ದಾವಣಗೆರೆ: ಗದ್ದೆಗೆ ಸೇರಿದ ಕೆಮಿಕಲ್ ನೀರು; ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶ

ಅವರೆಲ್ಲ ನಗರಕ್ಕೆ ಹತ್ತಿರ ಇದ್ದರೂ ಕೃಷಿಯನ್ನು ಮರೆತಿಲ್ಲ.‌ ನಿತ್ಯ ವ್ಯವಸಾಯ ಮಾಡಿ ಜೀವನ ಮಾಡುತ್ತಿದ್ದ ರೈತರು. ಲೇಔಟ್ ಮಾಫಿಯಾಗಳ ಮುಂದೆ ಕೃಷಿಯೇ ಮುಖ್ಯ ಎನ್ನುವಂತೆ ಸಾಧಿಸಿ ತೋರಿಸಿದವರು. ಆದರೆ, ಸಿಟಿ ಹತ್ತಿರವಿರುವುದೇ ಇವರಿಗೆ ಮುಳುವಾಗಿದೆ.‌ ಕಿಡಿಗೇಡಿಗಳು ಮಾಡುವ ಕೆಲಸದಿಂದ ರೈತರು ಸಂಕಷ್ಟ ಅನುವಿಸುತ್ತಿದ್ದಾರೆ. ಅದು ಏನು ಅಂತೀರಾ? ಈ ಸ್ಟೋರಿ ನೋಡಿ.

ದಾವಣಗೆರೆ: ಗದ್ದೆಗೆ ಸೇರಿದ ಕೆಮಿಕಲ್ ನೀರು; ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶ
ಗದ್ದೆಗೆ ನುಗ್ಗಿದ ಕೆಮಿಕಲ್​ಯುಕ್ತ ನೀರು, ಬೆಳೆದಿದ್ದ ಬೆಳೆ ನಾಶ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2023 | 4:27 PM

ದಾವಣಗೆರೆ, ಆ.30: ರೈತರ ಪರಿಸ್ಥಿತಿಯೇ ಹಾಗೇ, ಇನ್ನೇನು ಒಳ್ಳೆಯ ಬೆಳೆ ಕೈಗೆ ಬಂತು ಅನ್ನುವಷ್ಟರಲ್ಲಿ ಏನಾದರೂ ಸಮಸ್ಯೆಯಾಗುತ್ತದೆ. ಅದರಂತೆ ಇದೀಗ  ದಾವಣಗೆರೆಯ (Davanagere) ಹೊರವಲಯದ ಬಾತಿ ಕೆರೆ ಪಕ್ಕದಲ್ಲಿರುವ ಭತ್ತದ ಜಮೀನುಗಳಲ್ಲಿ ಆಸಿಡ್ ಮಿಶ್ರಿತ ಕೆಮಿಕಲ್ (Chemical) ಸೇರ್ಪಡೆಯಾಗಿದ್ದು, ಇದರಿಂದ ಭತ್ತದ ಬೆಳೆ ಸುಟ್ಟು ಹೋಗುತ್ತಿವೆ. ಬಾತಿ ಗ್ರಾಮದ ವಾಸು ಎನ್ನುವರಿಗೆ ಸೇರಿದ ಒಂದು ಎಕರೆ ಭತ್ತದ ಗದ್ದೆ ಸಂಪೂರ್ಣ ಹಾಳಾಗಿದ್ದು, ಈ ಗದ್ದೆಗೆ ಕೆಮಿಕಲ್ ನೀರು ಸೇರ್ಪಡೆಯಾದ ಹಿನ್ನಲೆ ನಾಟಿ ಮಾಡಿದ್ದ ಪೈರು ಕಪ್ಪು ಬಣ್ಣಕ್ಕೆ ತಿರುಗಿ, ಸುಟ್ಟ ರೀತಿ ಕಾಣುತ್ತಿದೆ. ಇದೆಕ್ಕೆಲ್ಲ ಕಾರಣ ಈ ಜಮೀನಿಗೆ ಹಾಯಿಸುವ ನೀರು, ಭದ್ರ ಚಾನಲ್​ನಿಂದ ಬರುತ್ತಿದ್ದು, ಆ ಭದ್ರ ಚಾನಲ್​ಗೆ ಆಸಿಡ್ ಮಿಶ್ರಿತ ಕೆಮಿಕಲ್​ನ್ನು ಟ್ಯಾಂಕರ್ ಮೂಲಕ ಬಿಟ್ಟಿದ್ದಾರೆ. ಇದರಿಂದ ಚಾನಲ್ ನೀರು ಸಂಪೂರ್ಣ ಕಲುಷಿತವಾಗಿದೆ‌‌.. ಈ ನೀರು ವಾಸು ಅವರ ಜಮೀನಿಗೆ ಹರಿದಿದ್ದು, ಇದರಿಂದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ‌.

ಇನ್ನು ದಾವಣಗೆರೆ ಹತ್ತಿರ ಇರುವುದರಿಂದ ಕಸ, ಕುಡುಕರು ಬಾಟಲ್​ಗಳನ್ನು ಇಲ್ಲೇ ಬಿಟ್ಟು ಹೋಗುತ್ತಾರೆ. ಅಲ್ಲದೆ, ಕೆಲವೊಂದು ಕಂಪನಿಗಳ ಕೆಮಿಕಲ್​ಗಳನ್ನು ರಾತ್ರೋರಾತ್ರಿ ಟ್ಯಾಂಕರ್​ಗಳಲ್ಲಿ ತಂದು ಸುರಿದು ಹೋಗುತ್ತಾರೆ. ಇದರಿಂದ ಭದ್ರಾ ಚಾನಲ್​ನ ನೀರು ಕಲುಷಿತವಾಗಿ ಮೀನುಗಳೆಲ್ಲ ಸಾವನ್ನಪ್ಪಿವೆ. ಇದೇ ನೀರು ರೈತರ ಜಮೀನುಗಳಿಗೆ ಹೋಗಿ ಇಡೀ ಭತ್ತದ ಗದ್ದೆ ಕೆಟ್ಟ ವಾಸನೆ ಜೊತೆಗೆ ಜಿಡ್ಡು ಜಿಡ್ಡಾದ ನೀರು ನಿಂತಿದೆ. ಇದೀಗ ಈ ನೀರನ್ನು ರೈತರು ಪಂಪ್ ಮೂಲಕ ಹೊರ ಹಾಕುತ್ತಿದ್ದಾರೆ. ಅಲ್ಲದೆ, ಕೆಮಿಕಲ್ ನೀರು ನಿಂತ ಭೂಮಿ ಕೂಡ ಬರಡು ಭೂಮಿಯಾಗುವ ಅತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಮಂಡ್ಯ-ಮೈಸೂರಿನಲ್ಲಿ ಜೋರಾದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಹರಿಸುವುದರ ವಿರುದ್ಧ ಸಿಡಿದೆದ್ದ ರೈತರು

ಒಟ್ಟಾರೆಯಾಗಿ ನಗರದ ಹತ್ತಿರ ಜಮೀನು ಇದೆ ಎನ್ನುವ ಖುಷಿಗಿಂತ ಇಲ್ಲಿ‌ನ ರೈತರಿಗೆ ಅತಂಕವೇ ಹೆಚ್ಚಾಗಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ವು ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತನಿಗೆ, ಕೆಮಿಕಲ್ ನೀರಿನಿಂದ ಇಡೀ ಬೆಳೆ ಹಾಳಾಗುವ ಸ್ಥಿತಿ ತಲುಪಿದೆ. ಏನೇ ಆಗಲಿ ಈ ರೀತಿ ರೈತರಿಗೆ ತೊಂದರೆ ಕೊಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದು ಪೊಲೀಸರಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ