ದಾವಣಗೆರೆ. ಸೆ.13: ಈ ವೀಳ್ಯೆದೆಲೆಗಳು (Betel Leaf) ಒಂದು ಕಾಲದಲ್ಲಿ ಕಲ್ಕತ್ತಾ ಪಾನ್ಗೆ ಸವಾಲ್ ಆಗಿದ್ದ ಎಲೆ ಇದು. ನೀವು ನಂಬುವುದು ಕಷ್ಟ. ಈ ಭಾಗದ ಜನ ಶತಮಾನದಿಂದ ಈ ಎಲೆ ಬೆಳೆಯುತ್ತಾರೆ. ಬೆಳಗಾದ್ರೆ, ಎಲೆ ಮಾರುವುದು ಈ ರೈತರ ಕಾಯಕ. ಈ ಎಲೆ ಪಾಕಿಸ್ತಾನದ ಕರಾಚಿಗೆ ಪೂರೈಕೆ ಆಗುತ್ತದೆ. ಅಂದಹಾಗೆ ನಾವು ಹೇಳುತ್ತಿರುವ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಪ್ರದೇಶದ ಎಲೆ ಬಳ್ಳಿ ಬಗ್ಗೆ. ಹೌದು, ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಿರುವ ಹಣಗವಾಡಿ ಗ್ರಾಮಸ್ಥರು ಈ ಎಲೆ ಬಳ್ಳಿ ನಂಬಿ ಬದುಕು ನಡೆಸುತ್ತಿರುತ್ತಿದ್ದಾರೆ. ಇದೀಗ ಕೈ ಕೊಟ್ಟ ಮಳೆಯಿಂದ ವಿಳ್ಯೆದೆಲೆ ನಾಶವಾಗುತ್ತಿದೆ.
ಅಂದರೆ, ನಿಮ್ಮ ಬಳಿ 20 ಗುಂಟೆ ಜಮೀನು ಇದ್ದರೇ ತಿಂಗಳಿಗೆ 40 ರಿಂದ 50 ಸಾವಿರ ಆದಾಯ ಖಚಿತ. ಅದು ರಾಜನ ತರ ಜೀವನ. ಯಾರ ಹಂಗಿಲ್ಲದೆ ಇರಬಹುದು. ಸುತ್ತಲು ಕನಿಷ್ಟ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಇಂತಹ ಬಳ್ಳಿ ಇದೆ. ಆದ್ರೆ, ಆ ಬಳ್ಳಿಗೆ ಈಗ ಆಪತ್ತು ಬಂದಿದೆ. ಇದಕ್ಕೆ ಕಾರಣ ಕೈಕೊಟ್ಟ ಮಳೆ. ಬೊರ್ವೇಲ್ ಬತ್ತಿವೆ. ಹೀಗಾಗಿ ಇದ್ದಕ್ಕಿದ್ದಂತೆ ವಿಳ್ಯೆದೆಲೆ ಬಳ್ಳಿ ಸರ್ವನಾಶವಾಗುತ್ತಿದೆ. ಅದಕ್ಕೋಸ್ಕರ ರೈತರು, ಹಾಳಾಗುತ್ತಿರುವ ಬಳ್ಳಿ ತೆಗೆದು ಒಳ್ಳೆಯದನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ:ಬರದ ಆತಂಕದಲ್ಲಿ ಹಾವೇರಿ ರೈತರು; ಒಣಗಿ ಹೋಗ್ತಿರುವ ಸಾವಿರಾರು ಹೆಕ್ಟರ್ ಬೆಳೆ
ಕಳೆದ ಹತ್ತು ವರ್ಷಗಳ ಹಿಂದೆ ಎಲೆ ಬಳ್ಳಿ ಹಬ್ಬಲು ಬೆಳೆಸಿದ ಬಂಡುಗಳಿಗೆ ರೋಗ ಬಂದು ಹತ್ತಾರು ಎಲೆ ಬಳ್ಳಿ ತೋಟಗಳು ಹಾಳಾಗಿದ್ದವು. ಆದ್ರೆ, ಈಗ ಮಳೆ ಇಲ್ಲದೆ ಎಲೆ ಬಳ್ಳಿ ಸರ್ವ ನಾಶವಾಗುತ್ತಿದೆ. ಕಾರಣ ನಿರೀಕ್ಷಿತ ಪ್ರಮಾಣದ ತೇವಾಂಶ ಇಲ್ಲಿದ್ದರಿಂದ ಇದ್ದಕ್ಕಿಂತೆ ಎಲೆ ಬಳ್ಳಿ ತೋಟವೇ ಒಣಗುತ್ತಿದೆ. ಹನ್ನೇರಡು ಸಾವಿರ ವಿಳ್ಯೆದೆಲೆ ಇರುವ ಒಂದು ಕಟ್ಟಿಗೆ ಮಾರುಕಟ್ಟೆಯಲ್ಲಿ 16ರಿಂದ18 ಸಾವಿರ ರೂಪಾಯಿ ದರವಿದೆ. ತಿಂಗಳಿಗೆ ಅರ್ಧ ಎಕರೆ ಪ್ರದೇಶದಲ್ಲಿ ಎಲೆಬಳ್ಳಿ ಇದ್ರೆ, ಐದರಿಂದ ಆರು ಕಟ್ಟು ಎಲೆ ಸಿಗುತ್ತಿತ್ತು. ಈಗ ಒಂದು ಎರಡು ಕಟ್ಟು ಕೂಡ ಸಿಗುತ್ತಿಲ್ಲ.
ಇಂತಹ ಪ್ರಸಿದ್ಧ ಎಲೆ ಬಳ್ಳಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಮೇಲಾಗಿ ನಿರಂತರ ಪ್ರಯತ್ನ ಮಾಡಿದರೂ ಪ್ರಕೃತಿ ಮುಂದೆ ರೈತ ಕುಬ್ಜ. ಇಂತಹ ಪರಿಸ್ಥಿತಿಯಲ್ಲಿ ಅದಷ್ಟು ಬೇಗ ಮಳೆ ಬೇಕಾಗಿದೆ. ಇದಕ್ಕೆ ಕೃತಕವಾಗಿ ಮಾಡುವುದು ಎನು ಇಲ್ಲ. ಎಲ್ಲಾ ಪ್ರಕೃತಿಯ ಕೈಯಲ್ಲಿಯೇ ಇದೆ. ಇಂತಹ ಪ್ರಕೃತಿ ಕೈಗೆ ಸಿಕ್ಕು ಎಲೆ ಬಳ್ಳಿ ಬೆಳೆದ ರೈತ ಮಾತ್ರ ಕಣ್ಣೀರು ಹಾಕುತ್ತಿದ್ದಾನೆ. ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ಇಂದು ಮರೆಯಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ