ಯುವತಿ ಕೊಂದ ಕಾಡಾನೆ ಸೆರೆಗೆ ಕಾರ್ಯಚರಣೆ ವೇಳೆ ಬಿಡಾರದ ವೈದ್ಯನ ಮೇಲೆ ಆನೆ ದಾಳಿ
ಇಂದು ಹೊನ್ನಾಳಿ ತಾಲೂಕಿನ ಬೆಣಕನಹಳ್ಳಿ ಹಾಗೂ ಸಾಸ್ವಿಹಳ್ಳಿ ಪ್ರದೇಶದಲ್ಲಿ ಆನೆ ಪತ್ತೆಯಾಗಿದೆ. ಆದ್ರೆ ಕಾರ್ಯಾಚರಣೆ ವೇಳೆ ವೈದ್ಯನ ಮೇಲೆ ಆನೆ ದಾಳಿ ನಡೆಸಿದೆ.
ದಾವಣಗೆರೆ: ಸೋಮಲಾಪುರದಲ್ಲಿ ಕಾಡಾನೆ ದಾಳಿಯಿಂದ ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಜಿಲ್ಲೆ ಚನ್ನಗಿರಿ, ಹೊನ್ನಾಳಿ ತಾಲೂಕಿನಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ. ಮೂರನೇ ದಿನವೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರಿದಿದ್ದು ಕಾರ್ಯಾಚರಣೆ ವೇಳೆ ವೈದ್ಯ ವಿನಯ್ ಮೇಲೆ ಕಾಡಾನೆ ದಾಳಿ ನಡೆಸಿದೆ. ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಹಿರಿಯ ವೈದ್ಯ ವಿನಯ್ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗ ಸುತ್ತಾಡುತ್ತಿದೆ. ಶಿವಮೊಗ್ಗ-ನಾಗರಹೊಳೆಯಿಂದ ಆರು ಸಾಕಾನೆ ಸಹಿತ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಹೊನ್ನಾಳಿ ತಾಲೂಕಿನ ಬೆಣಕನಹಳ್ಳಿ ಹಾಗೂ ಸಾಸ್ವಿಹಳ್ಳಿ ಪ್ರದೇಶದಲ್ಲಿ ಆನೆ ಪತ್ತೆಯಾಗಿದೆ. ಆದ್ರೆ ಕಾರ್ಯಾಚರಣೆ ವೇಳೆ ವೈದ್ಯನ ಮೇಲೆ ಆನೆ ದಾಳಿ ನಡೆಸಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನೊಂದು ಹೆಣ್ಣಾನೆ ತಂದು ಕಾಡಾನೆ ಸೆರೆಗೆ ಮುಂದಾಗಿದ್ದಾರೆ. ಭದ್ರಾವತಿ ವಿಭಾಗದ ಡಿಎಫ್ಓ ಶಿವಶರಣರಯ್ಯ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಮೈಸೂರಿನಿಂದ ಅರವಳಿಕೆ ತಜ್ಞರು ಆಗಮಿಸಿದ್ದಾರೆ. ದಿನದಿಂದ ದಿನಕ್ಕೆ ಕಾಡಾನೆ ಸ್ಥಳ ಬದಲಾಯಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಓಡಾಡುತ್ತಿರುವ ಒಂಟಿ ಸಲಗ ಸೆರೆಗೆ ಹರಸಾಹಸ ಪಡಲಾಗುತ್ತಿದೆ.
ಇದನ್ನೂ ಓದಿ: ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತ ವಯಸ್ಸಿನ ಯುವತಿಯಿಂದ ಬರ್ತ್ ಡೆ ನೆಪದಲ್ಲಿ ಭಾವಿ ಪತಿಗೆ ಚಾಕು!
ದಾವಣಗೆರೆ: ಕಾಡಾನೆ ದಾಳಿಗೆ 18 ವರ್ಷದ ಯುವತಿ ಸಾವು
ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ಹಾವಳಿ ಶುರುವಾಗಿದ್ದು, ಕವನಾ ಎಂಬ 18 ವರ್ಷದ ಯುವತಿ ಕಾಡಾನೆ ದಾಳಿಗೆ ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ. ಹೌದು ಅವರೆ ಕಾಯಿ ಹರಿಯಲು ಜಮೀನಿಗೆ ಹೋದ ವೇಳೆ ಮೂರು ಕಾಡಾನೆಗಳು ಏಕಕಾಲಕ್ಕೆ ದಾಳಿ ನಡೆಸಿದ್ದು ಆನೆಗಳ ಕಾಲ್ತುಳಿತದಿಂದ ತೀವ್ರಗಾಯಗೊಂಡ ಬಾಲಕಿಯನ್ನ ಜಿಲ್ಲಾಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇನ್ನು ಕಳೆದ ಎರಡು ವರ್ಷಗಳಿಂದ ಸೋಮಲಾಪುರ ಹಾಗೂ ಸೂಳೆಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಸುತ್ತಾಡುತ್ತಿದ್ದು, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನೆಗಳನ್ನ ಅರಣ್ಯಕ್ಕೆ ಅಟ್ಟಲು ಗ್ರಾಮಸ್ಥರು ವಿನಂತಿಸಿದ್ದಾರೆ. ಇತ್ತ ಮಗಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:21 pm, Tue, 11 April 23