AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾರಕಕ್ಕೇರಿದ ವೀರಶೈವ VS ಲಿಂಗಾಯತ ಬಿಕ್ಕಟ್ಟು: ಬಸವಣ್ಣ ಸರ್ವರ ಆಸ್ತಿ ಎಂದು ತೊಡೆ ತಟ್ಟಿದ ವೀರಶೈವ ಲಿಂಗಾಯತ ಮಹಾಸಭಾ

ಲಿಂಗಾಯತ ಪ್ರತ್ಯೇಕ ಧರ್ಮದ ಕಿಚ್ಚು ನೆರೆ ಮನೆಯನ್ನಲ್ಲ, ಸ್ವಂತ ಮನೆಯನ್ನೇ ಸುಡತೊಡಗಿದೆ. ವೀರಶೈವರೇ ಬೇರೇ ಲಿಂಗಾಯತರೇ ಬೇರೆ ಎಂಬ ವಾದಕ್ಕೆ ಸೆಡ್ಡು ಹೊಡೆದಿರುವ ಅಖಿಲ ಭಾರತ ವೀರಶೈವ ಮಹಾಸಭಾ, ಒಡಕು ಕೆಡುಕು ಎಂದು ಗರಂ ಆಗಿದೆ. ಬಸವಣ್ಣ ಕೇವಲ ವಿರಕ್ತ ಮಠಗಳ ಆಸ್ತಿಯಲ್ಲ ಎಂದು ನೇರವಾಗಿ ಕಡ್ಡಿ ಮುರಿಂದಂತೆ ಈಶ್ವರ್ ಖಂಡ್ರೆ ಸಂದೇಶ ರವಾನಿಸಿದ್ದಾರೆ.

ತಾರಕಕ್ಕೇರಿದ ವೀರಶೈವ VS ಲಿಂಗಾಯತ ಬಿಕ್ಕಟ್ಟು: ಬಸವಣ್ಣ ಸರ್ವರ ಆಸ್ತಿ ಎಂದು ತೊಡೆ ತಟ್ಟಿದ ವೀರಶೈವ ಲಿಂಗಾಯತ ಮಹಾಸಭಾ
ಸಾಂದರ್ಭಿಕ ಚಿತ್ರ
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on: Oct 08, 2025 | 6:54 AM

Share

ಬೆಂಗಳೂರು, ಅಕ್ಟೋಬರ್ 8: ಒಂದು ಕಡೆ ವೀರಶೈವ ಲಿಂಗಾಯತ (Lingayat) ಪ್ರತ್ಯೇಕದ ಧರ್ಮದ ಕಿಚ್ಚು ಕರ್ನಾಟಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನೊಂದು ಕಡೆ ಭಿನ್ನ ರಾಗ, ಭಿನ್ನ ಧ್ವನಿ ನೆರೆ ಮನೆಯನ್ನಲ್ಲ, ವೀರಶೈವ ಲಿಂಗಾಯತರ ಸ್ವಂತ ಮನೆಯನ್ನೇ ಸುಡುತ್ತಿದೆ. ಅರಮನೆ ಮೈದಾನದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕಿಡಿ ಹೊತ್ತಿಸಿದ್ದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಕೃತಿ ಅಭಿಯಾನ ಆಂತರಿಕವಾಗಿಯೂ ಬಿಕ್ಕಟ್ಟು ಹೆಚ್ಚಾಗಲು ಕಾರಣವಾಗಿದೆ. ಬಸವ ಸಂಸ್ಕೃತಿ ಅಭಿಯಾನದ ಬಳಿಕ ವಿರಕ್ತ ಮಠಗಳ ಬೆನ್ನಿಗೆ ನಿಂತಿದ್ದ ಸಚಿವ ಎಂಬಿ ಪಾಟೀಲ್ ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ಎಂದು ನೇರವಾಗಿ ಪ್ರತಿಪಾಸಿದ್ದರು. ಅಷ್ಟೇ ಅಲ್ಲ, ಬಸವ ಸಂಸ್ಕೃತಿ ಅಭಿಯಾನದಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ದೂರವಿಡಲು ಅವರ ದ್ವಂದ್ವ ನಿಲುವೇಋ ಕಾರಣ ಅಂತ ಹೇಳಿದ್ದರು. ಇದರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಸಚಿವ ಈಶ್ವರ್ ಖಂಡ್ರೆ ಗರಂ ಆಗಿದ್ದಾರೆ.

ಜಗತ್ತಿನ ಯಾವುದೇ ಶಕ್ತಿಯೂ ವೀರಶೈವರು ಲಿಂಗಾಯತರನ್ನು ಬೇರೆ ಬೇರೆ ಮಾಡಲು ಸಾಧ್ಯವೇ ಇಲ್ಲ ಎಂದು ಖಂಡ್ರೆ ಹೇಳಿದ್ದಾರೆ. ಮಠಾಧಿಪತಿಗಳಿಗೂ ನೇರವಾಗಿ ಪ್ರಶ್ನೆ ಮಾಡಿರುವ ಈಶ್ವರ್ ಖಂಡ್ರೆ, ಬಸವಣ್ಣ ಕೇವಲ ವಿರಕ್ತ ಮಠಗಳ ಆಸ್ತಿ ಮಾತ್ರವಲ್ಲ. ಬಸವಣ್ಣನ ತತ್ವದಂತೆ ವೀರಶೈವರನ್ನೇ ನಮ್ಮವರು ಅಂತ ಒಪ್ಪಿಕೊಳ್ಳದೇ ಹೋದರೆ ಮತ್ತೆ ಇನ್ಯಾರನ್ನು ಒಪ್ಪಿಕೊಳ್ಳಬೇಕು ಎಂದು ಖಾರವಾಗಿ ಕೇಳಿದ್ದಾರೆ.

ಸದ್ಯ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾಪ ಎರಡು ರೀತಿಯಲ್ಲಿ ಕಿಡಿ ಹೊತ್ತಿಸಿದೆ. ಒಂದು, ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಧರ್ಮದ ಪ್ರಸ್ತಾಪದ ಮೂಲಕ ಹಿಂದೂ ಧರ್ಮವನ್ನು ಒಡೆಯುತ್ತಿದ್ದಾರೆ ಎಂದು ವಿರೋಧ ಪಕ್ಷ ಬಿಜೆಪಿ ಆರೋಪಿಸಿರುವುದು. ಇನ್ನೊಂದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವೀರಶೈವರನ್ನೂ ಲಿಂಗಾಯತರನ್ನೂ ಒಟ್ಟಿಗೆ ಕೊಂಡೊಯ್ಯಬೇಕು ಎಂಬ ನಿಲುವಿಗೆ ನಿಂತಿರುವುದು. ಆದರೆ ಇದನ್ನು ಒಪ್ಪದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಲಿಂಗಾಯತವೇ ಬೇರೆ ವೀರಶೈವರೆ ಬೇರೆ. ಕೇವಲ ಲಿಂಗಾಯತ ಧರ್ಮಕ್ಕೆ ಮಾತ್ರ ನಮ್ಮ ಆದ್ಯತೆ ಎನ್ನುತ್ತಿದೆ. ಹೀಗಾಗಿ ಲಿಂಗಾಯತ ವೀರಶೈವರ ನಡುವಿನ ಆಂತರಿಕ ಗುದ್ದಾಟ ಒಂದು ಕಡೆಯಾದರೆ ಹಿಂಧೂ ಧರ್ಮದಿಂದ ಲಿಂಗಾಯತವನ್ನು ಬೇರ್ಪಡಿಸುವುದೂ ಸಿದ್ದರಾಮಯ್ಯ ಹುನ್ನಾರ ಎಂಬ ಟೀಕೆಗಳು ಕೇಳಿ ಬಂದಿವೆ. ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ವೀರಶೈವ ಲಿಂಗಾಯತ ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇಯಾ ಅಥವಾ ಬೇರೆಯಾ ಎಂಬುದು ಮೊದಲು ಬಗೆಹರಿಯಬೇಕು ಎಂದಿದ್ದಾರೆ. ಜಾತಿಗಳನ್ನು ಒಡೆಯುವ ಕೆಲಸ ಸಿಎಂ ಮಾಡುತ್ತಿದ್ದಾರೆ ಲಿಂಗಾಯತರಿಗೆ ಇಲ್ಲದ ಉಸಾಬರಿ ಸಿದ್ದರಾಮಯ್ಯಗೆ ಯಾಕೆ? ಸಿದ್ದರಾಮಯ್ಯ ಧರ್ಮಗುರುಗಳಾ? ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಶಕ್ತಿ ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸಲಾಗಲ್ಲ: ಸಚಿವ ಈಶ್ವರ್​ ಖಂಡ್ರೆ

ಇನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೊಸೆ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರತ್ಯೇಕ ಲಿಂಗಾಯತ ವಿಚಾರಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ. ಇದೆಲ್ಲ ಕಾರಣಗಳಿಂದ ಆಂತರಿಕವಾಗಿಯೂ ಸಮುದಾಯದಲ್ಲಿ ಕಿಡಿ ಹೊತ್ತಿದೆ, ಬಹಿರಂಗವಾಗಿಯೂ ಸಮರಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ನಾಂದಿ ಹಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ