ದಾವಣಗೆರೆ: ರಾಜ್ಯದಲ್ಲಿ ಕೊರೊನಾ ವೈರಸ್ ಗುಪ್ತಗಾಮಿನಿಯಾಗಿ ಮತ್ತೆ ಜನರ ದೇಹ ಸೇರುತ್ತಿದೆ. ದಿನದಿಂದ ದಿನಕ್ಕೆ ಸೋಂಕು ಉಲ್ಬಣಗೊಳ್ಳುತ್ತಿದೆ. ಈಗ ದಾವಣಗೆರೆ ಜಿಲ್ಲೆಯ 4 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿಯ ನವೋದಯ ಶಾಲೆಯ 4 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು 4 ಕೊಠಡಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ನವೋದಯ ಶಾಲೆಯಲ್ಲಿ 497 ವಿದ್ಯಾರ್ಥಿಗಳು, 57 ಬೋಧಕ, ಬೋಧಕೇತರ ಸಿಬ್ಬಂದಿಯ ಸ್ವಾಬ್ ಟೆಸ್ಟ್ ಮಾಡಿದ್ದು ಕೋವಿಡ್ ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತ ವಿದ್ಯಾರ್ಥಿಗಳ ಗಂಟಲು ದ್ರವವನ್ನು RT-PCR ಪರೀಕ್ಷೆಗೆ ರವಾನಿಸಿದ್ದು ಮತ್ತೆ ಪಾಸಿಟಿವ್ ಬಂದರೆ ಜೀನೊಮಿಕ್ ಟೆಸ್ಟ್ಗೆ ಕಳಿಸಲಾಗುತ್ತೆ.
ಎಲ್ಲಾ ವಿದ್ಯಾರ್ಥಿಗಳು ಅರೋಗ್ಯವಾಗಿದ್ದು ಯಾವುದೇ ರೋಗ ಲಕ್ಷಣಗಳಿಲ್ಲ. ಕಳೆದ 13 ದಿನದಿಂದ ಸರ್ವೇಕ್ಷಣಾ ಇಲಾಖೆ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮಾಡುತ್ತಿದೆ. ಶಾಲಾ/ಕಾಲೇಜು, ನರ್ಸಿಂಗ್, ಅರೆವೈದ್ಯಕೀಯ ವಿದ್ಯಾರ್ಥಿಗಳ ಒಟ್ಟು 4,882 ಸ್ವಾಬ್ ಸಂಗ್ರಹಿಸಿ ಕೊರೊನಾ ಟೆಸ್ಟ್ ಮಾಡಲಾಗಿದೆ. ಈ ಪೈಕಿ 3,667 ಮಂದಿಗೆ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಉಳಿದ 1,215 ವರದಿಗಳಿಗಾಗಿ ಜಿಲ್ಲಾಡಳಿತ ಕಾದು ಕುಳಿತಿದೆ.
ದೇಶದಲ್ಲಿ 36ಕ್ಕೆ ಏರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ
ಸ್ವಲ್ಪ ಸೈಲೆಂಟ್ ಆಗಿದ್ದ ಒಮಿಕ್ರಾನ್ ಮತ್ತೆ ಅಬ್ಬರ ಶುರುಮಾಡಿದೆ. ನಿನ್ನೆ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಕನ್ಫರ್ಮ್ ಆಗಿದ್ದು ಭಯ ಹೆಚ್ಚಿಸಿದೆ. ಈ ಮೂಲಕ ಬೆಂಗಳೂರಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದ್ದು, ಟೆನ್ಷನ್ ಶುರುವಾಗಿದೆ.ಅಲ್ದೆ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಒಟ್ಟು ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಮೂಲದ 34 ವರ್ಷದ ಟೆಕ್ಕಿಗೆ ‘ಒಮಿಕ್ರಾನ್’ ಕನ್ಫರ್ಮ್ ಆಗಿದ್ದು, ಡಿಸೆಂಬರ್ 1ರಂದು ದಕ್ಷಿಣ ಆಫ್ರಿಕಾದಿಂದ ಸೋಂಕಿತ ವ್ಯಕ್ತಿ ಬೆಂಗಳೂರಿಗೆ ಆಗಮಿಸಿದ್ದರು. ಮೊದಲಿಗೆ ಕೆಂಪೇಗೌಡ ಏರ್ಪೋರ್ಟ್ನಲ್ಲೇ ಸೋಂಕಿತನಿಗೆ ಟೆಸ್ಟಿಂಗ್ ಮಾಡಲಾಗಿತ್ತು. ಆದರೆ ಸೋಂಕಿತನ ಮೊದಲ ಪರೀಕ್ಷೆಯಲ್ಲಿ ರಿಪೋರ್ಟ್ ನೆಗೆಟಿವ್ ಅಂತ ಬಂದಿತ್ತು. ಆದ್ರೆ ಮನೆಗೆ ತಲುಪಿದ ಮರುದಿನವೇ ಸೋಂಕಿತನಲ್ಲಿ ಕೊವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಅಧಿಕಾರಿಗಳು ಸ್ವ್ಯಾಬ್ನ ಪರೀಕ್ಷೆಗಾಗಿ ರವಾನಿಸಿದ್ರು. ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿತ್ತು. ಸೋಂಕಿತನಿಗೆ ಡಿಸೆಂಬರ್ 3ರಿಂದಲೇ ಬೌರಿಂಗ್ನಲ್ಲಿ ಟ್ರೀಟ್ಮೆಂಟ್ ನಡೀತಾ ಇದೆ. 5 ಪ್ರೈಮರಿ ಮತ್ತು 15 ಸೆಕೆಂಡರಿ ಕಂಟ್ಯಾಕ್ಟ್ಗೂ ಟೆಸ್ಟ್ ಮಾಡಲಾಗಿದ್ದು, ಸೋಂಕಿತನ ಸಂಪರ್ಕಿತರ ಕೊವಿಡ್-19 ವರದಿ ನೆಗೆಟಿವ್ ಅಂತಾ ಬಂದಿದೆ. ಆದ್ರೆ ಸಂಪರ್ಕಿತರ 2ನೇ ವರದಿಗಾಗಿ ಅಧಿಕಾರಿಗಳು ಕಾಯ್ತಿದ್ದು, 2ನೇ ಮಾದರಿ ವರದಿ ಆಧರಿಸಿ ಮುಂದಿನ ಕ್ರಮಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.