲೇ ಅವರನ್ನು ಕ್ರಿಯಾ ಸಮಾಧಿ ಮಾಡಲಾಯಿತು. ಸಕಲ ಸರ್ಕಾರಿ ಗೌರವದೊಂದಿಗೆ, ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ವಿಧಿವಿಧಾನ ನೆರವೇರಿಸಿದರು. ಗಣ್ಯರು, ಮಠಾಧೀಶರು, ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

ದಾವಣಗೆರೆ, ಡಿಸೆಂಬರ್ 15: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ವಿಧಿ ವಿಧಾನ ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ನೆರೆವೇರಿದೆ. ಕ್ರಿಯಾಸಮಾಧಿ ಬಳಿಕ ಪಾರ್ಥಿವ ಶರೀರಕ್ಕೆ ಅಭಿಷೇಕ ಮಾಡಲಾಗಿದ್ದು, ಮಣ್ಣು ಹಾಕದೆ ಕ್ರಿಯಾ ಸಮಾಧಿಯಲ್ಲಿ ವಿಭೂತಿ, ಬಿಲ್ವಪತ್ರೆ, ಗಂಗಾಜಲ ಹಾಕುವುದರ ಜೊತೆಗೆ ಕಳಸವಿಟ್ಟು ವಿಧಿವಿಧಾನ ನೆರವೇರಿಸಲಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಪುತ್ರ S.S.ಮಲ್ಲಿಕಾರ್ಜುನ್ ಈ ಎಲ್ಲ ಕಾರ್ಯಗಳನ್ನು ನೆರವೇರಿಸಿದ್ದಾರೆ.
ಪಂಚಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ವಿಧಿವಿಧಾನ
ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಶ್ರೀ ಉಜ್ಜಯಿನಿ ಪೀಠದ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀ ಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮತ್ತು ಕಾಶೀ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ವಿಧಿ ವಿಧಾನ ನಡೆಸಲಾಗಿದೆ. ಅವರ ಪತ್ನಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆದಿದೆ.
ಇದನ್ನೂ ಓದಿ: ಭಾರತದಲ್ಲೇ ಹಿರಿಯ ಶಾಸಕ ಎನ್ನಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ರಾಜಕೀಯ ಹೇಗಿತ್ತು ನೋಡಿ
ಸಕಲ ಸರ್ಕಾರಿ ಗೌರವ ಸಲ್ಲಿಕೆ
ಶಾಮನೂರು ಅವರ ಅಂತಿಮ ಸಂಸ್ಕಾರಕ್ಕೂ ಮುನ್ನ ರಾಜ್ಯದ ವತಿಯಿಂದ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಗಿದೆ. ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಗೌರವ ನೀಡಲಾಗಿದೆ. ಬಳಿಕ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಕುಟುಂಬಸ್ಥರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ಹ ಹಸ್ತಾಂತರಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಎಂ.ಬಿ.ಪಾಟೀಲ್, ಖಂಡ್ರೆ, ಮುನಿಯಪ್ಪ, ಶರಣಬಸಪ್ಪ ದರ್ಶನಾಪುರ, ಡಿ.ಸುಧಾಕರ್, ಜಮೀರ್ ಅಹ್ಮದ್, ಬೋಸರಾಜು, ಸತೀಶ್, ಹೆಬ್ಬಾಳ್ಕರ್, ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿಶ್ರೀ, ರಂಭಾಪುರಿ ಜಗದ್ಗುರುಗಳು, ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ಸೇರಿ ವಿವಿಧ ಮಠಾಧೀಶರು, ಗಣ್ಯರು, ಶಾಮನೂರು ಕುಟುಂಬಸ್ಥರು, ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆ ವೇಳೆ ಉಪಸ್ಥಿತರಿದ್ದರು. ಕ್ರಿಶ್ಚಿಯನ್ ಧರ್ಮಗುರುಗಳು ಸಹ ಈ ವೇಳೆ ಭಾಗಿಯಾಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:27 pm, Mon, 15 December 25



