ದಾವಣಗೆರೆ, ಜು.27: ಮಲೆನಾಡಿನಲ್ಲಿ ಮಳೆಯ ಆರ್ಭಟ ಶುರುವಾಗಿದ್ದು, ತುಂಗಭದ್ರಾ ನದಿ(Tungabhadra River)ಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಇದರಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಇಟ್ಟಿಗೆ ಭಟ್ಟಿಗಳು ಜಲಾವೃತವಾಗಿವೆ. ಹೌದು, ದಾವಣಗೆರೆ ಜಿಲ್ಲೆಯ ಹರಿಹರ(Harihara) ತಾಲೂಕಿನ ಗುತ್ತೂರು ಬಳಿಯ ನೂರಾರು ಇಟ್ಟಿಗೆ ಭಟ್ಟಿಗಳು ಈಗ ಅಕ್ಷರಶ ಜಲಾವೃತವಾಗಿವೆ. ಭಟ್ಟಿಗಳಿಗೆ ನೀರು ನುಗ್ಗಿದ್ದರಿಂದ ಕೆಲಸವಿಲ್ಲದೇ ನೂರಾರು ಜನ ಕೂಲಿ ಕಾರ್ಮಿಕರು ಖಾಲಿ ಕುಳಿತಿದ್ದಾರೆ.
ಒಂದು ಇಟ್ಟಿಗೆಯ ಬೆಲೆ ಎಳರಿಂದ ಎಂಟು ರೂಪಾಯಿ ಆಗುತ್ತದೆ. ಒಂದು ರೀತಿಯಲ್ಲಿ ಪ್ರತಿ ಇಟ್ಟಿಗೆ ಹಿಂದೆ ಅಷ್ಟೆ ಪರಿಶ್ರಮ ಇದೆ. ಇಲ್ಲಿ ಸಿಗುವ ಮಣ್ಣು, ಮರಳು, ನೀರು ಉತ್ತಮ ಗುಣಮಟ್ಟದ್ದು. ಬೆಳಗಾವಿ ಸುವರ್ಣ ಸೌಧ ಕಟ್ಟಡಕ್ಕೂ ಇಲ್ಲಿಂದಲೇ ಮರಳು ಪೂರೈಕೆ ಆಗಿದ್ದು. ಇಂತಹ ಇಟ್ಟಿಗೆ ಭಟ್ಟಿಗಳು ಪ್ರವಾಹದಲ್ಲಿ ನೀರಿನ ಹೊಡೆತಕ್ಕೆ ಕೊಚ್ಚಿಕೊಂಡು ಹೋದರೆ ಎಂಬ ಭಯ ಶುರುವಾಗಿದೆ.
ಇದನ್ನೂ ಓದಿ:ಬೆಳಗಾವಿ: ಜಲಾವೃತವಾದ ಸೇತುವೆ ಮೇಲೆ ವಾಹನ ಸಂಚಾರ; ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್ಕೇರ್
ಹರಿಹರದ ಗುತ್ತೂರು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಇಟ್ಟಿಗೆ ಭಟ್ಟಿಗಳಿದ್ದು, ಶತಮಾನಗಳಿಂದ ಇಲ್ಲಿನ ಇಟ್ಟಿಗೆ ಭಟ್ಟಿಗಳು ಪ್ರಸಿದ್ದಿ ಪಡೆದಿವೆ. ಇದು ಬಡ ಜನರ ಕೈಗೆ ಕೆಲಸ ಕೊಡುವ ಮಹತ್ವದ ಉದ್ಯಮ ಕೂಡ ಹೌದು. ಮಣ್ಣು, ನೀರು ಇಲ್ಲಿ ಲಭ್ಯ ಇದ್ದ ಹಿನ್ನೆಲೆ ನಿರಂತರವಾಗಿ ಇಲ್ಲಿ ಇಟ್ಟಿಗೆ ಸಿದ್ದವಾಗುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಹ ಬಂದು ಇಡಿ ಇಟ್ಟಿಗೆ ಭಟ್ಟಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಹೀಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿ ಹರಿಯುತ್ತದೆ. ಇದರಿಂದ ನದಿ ಪಾತ್ರದ 67 ಗ್ರಾಮಗಳಿಗೆ ಪ್ರವಾಹದ ಭೀತಿ ಇದೆ. ಇದೀಗ ಇನ್ನೂ ಸಹ ಸಂಪೂರ್ಣವಾಗಿ ಸುಡದ ಇಟ್ಟಿಗೆಗಳು ಇದಾಗಿದ್ದು, ಭಟ್ಟಿಗೆ ನುಗ್ಗಿದ ನೀರು ಹಾಗೆ ಇದ್ದರೆ ಸಂಪೂರ್ಣ ಹಾನಿಯಾಗುತ್ತದೆ. ಹೀಗಾಗಿ ಕೋಟ್ಯಾಂತರ ರೂಪಾಯಿಯ ಇಟ್ಟಿಗೆ ಭಟ್ಟಿಗಳು ಹಾನಿಯಾಗುತ್ತಿದ್ದು, ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ