ದಾವಣಗೆರೆ, ಜ.31: ಕರ್ನಾಟಕದಲ್ಲಿ ಬೆಳ್ಳುಳ್ಳಿ (Garlic) ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಬೆಳ್ಳುಳ್ಳಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ದರಕ್ಕೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ. ಈ ಹಿಂದೆ ಕೆಜಿಗೆ 280-300 ರೂ.ಗೆ ಸಿಗುತ್ತಿದ್ದ ಬೆಳ್ಳುಳ್ಳಿ ಈ ವಾರ ಮತ್ತೆ ಏರಿಕೆ ಕಂಡಿದೆ. ಹೋಲ್ ಸೇಲ್ನಲ್ಲಿ ಪ್ರತಿ ಕ್ವಿಂಟಾಲ್ಗೆ 32 ರಿಂದ 33 ಸಾವಿರ ದರ ನಿಗದಿಯಾಗಿದೆ. ಸದ್ಯ ಜನ 400-500ರೂಗೆ ಕೆಜಿ ಬೆಳ್ಳುಳ್ಳಿ ಖರೀದಿ ಮಾಡುತ್ತಿದ್ದಾರೆ.
ದಾವಣಗೆರೆ ಎಪಿಎಂಸಿ ಹರಾಜಿನಲ್ಲಿ ಅತ್ಯಂತ ಹೆಚ್ಚು ದರಕ್ಕೆ ಬೆಳ್ಳುಳ್ಳಿ ಸೇಲ್ ಆಗಿದೆ. ಬೆಳ್ಳುಳ್ಳಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಇರದೇ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬೆಳ್ಳುಳ್ಳಿ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಬೆಳ್ಳುಳ್ಳಿ ದರ ಏರಿಕೆಯಾಗಿದೆ. ಇದರಿಂದ ರೈತರು ಫುಲ್ ಖುಷ್ ಆಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಉತ್ತಮ ಗುಣಮಟ್ಟದ ನಾಟಿ ಬೆಳ್ಳುಳ್ಳಿ ದರ 450 ರೂ.ದಿಂದ 500 ರೂ.ವರೆಗೂ ಮಾರಾಟವಾಗುತ್ತಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬೆಳ್ಳುಳ್ಳಿ ಇಳುವರಿ ಫೆಬ್ರವರಿಯಲ್ಲಿ ಬರುವ ನಿರೀಕ್ಷೆಯಿದ್ದು, ಆನಂತರ ದರ ಇಳಿಕೆಯಾಗಬಹುದು ಎಂದು ಕೆಲವರು ಊಹಿಸಿದ್ದಾರೆ.
ಇದನ್ನೂ ಓದಿ: ಧಿಡೀರನೆ ಕುಸಿದ ಈರುಳ್ಳಿ ಬೆಲೆ: ಕೆಜಿಗೆ 3-4 ರೂ. ಮಾರಾಟ, ಕಂಗಾಲಾದ ರೈತ
ಇನ್ನು ಮತ್ತೊಂದೆಡೆ ಈರುಳ್ಳಿ ದರ ಕುಸಿದಿದೆ. ಬರಗಾಲ ಇದ್ದರೂ ಭರ್ಜರಿ ಈರುಳ್ಳಿ ಬೆಳೆ ಬಂದಿದೆ. ಆದರೆ ಈರುಳ್ಳಿ ದರ ಪಾತಾಳಕ್ಕೆ ಬಿದ್ದಿದೆ. ದಾವಣಗೆರೆ ಎಪಿಎಂಸಿಯಲ್ಲಿ ಮೂರರಿಂದ ನಾಲ್ಕು ರೂಪಾಯಿಗೆ ಕೆಜಿ ಈರುಳ್ಳಿ ಮಾರಾಟವಾಗುತ್ತಿದೆ. ಮಾರಕಟ್ಟೆಗೆ ತಂದ ಲಾರಿ ಬಾಡಿಗೆ ಸಿಕ್ಕರೆ ಸಾಕು ಎಂದು ಈರುಳ್ಳಿ ಬೆಳೆದ ರೈತರು ಅಳಲು ತೋಡಿಕೊಂಡಿದ್ದಾರೆ. ದರ ಹೆಚ್ಚಾಗಬಹುದು ಎಂದು ಕಳೆದ ಎರಡು ಮೂರು ದಿನಗಳಿಂದ ಕಾದುಕುಳಿತಿದ್ದ ರೈತರು ಕಂಗಾಲಾಗಿದ್ದಾರೆ.
ಟಾಪ್ ದರ ಪ್ರತಿ ಕ್ವಿಂಟಾಲ್ ಗೆ 1500 ರೂಪಾಯಿ. ಅತ್ಯುತ್ತಮ ದರ ಈರುಳ್ಳಿ 1200 ರಿಂದ 1400, ಉತ್ತಮ ದಪ್ಪ ಈರುಳ್ಳಿ 1000 ರಿಂದ 1100 ರೂ. ಮಧ್ಯಮ ಗಾತ್ರದ ಈರುಳ್ಳಿ 700ರಿಂದ 800, ಸಣ್ಣ ಗಾತ್ರದ ಈರುಳ್ಳಿ 300 ರಿಂದ 400 ರೂಪಾಯಿ ದರ ಇದೆ. ರಾಜ್ಯದ ಬಹುತೇಕ ಕಡೆ ಬರಗಾಲ. ಈ ನಡುವೆ ಉತ್ತಮವಾಗಿ ಈರುಳ್ಳಿ ಬೆಳೆಯಲಾಗಿದೆ. ನಮ್ಮ ರಾಜ್ಯದ ಈರುಳ್ಳಿ ಬೇರೆ ಕಡೆ ರಫ್ತಾಗುವುದನ್ನ ಸರ್ಕಾರ ನಿಲ್ಲಿಸಿದೆ. ನಿರೀಕ್ಷೆಯಂತೆ ಖರೀದಿ ಆಗುತ್ತಿಲ್ಲ. ಹೀಗಾಗಿ ಬಂದಷ್ಟು ಬರಲಿ ಎಂದು ರೈತರು ಮಾರಾಟ ಮಾಡಿ ಹೋಗುವ ಸ್ಥಿತಿ ಬಂದಿದೆ. ಈರುಳ್ಳಿ ಸಂಗ್ರಹಕ್ಕೆ ಕೋಲ್ಡ್ ಸ್ಟೊರೇಜ್ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ