ಅಡಿಕೆ ಮರದ ತ್ಯಾಜ್ಯದಿಂದ ತಯಾರಾಗಿದೆ ಸುಂದರ ಬ್ಯಾಗ್; ಪ್ಲಾಸ್ಟಿಕ್ ನಿಷೇಧಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ನೂತನ ಯೋಜನೆ

ದಾವಣಗೆರೆ ಬಿಐಟಿ ಇಂಜಿನೀಯರಿಂಗ್ ಕಾಲೇಜು ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸುನಿಲ್.ಎಸ್ ಹಾಗೂ ಮಂಜುನಾಥ.ಎಚ್  ಸಿದ್ಧಪಡಿಸಿದ ಬ್ಯಾಗ್​ಗಳು ಪ್ಲಾಸ್ಟಿಕ್ ವಿರೋಧಿಗಳಾಗಿವೆ.

ಅಡಿಕೆ ಮರದ ತ್ಯಾಜ್ಯದಿಂದ ತಯಾರಾಗಿದೆ ಸುಂದರ ಬ್ಯಾಗ್; ಪ್ಲಾಸ್ಟಿಕ್ ನಿಷೇಧಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ನೂತನ ಯೋಜನೆ
ಅಡಿಕೆ ಮರದ ತ್ಯಾಜ್ಯದಿಂದ ತಯಾರಾಗಿದೆ ಸುಂದರ ಬ್ಯಾಗ್
Edited By:

Updated on: Sep 05, 2021 | 11:51 AM

ದಾವಣಗೆರೆ: ಬಹುತೇಕರು ಪ್ಲಾಸ್ಟಿಕ್ ನಿಷೇಧ ಮಾಡಿ ಎನ್ನುತಾರೆಯೇ ವಿನಃ ಅದಕ್ಕೆ ಪರ್ಯಾಯ ಏನು ಎಂದು ಕೇಳಿದರೆ ಉತ್ತರವೇ ನೀಡಲ್ಲ. ಆದರೆ ಇಲ್ಲೊಂದಿಬ್ಬರು ಹಳ್ಳಿಯ ಇಂಜಿನೀಯರಿಂಗ್ ವಿದ್ಯಾರ್ಥಿಗಳು ಪ್ಲಾಸ್ಟಿಕ್​ಗೆ ಹೇಗೆ ಸೆಡ್ಡು ಹೊಡೆಯಬಹುದು ಎಂಬುದನ್ನು ಮಾಡಿ ತೊರಿಸಿದ್ದಾರೆ. ಮೇಲಾಗಿ ಒಮ್ಮೆ ನೀವು 20 ರೂಪಾಯಿ ಬಂಡವಾಳ ಹಾಕಿದರೆ ಸಾಕು ಆರು ತಿಂಗಳಿಯಿಂದ ಮೂರು ವರ್ಷದ ವರೆಗೆ ನಿಶ್ಚಿಂತೆಯಿಂದ ಇರಬಹುದು. ಅಷ್ಟರ ಮಟ್ಟಿಗೆ ಈ ಬ್ಯಾಗ್​ಗಳು ಪ್ರಯೋಜನಕ್ಕೆ ಬರುತ್ತದೆ.

ಆಕರ್ಷಕ ಬಣ್ಣದಿಂದ ಕೂಡಿದ ಈ ಚೀಲಗಳನ್ನು ಅಡಿಕೆ ಮರದ ತ್ಯಾಜ್ಯದಿಂದ ತಯಾರಿಸಲಾಗಿದೆ. ಈ ವಿಶಿಷ್ಟ ಶೈಲಿಯ ಬ್ಯಾಗ್​ ಕೈಯಲ್ಲಿ ಹಿಡಿದುಕೊಳ್ಳುವುದೇ ಒಂದು ಸಂತಸದ ವಿಚಾರ. ನೂರಾರು ರೂಪಾಯಿ ವೆಚ್ಚ ಮಾಡಿ ತಂದ ಚೀಲಗಳಿಗೆ ಸವಾಲು ಎನ್ನುವಂತಿವೆ ಈ ಬ್ಯಾಗ್​ಗಳು. ನಾಲ್ಕು ಮಾದರಿಯಲ್ಲಿ ಈ ಬ್ಯಾಗ್​ಗಳು ಸದ್ಯಕೆ ಸಜ್ಜಾಗಿವೆ. ಜತೆಗೆ ಈ ಸುಂದರ ಬ್ಯಾಗ್​ಗಳ ಬೆಲೆ ಕೇವಲ 20 ರೂಪಾಯಿ ಮಾತ್ರ.

ದಾವಣಗೆರೆ ಬಿಐಟಿ ಇಂಜಿನೀಯರಿಂಗ್ ಕಾಲೇಜು ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸುನಿಲ್.ಎಸ್ ಹಾಗೂ ಮಂಜುನಾಥ.ಎಚ್  ಸಿದ್ಧಪಡಿಸಿದ ಬ್ಯಾಗ್​ಗಳು ಪ್ಲಾಸ್ಟಿಕ್ ವಿರೋಧಿಗಳಾಗಿವೆ. ಸುನೀಲ್ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದ ನಿವಾಸಿ. ಮಂಜುನಾಥ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಾಜನಹಟ್ಟಿ ಗ್ರಾಮದ ನಿವಾಸಿ. ಇವರಿಬ್ಬರು ಸೇರಿ  ಅಡಿಕೆ ಮರದ ತ್ಯಾಜ್ಯದಿಂದ  ಇಂತಹ ಬ್ಯಾಗ್​ಗಳನ್ನು ಸಿದ್ಧಮಾಡಿದ್ದಾರೆ.

ರೈತರು ಅಡಿಕೆ ಮರದ ತ್ಯಾಜ್ಯಗಳನ್ನು ಸುಮ್ಮನೆ ಸುಟ್ಟು ಹಾಕುತ್ತಾರೆ. ಇದನ್ನು ಬಳಸಿಕೊಂಡು ಈ ರೀತಿಯಾದ ಬ್ಯಾಗ್ ಮಾಡಿದ್ದು, ಪ್ಲಾಸ್ಟಿಕ್​ಗೆ ಸವಾಲ್ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಪರ್ಯಾಯ ಏನು ಎಂಬುವುದಕ್ಕೆ  ಉತ್ತರವಾಗಿದೆ ಎಂದು ಇಂಜಿನೀಯರಿಂಗ್ ವಿದ್ಯಾರ್ಥಿ ಸುನೀಲ್. ಎಸ್ ತಿಳಿಸಿದ್ದಾರೆ.

ಈ ಬ್ಯಾಗ್ ಆರು ತಿಂಗಳಿಂದ ಮೂರು ವರ್ಷದವರೆಗೆ ತರಕಾರಿ ಹಾಕಲು, ಸಣ್ಣ ಪುಟ್ಟ ಸಂತೆಗಳಿಗೆ ಹೋಗುವಾಗ ಬಳಸಬಹುದು. ಮೇಲಾಗಿ ಇದನ್ನು ನೀರಿನಲ್ಲಿ ಅದ್ದಿದರು ಸಹ ಹಾಳಾಗದಂತೆ  ಕೆಮಿಕಲ್ ಬಳಸಲಾಗಿದೆ. ಒಂದು ಬ್ಯಾಗ್ ಸಿದ್ಧ ಪಡಿಸಲು 20 ರೂಪಾಯಿ ಮಾತ್ರ ಎಂಬುವುದೇ ವಿಶೇಷ. ಜನಸಾಮಾನ್ಯರ ಕೈಗೆ ತಲುಪಬೇಕಾದರೆ ಅಲ್ಲಿ ದರ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ.

ಈ ಬ್ಯಾಗ್​ಗಳನ್ನು ಗುಜರಾತ್​ನ  ದೇಶಿಕೌಶಲ್ಯ ಕಚೇರಿಗೆ ಕಳುಹಿಸಲಾಗಿದೆ. ಇವರಿಂದಲೇ ಇನ್ನಷ್ಟು ಬೇಡಿಕೆ ಬರುವ ಸಾಧ್ಯತೆಗಳಿವೆ. ಮೇಲಾಗಿ ಇದನ್ನು ಇಷ್ಟರಲ್ಲಿಯೇ ಪ್ರಧಾನಿ ನರೇಂದ್ರ ಮೋದಿಗೂ ಕಳುಹಿಸಲು ಸಹ ನಿರ್ಧರಿಸಲಾಗಿದೆ. ಅಲ್ಲದೆ ದಾವಣಗೆರೆ ಪ್ರತಿಷ್ಠಿತ ಬಿಐಇಟಿ ಇಂಜಿನೀಯರಿಂಗ್ ಕಾಲೇಜ್​ನ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚಲೇಬೇಕು.

ಇದೊಂದೆ ಅಲ್ಲ. ಶೇಖಡಾ 67 ರಷ್ಟು ಇಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಿವೆ. ವಿವಿಧ ವಿಚಾರಗಳ ಬಗ್ಗೆ ಸಂಶೋಧನೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಒಂದೇ ವರ್ಷ ಸುಮಾರು 60 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಬಿಐಇಟಿ ಇಂಜಿನೀಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಚ್.ಬಿ.ಅರವಿಂದ್ ತಿಳಿಸಿದ್ದಾರೆ.

ಹಳ್ಳಿ ಹುಡುಗರು ಅಡಿಕೆ ತೋಟದಲ್ಲಿ ಸುತ್ತಾಡಿ ಕಸದಿಂದ ರಸ ಎಂಬ ಕಲ್ಪನೆಯಲ್ಲಿ ಸಜ್ಜು ಮಾಡಿದ ಬ್ಯಾಗ್​ಗಳು ಜನರ ಗಮನ ಸೆಳೆದಿವೆ. ಪ್ಲಾಸ್ಟಿಕ್ ನಿಷೇಧ ಮಾಡಿ ಎಂದು ಮಾತ್ರ ಹೇಳುತ್ತಾರೆ. ಆದರೆ ಈ ಯುವಕರು ಅದಕ್ಕೆ ಪಾರ್ಯಾಯ ವ್ಯವಸ್ಥೆ ಕೂಡಾ ಕಂಡು ಕೊಂಡಿದ್ದಾರೆ. ಮೇಲಾಗಿ ಪ್ಲಾಸ್ಟಿಕ್ ಬಳಸಿ ಬಿಸಾಕಿದರೆ ಇದು ಕರಗಲ್ಲ. ಆದರೆ ಈ ಅಡಿಕೆ ಬ್ಯಾಗ್ ಮಾತ್ರ ಭೂಮಿಗೆ ಹಾಕಿದರೆ ಗೊಬ್ಬರ ಕೂಡಾ ಆಗುತ್ತದೆ ಎಂಬುವುದು ಒಂದು ರೀತಿ ಮಹತ್ವದ ವಿಚಾರ ಅಂದರೆ ತಪ್ಪಾಗಲಿಕ್ಕಿಲ್ಲ.

ವರದಿ: ಬಸವರಾಜ್ ದೊಡ್ಮನಿ 

ಇದನ್ನೂ ಓದಿ:
ಅಡಿಕೆ ಗಿಡದಲ್ಲಿ ಪ್ರತ್ಯಕ್ಷನಾದ ಗಣಪ; ಪ್ರಕೃತಿಯ ವಿಸ್ಮಯ ನೋಡಿ ಗ್ರಾಮಸ್ಥರು ಅಚ್ಚರಿ

ಹುಬ್ಬಳ್ಳಿ: ತರಕಾರಿ ಬೀಜದಿಂದ ತಯಾರಾಯ್ತು ರಾಷ್ಟ್ರಧ್ವಜ; ದೇಶ ಪ್ರೇಮಕ್ಕೂ ಸೈ, ಪರಿಸರ ಕಾಳಜಿಗೂ ಜೈ