ದಾವಣಗೆರೆ/ಹಾವೇರಿ: ನವ ಜೋಡಿಯೊಂದನ್ನು ಮತ್ತದೇ ದುರ್ವಿಧಿ ಅಗಲಿಸಿದೆ. ಜಸ್ಟ್ 15 ದಿನಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮುದ್ದಾದ ಜೋಡಿ ಅದು. ಸಂಜಯ್ (28) ಮತ್ತು ಪ್ರೀತಿ (25) ಆ ಜೋಡಿಯ ಹೆಸರುಗಳು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ (techie) ಗಳಾಗಿದ್ದ ಅವರಿಬ್ಬರೂ ಮದುವೆ ಆದ ಹೊಸದರಲ್ಲಿ ಬೈಕ್ ಮೇಲೆ ಜಾಲಿ ಟ್ರಿಪ್ ಹೋಗಿದ್ದರು. ಅದೇ ವೇಳೆ ರಸ್ತೆ ದುರಂತ (accident) ಸಂಭವಿಸಿದ್ದು, ಸಂಜಯ್ ಸಾವಿಗೀಡಾಗಿದ್ದಾರೆ. ನವ ವಧು ಪ್ರೀತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಜಯ್ -ಪ್ರೀತಿ ಜೋಡಿ ಮದ್ವೆಯಾದ ಮೇಲೆ ಬೈಕ್ ಮೇಲೆ ಮುರುಡೇಶ್ವರ, ಶಿರಸಿ ಮಾರಿಕಾಂಬೆ ದರ್ಶನಕ್ಕೆಂದು ಹೋಗಿದ್ದರು. ವಾಪಸ್ಸು ಬರುವಾಗ ರಸ್ತೆ ಬಳಿ ನಿಂತಿದ್ದ ಕಬ್ಬು ತುಂಬಿದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಬಳಿ (Hirekerur taluk in Haveri) ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಸಂಜಯ್ನನ್ನು ದಾವಣಗೆರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡ ಪ್ರೀತಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ.
ಮೃತ ಸಂಜಯ್, ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ನಿವಾಸಿ. ಕಳೆದ ನವೆಂಬರ್ 28 ರಂದು ಗದಗ ಮೂಲದ ಪ್ರೀತಿಯನ್ನ ವಿವಾಹವಾಗಿದ್ದರು. ಇಬ್ಬರು ಸಹ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದವರು.
ಇದನ್ನೂ ಓದಿ: ಕೋಲಾರದ ಕೆರೆಯಂಗಳದಲ್ಲಿ ಮಗಳನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಬೆಂಗಳೂರಿನ ಟೆಕ್ಕಿ ಅಪ್ಪ! ಇಲ್ಲಿದೆ ಡೀಟೇಲ್ಸ್
ಪತ್ನಿ ಪ್ರೀತಿ ಐಸಿಯುನಿಂದ ಬಂದು ಪತಿ ಸಂಜಯ್ ಅಂತಿಮದರ್ಶನ ಪಡೆಯುವಾಗ ಅಲ್ಲೊಂದು ಮನಕಲಕುವ ದೃಶ್ಯ ಕಂಡುಬಂದಿದೆ. ನವ ಜೀವನದ ಪಥದಲ್ಲಿ ಸಾಗುತ್ತಿದ್ದಾಗ ಜೊತೆಯಲ್ಲಿಯೇ ಇದ್ದ ಪತಿ ಕಣ್ಣೇದುರಿಗೇ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ್ದು ಪ್ರೀತಿಗೆ ಆಘಾತವಾಗಿದೆ. ತೀವ್ರವಾಗಿ ಗಾಯಗೊಂಡು ದಾವಣಗೆರೆ ಬಾಪೂಜಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿಂದಲೇ ಸ್ಟ್ರೆಚರ್ನಲ್ಲಿ ಬಂದು ಪತಿಯ ಅಂತಿಮ ದರ್ಶನ ಪಡೆದು, ಕೊನೆಯ ಬಾರಿಗೆ ಬಾಳಸಂಗಾತಿಯ ಕೆನ್ನೆ ಸವರಿ ಬೀಳ್ಕೊಟ್ಟಿದ್ದಾರೆ. ಈ ದೃಶ್ಯ ಅಲ್ಲಿದ್ದವರನ್ನು ಮೂಕರೋದನೆಗೆ ತಳ್ಳಿದೆ. ಆ ಫೋಟೋ ಈಗ ವೈರಲ್ ಆಗಿದ್ದು, ರಾಜ್ಯದ ಜನತೆ ಮರುಗಿದ್ದಾರೆ. ಮೂರು ದಿನಗಳ ಹಿಂದೆ ಈ ದಾರುಣ ಘಟನೆ ನಡೆದಿದೆ.
Published On - 5:35 pm, Sat, 17 December 22