ದಾವಣಗೆರೆ, ಮಾರ್ಚ್ 23: ಉದ್ಯೋಗ ಅರಸಿ ಮಧ್ಯ ಆಫ್ರಿಕಾದ (Central Africa) ಗಬಾನ್ (Gabon) ದೇಶಕ್ಕೆ ತೆರಳಿರುವ ಚನ್ನಗಿರಿ (Channagiri) ತಾಲೂಕಿನ ಗೋಪನಾಳ್-ಅಸ್ತಾಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಹಕ್ಕಿ-ಪಿಕ್ಕಿ ಜನಾಂಗದ ನಾಟಿ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಧ್ಯ ಆಫ್ರಿಕಾದ ಗಬಾನ್ ದೇಶದಲ್ಲಿ ರಾಜಕೀಯ ಬೆಳವಣಿಗೆಯಿಂದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ಸರ್ಕಾರ ವಿದೇಶಿಯರು ದೇಶ ಬಿಡುವಂತೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಗಬಾನ್ ರಾಜಧಾನಿ ಲಿಬ್ರೆವಿಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕದ ಹಕ್ಕಿ-ಪಿಕ್ಕಿ ಜನಾಂಗದ 25 ಕ್ಕೂ ಹೆಚ್ಚು ಜನ ನಾಟಿ ವೈದ್ಯರು ಕಳೆದ ಆರು ತಿಂಗಳನಿಂದ ಲಿಬ್ರೆವಿಲ್ನಲ್ಲಿ ವಾಸವಾಗಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಮಠದಲ್ಲಿದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕಳುಹಿಸಿದ ರೋಬೋಟಿಕ್ ಆನೆ: ಹೇಗಿದೆ ನೋಡಿ
ಇದೀಗ, ಪೊಲೀಸರು 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. “ನಮ್ಮ ಪಾಸ್ಪೋರ್ಟ್ ವಶಕ್ಕೆ ಪಡೆದು ತೊಂದರೆ ನೀಡುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಇಲ್ಲಿನ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಇಲಾಖೆ ಗಮನ ಹರಿಸುವಂತೆ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.