ಗ್ರಾಮಸ್ಥರೆಲ್ಲ ಸೇರಿ ದಲಿತ ಯುವಕನಿಗೆ ದೇವಸ್ಥಾನದಲ್ಲಿ ಜಾತ್ಯತೀತವಾಗಿ ಅದ್ದೂರಿ ಮದುವೆ ಮಾಡಿಸಿದರು! ಏನಿದರ ವಿಶೇಷ?

ನಿಜಕ್ಕೂ ಇದೊಂದು ಅಪರೂಪದ ಘಟನೆ. ಹೋಟೆಲುಗಳಲ್ಲಿ, ಊರಿನ ಬಾವಿಯಲ್ಲಿ ದಲಿತರು ನೀರು ಕುಡಿದರೆ ಜಗಳ ಏರ್ಪಡುತ್ತದೆ. ಜೊತೆಗೆ ಗ್ರಾಮದಲ್ಲಿ ಒಳ್ಳೆ ಬಟ್ಟೆ ಹಾಕಿಕೊಂಡು ಸುತ್ತಾಡಿದ್ರೆ ಸವರ್ಣೀಯರು ಬೇಸರ ವ್ಯಕ್ತಪಡಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ಗ್ರಾಮಸ್ಥರು ಸೇರಿ ದಲಿತ ಯುವಕನ ಮದ್ವೆ ಮಾಡಿದ್ದಾರೆ ಎಂಬುದು ಸಂತಸದ ವಿಚಾರವೇ ಸರಿ.

Follow us
| Updated By: ಸಾಧು ಶ್ರೀನಾಥ್​

Updated on:Feb 03, 2024 | 11:52 AM

ರಾತ್ರಿ ಹನ್ನೆರಡು ಗಂಟೆಯೇ ಆಗಿರಲಿ ಯಾರು ಏನೇ ಕಷ್ಟ ಆಗಿದೆ ಆಸ್ಪತ್ರೆಗೆ ಹೋಗಬೇಕು ಎಂದು ಕೇಳಿದರೆ ಸಾಕು ನೇರವಾಗಿ ತನ್ನದೇ ಅಂಬ್ಯುಲೆನ್ಸ್ ವಾಹನವನ್ನು ತೆಗೆದು ಆಸ್ಪತ್ರೆ ಕರೆದುಕೊಂಡುಹೋಗಿ ಚಿಕಿತ್ಸೆ ಕೊಡಿಸಿ ಮತ್ತೆ ಮನೆಗೆ ಕರೆತಂದು ಬಿಡುತ್ತಾನೆ ಈ ವ್ಯಕ್ತಿ. ಹೀಗಾಗಿಯೇ ಈತ ಮೂರು ಸಲ ಗ್ರಾ ಪಂ ಸದಸ್ಯ ಜೊತೆಗೆ ಒಮ್ಮೆ ಗ್ರಾ ಪಂ ಉಪಾಧ್ಯಕ್ಷ ಆಗಿದ್ದಾನೆ. ದಲಿತ ಸಮುದಾಯಕ್ಕೆ ಸೇರಿದ ಈ ಯುವಕನ ಸ್ವಭಾವವನ್ನು ಇಡಿ ಗ್ರಾಮವೇ ಮೆಚ್ಚಿಕೊಂಡಿದೆ. ಇದೇ ಕಾರಣಕ್ಕೆ ಈಗ ಗ್ರಾಮಸ್ಥರೇ ಮುಂದೆ ಬಂದು ಹೆಣ್ಣು ನೋಡಿ, ನಿನ್ನೆ ಶುಕ್ರವಾರ ಮದ್ವೆ ಮಾಡಿಸಿದ್ದಾರೆ. ಇಲ್ಲಿದೆ ನೋಡಿ ಆ ವಿಶೇಷ ಮದ್ವೆ ಸ್ಟೋರಿ.

ಹೀಗೆ ಊರಿನ ಗ್ರಾಮಸ್ಥರೆಲ್ಲ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಗ್ರಾಮದ ದಲಿತ ಯುವಕನಿಗೆ ಜಾತ್ಯತೀತವಾಗಿ ಸೇರಿ ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ. ಹೌದು ಈ ರೀತಿ ಗ್ರಾಮಸ್ಥರಿಂದ ಮದುವೆ ಆಗಿರುವ ವ್ಯಕ್ತಿ ಗುಡಾಳ್ ಗ್ರಾಮದ ದಲಿತ ಯುವಕ ಅಂಜಿನಪ್ಪ.

ಈ ದಲಿತ ಯುವಕನ ಕಂಡ್ರೆ ಗ್ರಾಮದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು, ಆ ಊರಿನ ಯಾರಿಗೆ ಆರೋಗ್ಯ ತೊಂದ್ರೆ ಆಗಿದೆ ಅಂದ್ರೆ ಅಲ್ಲಿ 108 ಅಂಬ್ಯುಲೆನ್ಸ್ ರೂಪದಲ್ಲಿ ತನ್ನ ಬಳಿ ಇರುವ ಓಮ್ನಿಯಲ್ಲಿ ತುರ್ತು ಸೇವೆ ನೀಡುತ್ತಾನೆ. ಇದರಿಂದ ಗ್ರಾಮದಲ್ಲಿ ಎಲ್ಲರಿಗೂ ಅಂಜಿನಪ್ಪ ಅಂದ್ರೆ ಬಲು ಪ್ರೀತಿ, ಆ ಪ್ರೀತಿ ಮತಗಳಲ್ಲಿ ಮಾರ್ಪಟ್ಟು ಸತತ ಮೂರನೇ ಬಾರಿ ಗ್ರಾಮ ಪಂಚಾಯತಿ ಸದಸ್ಯನಾಗಿದ್ದಾನೆ.

ಸುಮಾರು 45 ವರ್ಷ ವಯಸ್ಸಿನ ಅಂಜಿನಪ್ಪ ತನ್ನ ತಂಗಿಯರಿಗೆ ಒಂದು ನೆಲೆ ಒದಗಿಸಬೇಕು ಅಂತಾ ಇಷ್ಟು ದಿನಗಳವರೆಗೆ ವೈವಾಹಿಕ ಜೀವನಕ್ಕೆ ವಿರಾಮ ನೀಡಿದ್ದನು. ನಂತರ ಊರಿನ ಗ್ರಾಮಸ್ಥರ ಬಲವಂತ ಮತ್ತು ಅವರ ಮಾತಿಗೆ ಬೆಲೆ ನೀಡಿ ಹರಪನಹಳ್ಳಿ ತಾಲೂಕಿನ ಪಲ್ಲವಿ ಜೊತೆ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗೆ ಇಡೀ ಊರಿನ ಜನ ಶುಭಾಶಯ ಕೊರಿದ್ದು, ಅಂಜಿನಪ್ಪನನ್ನು ಆಂಜನೇಯ ಗುಡಿಯಲ್ಲಿ ಮದುವೆ ಮಾಡಿದ್ದೇವೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಅವನ ತಂಗಿಯರ ಕಾರ್ಯ ಮುಗಿಸಿ ಮದುವೆ ಆಗಿದ್ದಾನೆ, ಆತನಿಗೆ ಶುಭವಾಗಲಿ ಎಂದಿದ್ದಾರೆ.

ಆತ ಜನ ಸೇವಕ, ಜನ್ರ ಸೇವೆ ಮಾಡಲು ಗ್ರಾಪಂ‌ ಸದಸ್ಯನಾಗಿ ಆಯ್ಕೆಯಾದ್ರು. ತನ್ನ ಕ್ಷೇತ್ರದ ಜನರಿಗೆ ಚಿಕ್ಕ ಸಮಸ್ಯೆಯೇ ಎದುರಾದ್ರು ತಡಮಾಡದೆ ಧಾವಿಸಿಬಂದು ಸಮಸ್ಯೆ ಬಗೆಹರಿಸುತ್ತಾ, ಅ ಗ್ರಾ ಪಂ ಸದಸ್ಯ ಅವರ ನೋವಿಗೆ ಧ್ವನಿಯಾಗಿ ನಿಲ್ಲುತ ಸದ್ದಿಲ್ಲದೆ ತನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದಾರೆ.

ಜನ್ರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರಿಗೆ ಹತ್ತಿರವಾಗಿದ್ದ ಗ್ರಾ ಪಂ ಸದಸ್ಯನಿಗೆ ಇಡೀ ಗ್ರಾಮಸ್ಥರು ಕನ್ಯೆ ನೋಡಿ ಮದುವೆ ಮಾಡಿಸಿ ಹಾರೈಸಿದ್ದಾರೆ. ಗ್ರಾ ಪಂ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೇವಾಲಯ, ಬಡವರಿಗೆ ಆಶ್ರಯ ಮನೆ ಕೊಡಿಸಿದ್ದು, ಜಮೀನು ಮಂಜೂರು ಮಾಡುವುದು, ಹೊಲ ಇಲ್ಲದವರಿಗೆ ಹೊಲ ಕೊಡಿಸುವ ಸಾಮಾಜಿಕ ಬದಲಾವಣೆ ಮಾಡಿದ್ದಾರೆ.

ಎರಡು ಬಾರಿ ಅಧ್ಯಕ್ಷರಾಗಿ ಉದಾತ್ತ ಕೆಲಸ ಮಾಡಿದ್ದಾರೆ. ಗುಡಾಳ್ ಗ್ರಾಮದಲ್ಲಿರುವ ವಾತಾವರಣ ರಾಜ್ಯದಲ್ಲಿಯೂ ಪಸರಿಸಲಿ. ಜಾತಿ ಬೇಧ ಇಲ್ಲದೆ ಒಬ್ಬ ದಲಿತ ಯುವಕನ ಮದುವೆ ಮಾಡಿದ್ದಾರೆ, ಜಾತಿ ಭೇದ ಎಂಬುದು ತೊಲಗಲಿ, ಈ ರೀತಿಯ ವಾತಾವರಣ ರಾಜ್ಯದಲ್ಲಿ ಪಸರಿಸಲಿ ಎಂದು ದಲಿತ‌ ಮುಖಂಡರು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಇದೊಂದು ಅಪರೂಪದ ಘಟನೆ. ಇಂದು ಹೋಟೆಲುಗಳಲ್ಲಿ, ಊರಿನ ಬಾವಿಯಲ್ಲಿ ದಲಿತರು ನೀರು ಕುಡಿದರೆ ಜಗಳ ಏರ್ಪಡುತ್ತದೆ. ಜೊತೆಗೆ ಗ್ರಾಮದಲ್ಲಿ ಒಳ್ಳೆ ಬಟ್ಟೆ ಹಾಕಿಕೊಂಡು ಸುತ್ತಾಡಿದ್ರೆ ಸವರ್ಣೀಯರು ಬೇಸರ ವ್ಯಕ್ತಪಡಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ಗ್ರಾಮವೇ ಸೇರಿ ದಲಿತ ಯುವಕನ ಮದ್ವೆ ಮಾಡಿದ್ದಾರೆ ಎಂಬುದು ಸಂತಸದ ವಿಚಾರವೇ ಸರಿ.

Published On - 11:32 am, Sat, 3 February 24