ದಾವಣಗೆರೆ, ಅ.01: ನಕಲಿ ಚಿನ್ನ ನೀಡಿ ಗುತ್ತಿಗೆದಾರನಿಗೆ 60 ಲಕ್ಷ ರೂಪಾಯಿ ವಂಚನೆ (Cheating) ಮಾಡಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ನಡೆದಿದೆ. ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ಧನ ಎಂಬುವವರಿಗೆ ವಂಚನೆ ಮಾಡಲಾಗಿದೆ. ಕಳೆದ ಹಲವಾರು ದಿನಗಳಿಂದ ಚನ್ನಗಿರಿಯಲ್ಲಿ ವಿವಿಧ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರ ಗೋವರ್ಧನ್ ಅವರ ಪರಿಚಯ ಮಾಡಿಕೊಂಡ ಕುಮಾರ ಹಾಗೂ ಮುದಕಪ್ಪ ಎಂಬ ಇಬ್ಬರು ವ್ಯಕ್ತಿಗಳು ನಕಲಿ ಚಿನ್ನ ನೀಡಿ ವಂಚಿಸಿದ್ದಾರೆ.
ನಮ್ಮ ಮನೆಯ ಪಾಯಾ ತೆಗೆಯುವಾಗ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಎಂದು ಕುಮಾರ ಮತ್ತು ಮುದಕಪ್ಪ ಗುತ್ತಿಗೆದಾರ ಗೋವರ್ಧನ್ರನ್ನು ನಂಬಿಸಿದ್ದಾರೆ. ಇವರ ಮಾತು ನಂಬಿದ ಗೋವರ್ಧನ್, 2.5 ಕೆಜಿ ನಕಲಿ ಚಿನ್ನದ ಬಿಲ್ಲೆಗಳನ್ನ ಪಡೆದು 60 ಲಕ್ಷ ನೀಡಿದ್ದಾರೆ. ನಂತರ ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ ಚಿನ್ನ ಎಂಬ ವಿಚಾರ ಬಯಲಾಗಿದೆ. ಗುತ್ತಿಗೆದಾರ ಗೋವರ್ಧನ ಅವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರಳಿಂದ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮರಳಿ ಸಮಾಜ ಸೇವೆಗೆ
ಸೆಪ್ಟೆಂಬರ್ 09 ರಂದು ರಾತ್ರಿ ಹತ್ತು ಗಂಟೆಗೆ ದಾವಣಗೆರೆ ನಗರವ ವಿಜಯಲಕ್ಷ್ಮಿ ರಸ್ತೆಯ ಪವನ್ ಜ್ಯೂಯಲರ್ಸ್ ಬೀಗ ಮುರಿದು ಕಳ್ಳತನ ಮಾಡಿದ್ದ ಕಳ್ಳನನ್ನು ಬಸವನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿನ್ನದಂಗಡಿಗಳಿಗೆ ಕನ್ನಾ ಹಾಕುತ್ತಿದ್ದ ಜೀಬನ್ ಸಿಂಗ್ (55) ಬಂಧಿತ ಆರೋಪಿ. ಬಂಧಿತನಿಂದ 18 ಲಕ್ಷ ರೂಪಾಯಿ ಮೌಲ್ಯದ 48 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕಲಬುರ್ಗಿ ಜಿಲ್ಲೆಯ ಬಬಲಾದ ಗ್ರಾಮದಲ್ಲಿ ಆರೋಪಿಯ ಸುಳಿವು ಪತ್ತೆಯಾಗಿತ್ತು. ಕಳ್ಳತನ ಮಾಡಿದ್ದ ಬೆಳ್ಳಿಯನ್ನ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮೂವರು ದುಷ್ಕರ್ಮಿಗಳು ಅಂಗಡಿ ಮಾಲೀಕನಿಗೆ ಮಂಕುಬೂದಿ ಎರಚಿ ಗಮನ ಬೇರೆಡೆಗೆ ಸೆಳೆದು 20 ಸಾವಿರ ನಗದು ಎಗರಿಸಿದ ಘಟನೆ ನಡೆದಿದೆ. ಓರ್ವ ವ್ಯಕ್ತಿ, ಇಬ್ಬರು ಮಹಿಳೆರು ಹಣ ಎಗರಿಸಿದ್ದಾರೆ.
ಅಂಗಡಿ ಮಾಲೀಕ ಹೇಮಂತ್ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಮಗನ ಸ್ಕೂಲ್ ಫೀಜ್ ಕಟ್ಟಲೆಂದು ಇಡಲಾಗಿದ್ದ ಹಣವನ್ನು ದುಷ್ಕರ್ಮಿಗಳು ಕದ್ದಿದ್ದಾರೆ. ಕಿಲಾಡಿ ಕಳ್ಳರ ಕೈ ಚಳಕ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪರಿಚಿತ ಮೂವರನ್ನು ಬಂಧಿಸುವಂತೆ ಅಂಗಡಿ ಮಾಲೀಕ ಕಣ್ಣೀರು ಹಾಕಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:10 pm, Sun, 1 October 23