AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯುಮಾಲಿನ್ಯ ಗಣನೀಯ ಹೆಚ್ಚಳ: ಕೇಂದ್ರದ ಪಟ್ಟಿಯಲ್ಲಿ ಮತ್ತಷ್ಟು ಕುಸಿದ ಬೆಂಗಳೂರು

Swachh Vayu Sarvekshan 2025: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಪ್ರಯಾಣ ಹೆಚ್ಚಾಗುತ್ತಲೇ ಇದ್ದು, ಅದರಲ್ಲೂ ಕೇಂದ್ರ ಸರ್ಕಾರದ ಸ್ವಚ್ಛ ವಾಯು ಸರ್ವೇಕ್ಷಣ- 2025 ರ ವಾರ್ಷಿಕ ಶುದ್ಧ ಗಾಳಿ ಸಮೀಕ್ಷಾ ವರದಿಯಲ್ಲಿ ರಾಜಧಾನಿಯು 28 ರಿಂದ 36ನೇ ಸ್ಥಾನಕ್ಕೆ ಕುಸಿದಿದೆ. ಬೆಂಗಳೂರಿಗರನ್ನು ಆತಂಕಕ್ಕೀಡು ಮಾಡಿದೆ.

ವಾಯುಮಾಲಿನ್ಯ ಗಣನೀಯ ಹೆಚ್ಚಳ: ಕೇಂದ್ರದ ಪಟ್ಟಿಯಲ್ಲಿ ಮತ್ತಷ್ಟು ಕುಸಿದ ಬೆಂಗಳೂರು
ಸ್ವಚ್ಛ ವಾಯು ಸರ್ವೇಕ್ಷಣ-2025 ವಾರ್ಷಿಕ ಶುದ್ಧ ಗಾಳಿ ಸಮೀಕ್ಷಾ ವರದಿಯಲ್ಲಿ ಕುಸಿದ ಬೆಂಗಳೂರು (ಸಾಂದರ್ಭಿಕ ಚಿತ್ರ)
Kiran Surya
| Updated By: Ganapathi Sharma|

Updated on: Oct 08, 2025 | 7:32 AM

Share

ಬೆಂಗಳೂರು, ಅಕ್ಟೋಬರ್ 8: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ವಾಯು ಮಾಲಿನ್ಯದ (Air Pollution) ಪ್ರಮಾಣ ಹೆಚ್ಚಾಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ವಾಯುಮಾಲಿನ್ಯದ ಪ್ರಮಾಣ ಹೆಚ್ಚಳವಾಗಿರುವುದು ತಿಳಿದುಬಂದಿದೆ. ಈಗಾಗಲೇ ಐಐಎಸ್ಸಿ ತಜ್ಞರು ಬೆಂಗಳೂರಿನಲ್ಲಿ ಈ ಹಿಂದೆ ಶೇ 70 ರಷ್ಟಿದ್ದ ಪರಿಸರದ ಪ್ರಮಾಣ ಶೇ 3 ಕ್ಕೆ ಇಳಿಕೆಯಾಗಿದೆ ಎಂಬ ವರದಿ ನೀಡಿದ್ದರು. ಇದೀಗ ಕೇಂದ್ರ ಸರ್ಕಾರದ ‘ಸ್ವಚ್ಛ ವಾಯು ಸರ್ವೇಕ್ಷಣ-2025 (Swachh Vayu Sarvekshan 2025)’ ವಾರ್ಷಿಕ ಶುದ್ಧ ಗಾಳಿ ಸಮೀಕ್ಷಾ ವರದಿಯಲ್ಲಿ ರಾಜಧಾನಿಯು 28 ರಿಂದ 36ನೇ ಸ್ಥಾನಕ್ಕೆ ಕುಸಿದಿದೆ.

ಬೆಂಗಳೂರು ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವೇನು?

ಮುಖ್ಯವಾಗಿ, ವಾಹನ ಸಂಚಾರ ಹೆಚ್ಚಳದಿಂದ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿತವಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಯೂ ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದಲೂ ಗಾಳಿಯ ಗುಣಮಟ್ಟ ಕುಸಿತ ಕಂಡಿದೆ. ಸದ್ಯ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಬಿಡುಗಡೆಗೊಳಿಸಿರುವ ‘ಸ್ವಚ್ಛ ವಾಯು ಸರ್ವೆಕ್ಷಣ-2025’ರ ವಾರ್ಷಿಕ ಶುದ್ಧ ಗಾಳಿ ಸಮೀಕ್ಷೆ ವರದಿಯಲ್ಲಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿದಿರುವುದು ಕಂಡುಬಂದಿದೆ.

ಬೆಂಗಳೂರು ವಾಯುಮಾಲಿನ್ಯ ಹೆಚ್ಚಳ: ತಜ್ಞರು ಹೇಳುವುದೇನು?

ಗಾರ್ಡನ್ ಸಿಟಿ ಎಂಬ ಬಿರುದು ಪಡೆದಿದ್ದ ಬೆಂಗಳೂರು ಇದೀಗ ಪರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ)-10 ಮತ್ತು ಪಿಎಂ -2.5 ಧೂಳಿನ ಕಣಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಬೆಂಗಳೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಜೆ ರೇಣುಕಾ ಪ್ರಸಾದ್, ಇದು ಆತಂಕಕಾರಿ ವಿಷಯ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣಹೋಮವಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.

ಮರಗಳ ಮಾರಣಹೋಮವೂ ಕಾರಣ

ನಗರದಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಲು ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣ ಹೋಮ ಮಾಡುತ್ತಿರುವುದೂ ಕಾರಣ ಎನ್ನಲಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 2 ಸಾವಿರ ಹೊಸ ವಾಹನಗಳು ರೋಡಿಗಿಳಿದಿವೆ. ಈ ವರ್ಷ 2500 ಹೊಸ ವಾಹನಗಳು ರಿಜಿಸ್ಟ್ರೇಷನ್ ಆಗಿವೆ. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 1.5 ಕೋಟಿಗೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿದ್ದು, ಬೇರೆ ಜಿಲ್ಲೆಗಳಿಂದಲೂ ಲಕ್ಷಾಂತರ ವಾಹನಗಳು ಬರುತ್ತಿರುವುದರಿಂದ ನೈಟ್ರೋಜನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ. ಪ್ರಮುಖವಾಗಿ ಕಾಮಗಾರಿಗಳು, ವಾಹನ ಸಂಚಾರ ಹೆಚ್ಚಳ ಹಾಗೂ ರಸ್ತೆ ಧೂಳು ಕಾರಣ ಎಂದು ಕೇಂದ್ರ ಆರಣ್ಯ, ಪರಿಸರ ಸಚಿವಾಲಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಫ್ಲೈಓವರ್‌ ಮೇಲೆ ಮೊಳೆಗಳ ರಾಶಿ, ಇದು ಪಂಚರ್​​​ ಗ್ಯಾಂಗ್​​ಗಳ ಕೈಚಳಕ

ಗಾಳಿ ಗುಣಮಟ್ಟ ವಿಚಾರದಲ್ಲಿ ಬೆಂಗಳೂರು 2024ರಲ್ಲಿ 28ನೇ ಸ್ಥಾನ ಪಡೆದುಕೊಂಡಿತ್ತು. ಆದರೆ, ಈ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ನಡುವೆಯೂ ಗಾಳಿ ಗುಣಮಟ್ಟ ಕಡಿಮೆಯಾಗಿ ಈ ಬಾರಿ 36 ನೇ ಸ್ಥಾನಕ್ಕೆ ಕುಸಿದಿದೆ. ಈ ಬಗ್ಗೆ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌. ಹೀಗೆ ವಾಯುಮಾಲಿನ್ಯದ ಪ್ರಮಾಣ ಏರಿಕೆ ಆಗುತ್ತಾ ಹೋದರೆ ಬೆಂಗಳೂರು ಮತ್ತೊಂದು ದೆಹಲಿ ಅಗಲಿದೆ ಎಂದು ಪರಿಸರ ಹೋರಾಟಗಾರ ವಿನೋದ್ ಜೇಕಬ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ