ಬೀಸುವ ಗಾಳಿಯಿಂದಲೇ ಬಾಟಲ್ಗೆ ನೀರು ತುಂಬಿಕೊಳ್ಳಬಹುದು! ದಾವಣಗೆರೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಿಶಿಷ್ಟ ಸಂಶೋಧನೆ
ಗಾಳಿಯನ್ನು ಬಳಸಿಕೊಂಡು ವಿದ್ಯುತ್ ತಯಾರಿಸುವುದು ಸಾಮಾನ್ಯ. ಗಾಳಿಯಲ್ಲಿ ನೀರಿನ ಅಂಶ ಇರವುದೇನೋ ನಿಜ ಆದರೆ, ಗಾಳಿಯಿಂದಲೇ ಕುಡಿಯಲು ನೀರನ್ನು ಕೂಡ ಪಡೆಯಬಹುದೇ? ಹೌದು, ಇದು ಸಾಧ್ಯ ಎಂದು ದಾವಣಗೆರೆಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಅದು ಹೇಗೆ? ಅವರು ಮಾಡಿರುವ ವಿಶೇಷ ಸಂಶೋಧನೆ ಏನು? ಇಲ್ಲಿದೆ ಮಾಹಿತಿ.

ದಾವಣಗೆರೆ, ನವೆಂಬರ್ 29: ಇಲ್ಲೊಂದು ಬಾಟಲ್ ಇದೆ. ಅದರಲ್ಲಿ ಹನಿ ಹನಿ ನೀರು ಸಂಗ್ರಹವಾಗುತ್ತದೆ. ಆದರೆ, ಇದು ಯಾವುದೇ ನಲ್ಲಿಯಿಂದ ಬರುತ್ತಿರುವ ನೀರಲ್ಲ! ಗಾಳಿಯಿಂದಲೇ ಬಾಟಲ್ನಲ್ಲಿ ನೀರು ತುಂಬುತ್ತಿದೆ. ಇದು ಹೇಗೆ ಸಾಧ್ಯ? ನಂಬುವುದು ಕಷ್ಟ ಅಲ್ಲವೇ? ಬೀಸುವ ಗಾಳಿಯಿಂದಲೇ ಬಾಟಲ್ಗೆ ನೀರು ತುಂಬಿಸಿಕೊಳ್ಳಬಹುದಾದಂಥ ಅಪರೂಪದ ಆವಿಷ್ಕಾರವೊಂದನ್ನು ದಾವಣಗೆರೆಯ (Davanagere) ಬಾಪೂಜಿ ಇಂಜಿನೀಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಮಾಡಿದ್ದಾರೆ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಇಂತಹದೊಂದು ಸಾಧನೆ ಮಾಡಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಗಾಳಿಯಿಂದ ನೀರು ಪಡೆಯುವುದು ಹೇಗೆ?
ಕಾಲೇಜಿನ ತಾರಸಿಯ ಮೇಲೆ ಸೋಲಾರ್ ಪ್ಯಾನೆಲ್ಗನ್ನು ಅಳವಡಿಸಲಾಗಿದೆ. ಇದರ ಮೂಲಕ ವಿದ್ಯುತ್ ಸಹ ಉತ್ಪಾದನೆ ಮಾಡಲಾಗುತ್ತದೆ. ಇದರ ಜತೆಗೆ ಫ್ಯಾನ್ಗಳನ್ನು ಸಹ ಅಳವಡಿಸಲಾಗಿದೆ. ರಾತ್ರಿಯೆಲ್ಲ ಗಾಳಿಯಾಡುವಾಗ ಈ ಫ್ಯಾನ್ಗಳ ಮೂಲಕ ಕಂಡೆನ್ಸರ್ಗಳ ಸಹಾಯದಿಂದ ತೇವಾಂಶವನ್ನು ನೀರನ್ನಾಗಿ ಪರಿವರ್ತಿಸುವ ರೀತಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥರ ಪ್ರೊ ಶ್ರೀನಿವಾಸ ‘ಟಿವಿ9’ಗೆ ತಿಳಿಸಿದ್ದಾರೆ.
ಗಾಳಿಯಿಂದ ನೀರು ಪಡೆಯುವ ಸಾಧನದ ಬಗ್ಗೆ ಪ್ರೊ ಶ್ರೀನಿವಾಸ ವಿವರಣೆ ವಿಡಿಯೋ
ಅರಣ್ಯ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರು ಸಿಗುವುದುಕಷ್ಟ. ಅರಣ್ಯದಲ್ಲಿ ಈ ರೀತಿ ಗಾಳಿಯಿಂದ ನೀರು ಸಂಗ್ರಹ ಮಾಡುವಂಥ ವ್ಯವಸ್ಥೆ ಕಲ್ಪಿಸಿದರೆ ಪ್ರಾಣಿಗಳಿಗೆ ಅನುಕೂಲವಾಗಲಿದೆ. ಹೀಗಾಗಿ ಇಥದ್ದೊಂದು ಆವಿಷ್ಕಾರ ಮಾಡುವ ಯೋಜನೆ ನಮಗೆ ಬಂತು ಎಂದು ಪ್ರೊ. ಶ್ರೀನಿವಾಸ ಹೇಳಿದ್ದಾರೆ.
ಈಗ ಸ್ವಲ್ಪ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ ವಸ್ತುಗಳನ್ನು ಬಳಸಿ ಈ ವ್ಯವಸ್ಥೆ ರೂಪಿಸಲಾಗಿದೆ. ಹೀಗಾಗಿ ನೀರು ಕಡಿಮೆ ಪ್ರಮಾಣದಲ್ಲಿ ಸಂಗ್ರಹ ಆಗುತ್ತದೆ. ದಿನಕ್ಕೆ 10 ಲೀಟರ್ ನೀರು ಸಂಗ್ರಹಿಸುತ್ತಿದ್ದೇವೆ. ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸಬಹುದು ಎಂದು ಅವರು ತಿಳಿಸಿದ್ದಾರೆ.
ಪ್ಯೂರಿಫೈಯರ್ ನೀರಿಗಿಂತಲೂ ಪರಿಶುದ್ಧ
ನೀರಿನ ಶುದ್ಧತೆಯ ಬಗ್ಗೆಯೂ ಪರೀಕ್ಷೆ ಮಾಡಲಾಗಿದೆ. ಇದು ಪರಿಶುದ್ಧವಾಗಿದೆ. ಈಗ ನಾವು ಕುಡಿಯುವ ಪ್ಯೂರಿಫೈಯರ್ ನೀರಿಗಿಂತಲೂ ಪರಿಶುದ್ಧವಾಗಿದೆ ಎಂಬ ವರದಿ ಬಂದಿದೆ. ಈ ತಂತ್ರಜ್ಞಾನವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಕೈಗಾರಿಕೆಗಳ ಬೆಂಬಲ ಬೇಕಿದೆ. ಹೆಚ್ಚು ಗಾಳಿ ಬಿಸುವ ಪ್ರದೇಶದಲ್ಲಿ ನೀರು ಹೆಚ್ಚ ಸಂಗ್ರಹವಾಗುತ್ತದೆ. ಬರುವ ದಿನಗಳಲ್ಲಿ ಗಾಳಿಯಿಂದ ನೀರು ಸಂಗ್ರಹಿಸಲು ಬಳಸುವ ವಸ್ತುಗಳು ಕಡಿಮೆ ಬೆಲೆಗೆ ಲಭ್ಯವಾದೆ ಪ್ರತಿಯೊಬ್ಬರು ಮನೆಗಳಿಗೆ ಇಂತಹ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ವಿದ್ಯಾರ್ಥಿಗಳ ಸಂಶೋಧನೆಗೆ ಫಲ ಸಿಗಬೇಕಾದರೆ ಕೈಗಾರಿಕಾ ಕಂಪನಿಗಳು, ಬರಬೇಕು ಎಂದು ಕಾಲೇಜಿನ ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ.



