ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು: ಮಠಾಧಿಪತಿ ಒಕ್ಕೂಟ ಕೈಗೊಂಡ 5 ನಿರ್ಣಯಗಳು
2017 ರಲ್ಲಿ ಬಹುದೊಡ್ಡ ರಾಜಕೀಯ ತಿರುವಿಗೆ ಕಾರಣವಾಗಿದ್ದು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ. ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೆ ಇದೀಗ ಮತ್ತೊಮ್ಮೆ ಅಧಿಕೃತ ಚಾಲನೆ ಸಿಕ್ಕಿದೆ. ಹಿಂದೂ ಧರ್ಮದಿಂದ ದೂರ ಹೋಗಿ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಲಿಂಗಾಯತ ಮಠಾಧೀಶರ ಒಕ್ಕೂಟ ಕಹಳೆ ಮೊಳಗಿಸಿದ್ದು, ಈ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಬೆಂಗಳೂರು, (ಅಕ್ಟೋಬರ್ 05): ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಮತ್ತೊಮೆ ಮುನ್ನೆಲೆಗೆ ಬಂದಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಈಡೇರುವವರಿಗೂ ಹೋರಾಟ ಮುಂದುವರೆಯಬೇಕೆಂಬ ಸಲಹೆ ಗಳು ಮೊಳಗಿವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ2025ರ ಸಮಾರೋಪ ಸಮಾರಂಭದಲ್ಲಿ 350 ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರು ಒಗ್ಗೂಡಿ ಪ್ರತ್ಯೇಕ ಲಿಂಗಾಯತ ಧರ್ಮದ ಕಹಳೆ ಮೊಳಗಿಸಿದ್ದಾರೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಬೈಲೂರು ನಿಷ್ಕಲ ಮಂಟಪ ನಿಜಗುಣಾನಂದ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ ಸೇರಿದಂತೆ ಲಿಂಗಾಯತ ಪ್ರತ್ಯೇಖ ಧರ್ಮಕ್ಕೆ ಬೆಂಬಲಿಸಿರುವ ಮಠಾಧಿಪತಿಗಳು ಒಕ್ಕೊರಲಿನಿಂದ ನಿರ್ಣಯ ಕೈಗೊಂಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಕರೆ
ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ನ್ಯಾ. ಎಚ್ ಎಸ್ ನಾಗಮೋಹನ್ ದಾಸ್, ಎಸ್ ಎಂ ಜಾಮದಾರ್ ಕೂಡ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಕರೆ ನೀಡಿದ್ದಾರೆ. ನ್ಯಾಯಮೂರ್ತಿ ನಾಗಮೋಹನ ದಾಸ್, ಈ ಹಿಂದೆ ತಮ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಮಿತಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿತ್ತು. ಅದನ್ನು ಆಧರಿಸಿ, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಸಕಾರಣ ನೀಡದೆ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದೆ. ರಾಜ್ಯ ಸರ್ಕಾರ ಮತ್ತೊಮೆ ವಿವರಣೆ ಹಾಗೂ ಸ್ಪಷ್ಟನೆಗಳೊಂದಿಗೆ ಕೇಂದ್ರಕ್ಕೆ ಶಿಫಾರಸು ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ಸಿಗುವವರೆಗೂ ಹೋರಾಟ ಮುಂದುವರೆಯಬೇಕು. ಈ ಹೋರಾಟದಲ್ಲಿ ಮಿತ್ರರು ಯಾರು, ಶತ್ರುಗಳು ಯಾರು ಎಂದು ಗುರುತಿಸಲು ಸಾಧ್ಯವಾಗಬೇಕು. ಶತ್ರುಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋರಾಟ ನಡೆಸಿದರೆ, ಅದು ಯಶಸ್ವಿಯಾಗುವುದಿಲ್ಲ. ಶತ್ರುಗಳನ್ನು ಹೊರಗಿಟ್ಟು ಹೋರಾಟ ರೂಪಿಸಬೇಕು ಎಂದು ಎಸ್ ಎಂ ಜಾಮದಾರ್ ಕರೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಹೂಮಳೆ ಸುರಿಸಿದ ಲಿಂಗಾಯತ ಸ್ವಾಮೀಜಿಗಳು, ವಿಡಿಯೋ ನೋಡಿ
ವೀರಶೈವ ಪಂಚ ಪೀಠಗಳ ಮಠಾಧೀಶರು ದೂರ
ಇನ್ನು ಬಸವ ಸಂಸ್ಕೃತಿ ಅಭಿಯಾನ ಶುರುವಾದಾಗ ಬಹುದೊಡ್ಡ ಗೊಂದಲ ಸಮುದಾಯದಲ್ಲೇ ಎದ್ದಿತ್ತು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಭೀಯಾನದಿಂದ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಪಂಚ ಪೀಠಗಳ ಮಠಾಧೀಶರು ದೂರವೇ ಉಳಿದಿದ್ದಾರೆ. ಅಷ್ಟೇ ಅಲ್ಲ, ಇಂದಿನ ಮಠಾಧೀಶರ ವೇದಿಕೆಯಲ್ಲಿ ಮಿಂಚಿದ್ದು ಸಚಿವ ಎಂಬಿ ಪಾಟೀಲ್. ಎಂಬಿ ಪಾಟೀಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಠಾಧೀಶರ ಒಕ್ಕೂಟದಿಂದ ಸನ್ಮಾನ ಮಾಡುವ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮದ ಕಿಚ್ಚಿಗೆ ಮತ್ತಷ್ಟು ಪ್ರಜ್ವಲಿಸುವ ಸಂದೇಶ ರವಾನಿಸಲಾಗಿದೆ.
ಸಿಎಂ ಸಿದ್ದರಾಮಯ್ಯ 2017 ರ ಘಟನೆಗಳನ್ನು ನೆನಪಿಸಿಕೊಳ್ಳದೇ ಹೋದರೂ ಕೂಡ ಪರೋಕ್ಷವಾಗಿ ಬಸವಾದಿ ಶರಣರ ಇಚ್ಚೆಗೆ ಅನುಸಾರವಾಗಿಯೇ ತಾನು ನಡೆದುಕೊಳ್ಳೂತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲದೇ ವಚನ ಸಾಹಿತ್ಯ ವಿಶ್ವ ವಿದ್ಯಾಲಯ ಸ್ಥಾಪನೆ ಬಗ್ಗೆಯೂ ಚಿಂತನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಕೃತಿ ಅಭಿಯಾನದಿಂದ ಸಚಿವ ಈಶ್ವರ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಮಲ್ಲಿಕಾರ್ಜುನ್ ದೂರವೇ ಉಳಿದಿದ್ದಾರೆ. ಈ ಮೂಲಕ ವೀರಶೈವ ಲಿಂಗಾಯತ ಸಮುದಾಯದಲ್ಲೇ ಇರುವ ಒಡಕು ಹೊರ ಬಿದ್ದಂತೆಯೂ ಆಗಿದೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ 5 ನಿರ್ಣಯಗಳು
- ಲಿಂಗಾಯತರೆಲ್ಲರೂ ಮೊದಲು ಭಾರತೀಯರು. ಲಿಂಗಾಯತ ಧರ್ಮ ಕನ್ನಡದ ಧರ್ಮ. ಧರ್ಮಕ್ಕಿಂತ ದೇಶ ಮೊದಲು. ರಾಷ್ಟ್ರಪ್ರಜ್ಞೆಯೊಂದಿಗೆ ದೇಶದ ಐಕ್ಯತೆಗೆ ಸದಾ ಶ್ರಮಿಸುವುದು.
- 12 ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಬಸವಾದಿ ಶರಣರು ಸೇರಿ ಸ್ಥಾಪಿಸಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ. ಬೌದ್ಧ, ಜೈನ, ಶಿಖ್ ಧರ್ಮಗಳಂತೆ ಲಿಂಗಾಯತರಿಗೆ ಸರಕಾರಿ ಸವಲತ್ತುಗಳು, ಮೀಸಲಾತಿ ಸೌಲಭ್ಯ ದೊರೆಯಲು ಧರ್ಮ ಮಾನ್ಯತೆಗೆ ನಿರಂತರ ಜಾಗೃತಿ ಮುಂದುವರೆಸುವುದು.
- ಸಮಾನತೆ, ಸಹೋದರತೆ, ಮಾನವೀಯ ಮೌಲ್ಯಗಳ ನಿಜಧರ್ಮ ಲಿಂಗಾಯತ ಧರ್ಮ. ಲಿಂಗಾಯತರಲ್ಲಿನ ಸಣ್ಣ, ಹಿಂದುಳಿದ ಉಪಪಂಗಡಗಳನ್ನು ನಾವೆಲ್ಲರೂ ಅಪ್ಪಿಕೊಂಡು, ಅವರ ಅಭುದ್ಯಯಕ್ಕಾಗಿ ಶ್ರಮಿಸುತ್ತಾ, ಎಲ್ಲ ಒಳಪಂಗಡಗಳ ಭೇದ ತೊರೆದು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸಬೇಕು.
- ಲಿಂಗಾಯತರೆಲ್ಲರೂ ನಮ್ಮ ಅರಿವಿನ ಕುರುಹು, ಅಸ್ಮಿತೆ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧಾರಣೆ ಮಾಡುವುದು.
- ಲಿಂಗಾಯತ ಧರ್ಮೀಯರು ತಮ್ಮ ಮನೆಗಳಲ್ಲಿ ಜನನದಿಂದ-ಮರಣದವರೆಗೆ ಶರಣ ಸಂಸ್ಕೃತಿ ಆಚರಣೆಗಳನ್ನು ಸದಾ ಅನುಸರಿಸಬೇಕು.




