ದಾವಣಗೆರೆ: ಕೊವಿಡ್ ನಿಯಮ ಉಲ್ಲಂಘಿಸಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಭಾಗಿ ಆಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರೇಣುಕಾಚಾರ್ಯ ಭಾಗವಹಿಸಿದ್ದಾರೆ. ನಿನ್ನೆ (ಜನವರಿ 9) ವೀಕೆಂಡ್ ಕರ್ಫ್ಯೂ ವೇಳೆಯಲ್ಲಿಯೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ರೇಣುಕಾಚಾರ್ಯ ಭಾಗಿ ಆಗಿದ್ದರು. ತಮ್ಮ ಸರ್ಕಾರದ ನಿಯಮಗಳನ್ನೇ ಶಾಸಕರು ಉಲ್ಲಂಘಿಸಿದ್ದಾರೆ.
ನನ್ನಿಂದ ತಪ್ಪಾಗಿದೆ. ಈ ಘಟನೆ ಬಗ್ಗೆ ನಾನು ಬಹಿರಂಗವಾಗಿ ಕ್ಷಮೆ ಯಾಚಿಸುವೆ. ಕೋವಿಡ್ ವೇಳೆ ಚೆನ್ನಾಗಿ ಕೆಲಸ ಮಾಡಿದ್ದೆ. ಆದ್ರೆ ಇಂದಿನ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಹಿನ್ನೆಲೆ ನಾನು ರಾಜ್ಯದ ಜನತೆಗೆ ವಿಲನ್ ರೀತಿ ಕಾಣುತ್ತಿರುವೆ. ಕಾಂಗ್ರೆಸ್ ಪಾದಯಾತ್ರೆ ಖಂಡಿಸಿದ್ದೆ. ಈ ಘಟನೆಯಿಂದ ಪಾದಯಾತ್ರೆ ಖಂಡಿಸುವ ನೈತಿಕತೆ ಕಳೆದು ಕೊಂಡಿದ್ದೇನೆ. ದಯಮಾಡಿ ಕ್ಷಮಿಸಿ ಎಂದು ರಾಜ್ಯದ ಜನತೆಗೆ ಶಾಸಕ ರೇಣುಕಾಚಾರ್ಯ ಬಹಿರಂಗ ಕ್ಷಮೆ ಕೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 60 ಮಕ್ಕಳಿಗೆ ಕೊರೊನಾ ದೃಢ
ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 60 ಮಕ್ಕಳಿಗೆ ಕೊರೊನಾ ದೃಢವಾಗಿದೆ. ಬೆಳಗೊಳ ಪ್ರೌಢಶಾಲೆ 13, ನೆರಳಕೆರೆ, ಅರಕೆರೆ ಶಾಲೆಯ ತಲಾ 1, ನಾಗಮಂಗಲ ತಾಲೂಕಿನ ಕಂಬದಹಳ್ಳಿ ಹಾಸ್ಟೆಲ್‌ನ 12, ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ಓರ್ವ ವಿದ್ಯಾರ್ಥಿಗೆ ಕೊವಿಡ್19 ದೃಢವಾಗಿದೆ. ತಮಿಳುನಾಡಿನ ಓಂ ಶಕ್ತಿಗೆ ಹೋಗಿ ಬಂದವರಿಂದ ಮಕ್ಕಳಿಗೆ ದೃಢಪಟ್ಟಿದೆ. ಪೋಷಕರು ಓಂ ಶಕ್ತಿಗೆ ಹೋಗಿದ್ದರಿಂದ ಮಕ್ಕಳಿಗೆ ಕೊರೊನಾ ಕಂಡುಬಂದಿದೆ ಎಂದು ಮಂಡ್ಯದಲ್ಲಿ ಡಿಡಿಪಿಐ ಜವರೇಗೌಡ ಹೇಳಿಕೆ ನೀಡಿದ್ದಾರೆ.
ಹೊರ ರಾಜ್ಯಕ್ಕೆ ಹೋಗಿ ಬಂದಿದ್ದ 320 ಜನರಿಗೆ ಕೊರೊನಾ ಕಂಡುಬಂದಿದೆ. ಹೊರ ರಾಜ್ಯಕ್ಕೆ ಹೋಗಿದ್ದ 5300ರಲ್ಲಿ 320 ಜನರಿಗೆ ಕೊವಿಡ್ ಸೋಂಕು ದೃಢವಾಗಿದೆ ಎಂದು ಮಂಡ್ಯದಲ್ಲಿ ಡಿಹೆಚ್ಒ ಡಾ. ಧನಂಜಯ್ ಹೇಳಿಕೆ ನೀಡಿದ್ದಾರೆ. ಹಾಸನದ ಹಿಮ್ಸ್‌ನ 6 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಇಬ್ಬರು ವೈದ್ಯರು, ಇಬ್ಬರು ನರ್ಸ್ ಸೇರಿ 6 ಸಿಬ್ಬಂದಿಗೆ ಕೊವಿಡ್ ದೃಢವಾಗಿದೆ. ಹಿಮ್ಸ್‌ನ ಕೊರೊನಾ ಸೋಂಕಿತ ಸಿಬ್ಬಂದಿ ಸಂಖ್ಯೆ 14ಕ್ಕೆ ಏರಿಕೆ ಆಗಿದ್ದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
ದೇವನಹಳ್ಳಿ, ಧಾರವಾಡದಲ್ಲಿ ಕೂಡ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಶಾಲೆಯಲ್ಲಿ ಏಳು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಂಡುಬಂದಿದೆ. ಸರ್ಕಾರಿ ಬಾಲಕಿಯರ ಹೈಸ್ಕೂಲ್ನ 7 ವಿದ್ಯಾರ್ಥಿನಿಯರಿಗೆ ಕೊರೊನಾ ಕಂಡುಬಂದಿದೆ. ವಿದ್ಯಾರ್ಥಿನಿ ಕುಟುಂಬಸ್ಥರ ಜೊತೆ ಓಂಶಕ್ತಿಗೆ ಹೋಗಿದ್ದರು. ದೇಗುಲಕ್ಕೆ ಹೋಗಿ ಬಂದ ನಂತರ ಬಾಲಕಿಗೆ ಜ್ವರ ಹಿನ್ನೆಲೆ ಟೆಸ್ಟ್ ಮಾಡಿಸಿದಾಗ ಕೊರೊನಾ ದೃಢವಾಗಿದೆ. ಡಿಸಿ ಶ್ರೀನಿವಾಸ್ ಶಾಲೆಗೆ ಏಳು ದಿನ ರಜೆ ಘೋಷಿಸಿದ್ದಾರೆ.
ಹಾಸನ ನಗರದಲ್ಲಿ 21 ವಿದ್ಯಾರ್ಥಿನಿಯರಿಗೆ ಕೊರೊನಾ ಕಂಡುಬಂದಿದೆ. ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೊವಿಡ್ ಸೋಂಕು ದೃಢವಾಗಿದೆ. 21 ವಿದ್ಯಾರ್ಥಿನಿಯರಿಗೆ ಸೋಂಕು ಹಿನ್ನೆಲೆ ಕಾಲೇಜು ಬಂದ್ ಮಾಡಲಾಗಿದೆ. ಒಂದೇ ಹಾಸ್ಟೆಲ್‌ನ 13 ವಿದ್ಯಾರ್ಥಿನಿಯರಿಗೆ ಕೊರೊನಾ ಕಂಡುಬಂದ ಘಟನೆ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ನಡೆದಿದೆ. ಧಾರವಾಡದ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ 13 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಆಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಶಿವಮೊಗ್ಗ, ಮಂಡ್ಯದಲ್ಲಿ ಕೊರೊನಾ ಹೆಚ್ಚಳ; ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದ ರೇಣುಕಾಚಾರ್ಯ
ಇದನ್ನೂ ಓದಿ: ಖ್ಯಾತ ಹಿರಿಯ ನಟಿಗೆ ಕೊರೊನಾ ಒಮಿಕ್ರಾನ್; ರೂಪಾಂತರಿಯಿಂದ ಆದ ಸಮಸ್ಯೆಗಳನ್ನು ವಿವರಿಸಿದ ಹೀರೋಯಿನ್
Published On - 3:08 pm, Mon, 10 January 22