ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ತಮ್ಮನ ಮಗ ಚಂದ್ರಶೇಖರ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆಟೊ ಡ್ಯಾಮೇಜ್ ಪರಿಣಿತರು ಮತ್ತು ವಿಧಿವಿಜ್ಞಾನ ತಜ್ಞರು ಕ್ಲೆವರ್ ವೆರಿಫಿಕೇಷನ್ (Clever Verification) ಆರಂಭಿಸಿದ್ದು, ಹಲವು ಆಯಾಮಗಳಿಂದ ಪರಿಶೀಲನೆ ಮಾಡುತ್ತಿದ್ದಾರೆ. ಚಂದ್ರಶೇಖರ್ ಸಾವಿಗೆ (Chandrashekhar Death) ಅಪಘಾತ ಕಾರಣವಲ್ಲ, ಅದು ಕೊಲೆ ಎಂದು ಕುಟುಂಬ ಸದಸ್ಯರು ಈಗಾಗಲೇ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ‘4R’ ನಿಯಮದ ಅನ್ವಯ ಪರಿಶೀಲನೆಗೆ ಮುಂದಾಗಿದ್ದಾರೆ. ಪ್ರಸ್ತುತ ಕಾರಿಗೆ ಆಗಿರುವ ಹಾನಿಯ ಬಗ್ಗೆಯೇ ಗಮನ ಕೇಂದ್ರೀಕರಿಸಲಾಗಿದೆ.
‘4R’ (Ridges on Radial cracks are at Right angle to the Rear) ನಿಯಮಗಳ ಅನ್ವಯ ಕಾರಿನ ಗಾಜು ಒಡೆದಿರುವ ರೀತಿಯನ್ನು ಪರಿಶೀಲಿಸಲಾಗುತ್ತಿದೆ. ಅಪಘಾತ, ಗಲಭೆ, ಪ್ರತಿಭಟನೆಗಳ ಸಂದರ್ಭದಲ್ಲಿ ಯಾವುದಾದರೂ ವಾಹನಕ್ಕೆ ಹಾನಿಯಾದ ಸಂದರ್ಭದಲ್ಲಿ ‘4R’ ನಿಯಮಗಳ ಅನ್ವಯ ಪರಿಶೀಲನೆ ಮಾಡಲಾಗುತ್ತದೆ. ಈ ನಿಯಮದ ಪ್ರಕಾರ ಪರಿಶೀಲನೆ ಮಾಡಿದರೆ ಗಾಜು ಒಡೆದಿರುವ ರೀತಿಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಸದ್ಯ ಚಂದ್ರಶೇಖರ್ ಇದ್ದ ಕಾರು ನಾಲೆಯಲ್ಲಿ ಪತ್ತೆ ಹಿನ್ನೆಲೆಯಲ್ಲಿ ಗಾಜಿಗೆ ಆಗಿರುವ ಹಾನಿಯ ಬಗ್ಗೆ ಹಲವು ಆಯಾಮಗಳಿಂದ ಪರಿಶೀಲನೆ ಮಾಡಲಾಗುತ್ತಿದೆ.
‘4R’ ನಿಯಮಗಳ ಅನ್ವಯ ಪರಿಶೀಲಿಸಿದಾಗ ಅಪಘಾತದ ತೀವ್ರತೆ, ಗಾಜಿನ ಪ್ರಭಾವ, ಗಾಜಿಗೆ ಒಳಗಿನಿಂದ ಹಾನಿಯಾಗಿದೆಯೋ, ಹೊರಗಿನಿಂದ ಹಾನಿಯಾಗಿದೆಯೋ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತದೆ. ಹೊರಗಿನಿಂದ ಗಾಜಿಗೆ ಹಾನಿಯಾಗಿದ್ದರೆ ಅದು ಅಪಘಾತ, ಕಂಬ, ಕಲ್ಲು ಅಥವಾ ಗಿಡಗಳಿಗೆ ಡಿಕ್ಕಿಯಾಗಿರಬಹುದು ಎಂದು ಶಂಕಿಸಲಾಗುತ್ತದೆ. ಒಳಗಿನಿಂದ ಹಾನಿಯಾಗಿದ್ದರೆ ಕಾರಿನಲ್ಲಿದ್ದವರೇ ಕಾರಿನ ಗಾಜು ಒಡೆದಿರಬಹುದು ಎಂದು ಶಂಕಿಸಲಾಗುತ್ತದೆ. ಗಾಜು ಒಡೆದಿರುವ ರೀತಿ, ಗಾಜಿನ ಮೇಲಿರುವ ರೇಖೆಗಳು, ಪೆಟ್ಟಿನ ತೀವ್ರತೆಯನ್ನು ಆಧರಿಸಿ ತನಿಖಾಧಿಕಾರಿಗಳು ಒಂದು ತೀರ್ಮಾನಕ್ಕೆ ಬರುತ್ತಾರೆ.
ಹೊಸ ಫೋಟೊಗಳು ಬಹಿರಂಗ
ಚಂದ್ರಶೇಖರ್ ಸಾವಿಗೆ ಸಂಬಂಧಿಸಿದಂತೆ ಮತ್ತಷ್ಟು ಹೊಸ ಫೋಟೊಗಳನ್ನು ಶಾಸಕ ರೇಣುಕಾಚಾರ್ಯ ಬಿಡುಗಡೆ ಮಾಡಿದ್ದಾರೆ. ತುಂಗಾ ಕಾಲುವೆಯಿಂದ ಕಾರು ಮೇಲೆತ್ತುವ ಫೋಟೊಗಳೂ ಇದರಲ್ಲಿ ಸೇರಿವೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಇದು ಅಪಘಾತವಲ್ಲ ಎಂದು ಶಾಸಕ ರೇಣುಕಾಚಾರ್ಯ ಪದೇಪದೆ ಹೇಳುತ್ತಿದ್ದಾರೆ. ನಿನ್ನೆ (ನ 5) ಕಾರಿನ ಫೋಟೊ ತೆಗೆಯಲೆಂದು ಶಾಸಕ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಇನ್ಸ್ಪೆಕ್ಟರ್ ಸಿದ್ದನಗೌಡರ ಕಾರು ಮುಟ್ಟಲು ಅವಕಾಶ ಕೊಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಮಾತಿನ ಚಕಮಕಿಯೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಕಾರ್ಯಕರ್ತರು ತೆಗೆದ ಫೋಟೊಗಳನ್ನು ಬಿಡುಗಡೆ ಮಾಡಿರುವುದು ಮಹತ್ವ ಪಡೆದಿದೆ.
ಹಲವು ಅನುಮಾನ
ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದ ಮೃತ ಚಂದ್ರಶೇಖರ್ನ ಕ್ರೇಟಾ ಕಾರು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹ್ಯುಂಡಾಯ್ ಕಂಪನಿಯ ಕ್ರೇಟಾ ಕಾರು ಭಾಗಶಃ ಜಖಂಗೊಂಡಿದೆ. ಕೆಎ17 ಎಂಎ 2534 ಸಂಖ್ಯೆಯ ಈ ಕಾರು ಬಿಎಸ್ 6 ಮಾನದಂಡಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿದೆ. ಅಪಘಾತದಿಂದ ಕಾರಿನ ಚಕ್ರದ ಎಡ ಭಾಗ, ಮುಂಭಾಗದ ಬಾನೆಟ್ ಹಾಗೂ ಕಾರಿನ ಗಾಜು ಭಾಗಶಃ ಹಾನಿಯಾಗಿದೆ. ಕೃತ್ಯ ನಡೆದ ಜಾಗದಲ್ಲಿ ಸಿಕ್ಕ ಕುರುಹುಗಳಿಗೂ ಕಾರಿಗೆ ಆದ ಹಾನಿಗೂ ಮೇಲ್ನೋಟಕ್ಕೆ ಸಂಬಂಧ ಕಂಡುಬರುತ್ತಿಲ್ಲ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ವಿಧಿವಿಜ್ಞಾನ ತಂಡವೂ ಇಂಥದ್ದೇ ಅನುಮಾನಗಳನ್ನು ವ್ಯಕ್ತಪಡಿಸುತ್ತಿದೆ.
ಕಾರಿನ ಗಾಜು ಒಡೆದಿದೆ. ಆದರೆ ಅದು ಒಳಗಿದ್ದವರೇ ಒಡೆದಿರುವ ಸಾಧ್ಯತೆಯಿದ್ದಂತೆ ಇದೆ. ಅಪಘಾತದಲ್ಲಿ ಕಾರಿಗೆ ಸಂಪೂರ್ಣ ಹಾನಿಯಾಗಿದೆ. ನೇರವಾಗಿ ಕಾಲುವೆಗೆ ಬಿದ್ದಿದ್ದರೆ ಇಷ್ಟು ಪ್ರಮಾಣದ ಹಾನಿಯಾಗುತ್ತಿರಲಿಲ್ಲ ಎಂದು ವಿಧಿವಿಜ್ಞಾನ ಅಧಿಕಾರಿಗಳು ಅಭಿಪ್ರಾಯಪಡುತ್ತಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿರುವ (ಸೀನ್ ಆಫ್ ಕ್ರೈಂ) ಎಲ್ಲ ವಸ್ತುಗಳು ಹಾಗೂ ವಿವರಗಳ ಬಗ್ಗೆ ವಿಧಿವಿಜ್ಞಾನ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Published On - 11:57 am, Sun, 6 November 22