ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತ ವಯಸ್ಸಿನ ಯುವತಿಯಿಂದ ಬರ್ತ್ ಡೆ ನೆಪದಲ್ಲಿ ಭಾವಿ ಪತಿಗೆ ಚಾಕು!
ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವೀ ಪತ್ನಿ ಬರ್ತ್ ಡೆ ಗಿಫ್ಟ್ ಕೊಡ್ತಾಳೆ ಅಂತಾ ಪಾರ್ಕ್ಗೆ ಬಂದಿದ್ದ ಯುವಕನಿಗೆ ಚಾಕು ಹಾಕಿದಳು!
ಆಕೆಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಯುವಕನೊಬ್ಬನ (youth) ಜೊತೆಗೆ ವಿವಾಹ ನಿಶ್ಚಿತಾರ್ಥ ಮಾಡಲಾಗಿತ್ತು. ಭಾವಿ ಪತ್ನಿಯ ಬರ್ತಡೆಗೆ ವಿಷ್ ಮಾಡಿ ಗಿಫ್ಟ್ ಕೊಡಲು ಹುಡುಗ ಬಂದಿದ್ದ. ಆ ಸಮಯ ಸಂದರ್ಭ ಬಳಸಿಕೊಂಡ ಯುವತಿಯು ‘ನಾನು ನಿನಗೊಂದು ಗಿಫ್ಟ್ ಕೊಡ್ತೆನಿ ಬಾ ಪಾರ್ಕ್ ಗೆ’ ಅಂತಾ ಕರ್ಕೊಂಡ ಹೋಗಿ ಆತನ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ್ದಾಳೆ! ಎಲ್ಲರಂತೆ ತನ್ನ ಮಗಳು ಕೂಡ ಓದಿ ವಿದ್ಯಾವಂತೆ ಆಗ್ತಾಳೆ ಅಂತಾ ಅದೆಷ್ಟೋ ಕನಸು ಇಟ್ಟುಕೊಂಡು ರಾಣೇಬೆನ್ನೂರಿನ (ranebennur) ಆ ದಂಪತಿ ತಮ್ಮ ಮಗಳನ್ನು (girl) ಕಾಲೇಜಿಗೆ ಕಳಿಸಿದ್ರು, ಕಾಲೇಜಿಗೆ ಹೋಗುತ್ತಿದ್ದಂತೆ ತಂದೆ ತಾಯಿಯ ಆಸೆಗೆ ಎಳ್ಳುನೀರು ಬಿಟ್ಟು, ಪ್ರೀತಿಯ ಬಲೆಗೆ ಬಿದ್ದಿದ್ದಳು. ಯಾವುದೋ ಹುಡುಗನ ಜೊತೆ ಪಾರ್ಕ್, ಹೊಟೆಲ್ ಅಂತಾ ಸುತ್ತಾಡ್ತಾ ಇದ್ದಳು. ಮಗಳು ದಾರಿ ತಪ್ಪಿದಾಳೆ ಅಂತಾ ಅರಿತ ತಂದೆ ತಾಯಿ, ಮಗಳಿಗೆ ಆದಷ್ಟು ಬೇಗ ಮದುವೆ ಮಾಡಬೇಕು ಎಂದು ಮುಂದಾಗ್ತಾರೆ. ಮದುವೆ ಗಾಗಿ ಹುಡುಗನನ್ನು ಹುಡುಕ ಬೇಕಾದ್ರೆ ಇವಳು ಎಷ್ಟೇ ವಿರೋಧ ಮಾಡಿದ್ರು ತಂದೆ ತಾಯಿ ಒತ್ತಾಯ ಮಾಡಿ.. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಮೂಲದ ದೇವೇಂದ್ರ ಎಂಬುವ ಯುವಕನ ಜೊತೆಗೆ ನಿಶ್ಚಿತಾರ್ಥ (engagement) ಮಾಡ್ತಾರೆ.
ಎಲ್ಲರಂತೆ ತನ್ನ ಮಗಳು ಕೂಡ ಸುಂದರ ಸುಖೀ ಸಂಸಾರ ಮಾಡಲಿ ಅಂತಾ, ಯುಗಾದಿ ಆದ ಮರುದಿನ ಅಂದ್ರೆ ಮಾರ್ಚ್ 23 ರಂದು ದಾವಣಗೆರೆಯ ಹುಡುಗನ ಮನೆಯಲ್ಲೆ ನಿಶ್ಚಿತಾರ್ಥ ಮಾಡಿರ್ತಾರೆ. ಹೃದಯದಲ್ಲಿ ಒಬ್ಬನನ್ನು ಇಟ್ಟುಕೊಂಡು, ತಂದೆ ತಾಯಿಯ ಒತ್ತಾಯಕ್ಕೆ ಮತ್ತೊಬ್ಬ ಯುವಕನ ಜೊತೆ ಹೇಗೋ ನಿಶ್ಚಿತಾರ್ಥ ಶಾಸ್ತ್ರ ಮುಗಿಸ್ತಾಳೆ. 17 ವರ್ಷ ವಯಸ್ಸು ಇರುವ ಹುಡುಗಿಗೆ ಮುಂದಿನ ವರ್ಷ ಜನವರಿಯಲ್ಲಿ 18 ವರ್ಷ ತುಂಬಬೇಕಿತ್ತು. ಆ ವೇಳೆಗೆ ಮದುವೆ ಇಟ್ಟುಕೊಂಡರಾಯಿತು ಅಂತಾ ತಿರ್ಮಾನಿಸಿರುತ್ತಾರೆ ಮನೆಯಬ ಹಿರಿಯರು.
ಗಮನಾರ್ಹವೆಂದರೆ ಹುಡುಗಿಯ ಪ್ರೇಮ ಪ್ರಸಂಗಗಳು ದೇವೆಂದ್ರನಿಗೆ ಹಾಗೂ ಆತನ ತಂದೆ ತಾಯಿಗೆ ಗೊತ್ತಿರಲ್ಲ. ಮೊನ್ನೆ ಎಪ್ರಿಲ್ 6 ರಂದು ತನ್ನ ಭಾವಿ ಪತ್ನಿಯ ದೇವೇಂದ್ರ ಇದೆ ಎಂದು ಖುಷಿ ಖುಷಿಯಿಂದಲೆ ಭೇಟಿ ಆಗೋಣ ಸಿಗು, ನಿನ್ನ ಹುಟ್ಟುಹಬ್ಬಕ್ಕೆ ನಾನು ವಿಶೇಷ ಗಿಫ್ಟ್ ಕೊಡ್ತೆನಿ ಅಂತಾ, ಬಟ್ಟೆ ಹಾಗೂ ಬಳೆಯನ್ನು ತೆಗೆದುಕೊಂಡು, ರಾಣೇಬೆನ್ನೂರು ಪಟ್ಟಣದ ಹೊರವಲಯದಲ್ಲಿರುವ ಸ್ವರ್ಣ ಪಾರ್ಕ್ ಗೆ ಹುಡುಗಿಯನ್ನು ಬರುವಂತೆ ಹೇಳ್ತಾನೆ ದೇವೇಂದ್ರ.
ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಆ ಹುಡುಗಿ ಪಾರ್ಕ್ಗೆ ಬರ್ತಾಳೆ. ಪಾರ್ಕ್ ನಲ್ಲಿ ಕೆಲಹೊತ್ತು ಮಾತನಾಡಿ ದೇವೇಂದ್ರ ತಂದಿದ್ದ ಗಿಫ್ಟ್ ತೊಗೊಂಡು, ನಾನೂ ನಿಂಗೊಂದು ಗಿಫ್ಟ್ ಕೊಡ್ತೆನಿ. ಆದ್ರೆ ನಾನು ಹೇಳಿದಂಗೆ ಸ್ವಲ್ಪ ಹೊತ್ತು ಕೇಳಬೇಕಂತಾಳೆ! ಆಗ ಹುಡುಗಿಯ ಮಾತಿಗೆ ಒಪ್ಪಿಗೆ ಸೂಚಿಸಿದ ಹುಡುಗ, ಹುಡುಗಿ ಹೇಳಿದ ಹಾಗೆ ಶಿಲುಬೆಯ ರೀತಿ ಕಣ್ಮುಚ್ಚಿ ನಿಲ್ಲುತ್ತಾನೆ. ಆಗ ಹುಡುಗಿ, ಹುಡುಗ ದೇವೇಂದ್ರನ ಕೈ ಕಟ್ತಾಳೆ ಅದಕ್ಕೂ ಹುಡುಗ ಒಪ್ಪಿ ಕೈ ಕಟ್ಟಿಸಿಕೊಳ್ಳುತ್ತಾನೆ!
ಹಾಗೆಯೇ ಕಣ್ಣು ಮುಚ್ಚಿ ಇರು ಅಂತಾ ಹೇಳಿ… ತನ್ನ ಬಳಿ ಇದ್ದ ಚಾಕುವನ್ನು ಹೊರ ತೆಗೆದು, ನೇರವಾಗಿ ದೇವೇಂದ್ರನ ಕತ್ತು ಕೊಯ್ಯಲು ಮುಂದಾಗ್ತಾಳೆ. ಆಗ ದೇವೇಂದ್ರ ಕಿರುಚಾಡೊಕೆ ಆರಂಭ ಮಾಡ್ತಾನೆ. ನಾಲ್ಕೈದು ಬಾರಿ ತನ್ನ ಬಳಿ ಇದ್ದ ಚಿಕ್ಕ ಚಾಕುವಿನಿಂದ ಕತ್ತು ಕೊಯ್ಯಲು ಪ್ರಯತ್ನಿಸುತ್ತಾಳೆ ಭಾವೀ ಪತ್ನಿ. ಆ ಸಂದರ್ಭದಲ್ಲಿ ಹುಡುಗ ಕಿರುಚಾಡುತ್ತಿರುವುದನ್ನು ಕಂಡು ದಾರಿಹೋಕರು ಹಾಗೂ ಪಾರ್ಕ್ ನಲ್ಲಿದ್ದವರು ತಕ್ಷಣ ಪೊಲೀಸರಿಗೆ ಮಾಹಿತಿ ಕೊಡ್ತಾರೆ. ಜನ ಬರುತ್ತಿದ್ದಂತೆ ತಕ್ಷಣ ಆ ಮಾಯಾಂಗನೆ ಚಂಗನೆ ಅಲ್ಲಿಂದ ಕಾಲು ಕೀಳ್ತಾಳೆ.
ತಕ್ಷಣ ಹಲಗೇರಿ ಪೊಲೀಸರು ಸ್ಥಳಕ್ಕೆ ಬಂದು ದೇವೇಂದ್ರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಆತನಿಗೆ ರಕ್ತಸ್ರಾವ ಆಗುತ್ತಿರುವುದ ಕಂಡು ತಕ್ಷಣ ರಾಣೇಬೆನ್ನೂರಿನಿಂದ ಅಂಬ್ಯಲೆನ್ಸ್ ಮುಖಾಂತರ ದಾವಣಗೆರೆ ಪಟ್ಟಣದ ಎಸ್ ಎಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗುತ್ತೆ. ಈಗ ಸದ್ಯ ಹುಡುಗ ದೇವೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದು. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ.
ಇನ್ನು ಈ ಘಟನೆ ನಡೆಯುತ್ತಿದ್ದಂತೆ ಕೊಲೆಗೆ ಯತ್ನ ಮಾಡಿದ್ದ ಆ ಹುಡುಗಿಗಾಗಿ ಬಲೆ ಬೀಸಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಇನ್ನೂ 18ರ ವಯಸ್ಸು ಆಗುವ ಮುನ್ನವೆ ಮಗಳ ನಿಶ್ಚಿತಾರ್ಥ ಮಾಡಿದ್ದ ತಂದೆ ತಾಯಿ ವಿರುದ್ದವೂ ಕೇಸ್ ದಾಖಲಾಗಿದೆ. ಆದರೆ ಕೆಲವೇ ದಿನಗಳ ಹಿಂದಷ್ಟೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಕತ್ತು ಕೊಯ್ದು ಹತ್ಯೆ ಮಾಡಲು ಕಾರಣವಾದ ಯುವಕ ಯಾರು? ಇಂತಹ ಕೆಟ್ಟ ನಿರ್ಧಾರಕ್ಕೆ ಯುವತಿ ಯಾಕೆ ಮುಂದಾದಳು? ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ಬೆಳಕಿಗೆ ಬರಬೇಕಿದೆ.
ವರದಿ: ಸೂರಜ್ ಉತ್ತೂರೆ, ಟಿವಿ 9, ಹಾವೇರಿ