ಕೋಲಾರದ ಕೆರೆಯಂಗಳದಲ್ಲಿ ಮಗಳನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಬೆಂಗಳೂರಿನ ಟೆಕ್ಕಿ ಅಪ್ಪ! ಇಲ್ಲಿದೆ ಡೀಟೇಲ್ಸ್

ಸಾಯುವ ನಿರ್ಧಾರ ಮಾಡಿ ಮನೆಯಿಂದ ಹೊರಟ ರಾಹುಲ್​ ತನ್ನ ಮಗಳೊಂದಿಗೆ ಹೊಸಕೋಟೆ ಮಾರ್ಗವಾಗಿ ಸೀದಾ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಬಂದು ನಿಂತಿದ್ದ. ಅಷ್ಟೊತ್ತಿಗೆ ಸಂಜೆಯಾಗಿತ್ತು, ತನ್ನ ಮಗಳೊಂದಿಗೆ ತಾನು ಕೆರೆಯಲ್ಲಿ ಮುಳುಗಿ ಸಾಯಲು ನಿರ್ಧಾರಿಸಿದ್ದ.

ಕೋಲಾರದ ಕೆರೆಯಂಗಳದಲ್ಲಿ ಮಗಳನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಬೆಂಗಳೂರಿನ ಟೆಕ್ಕಿ ಅಪ್ಪ! ಇಲ್ಲಿದೆ ಡೀಟೇಲ್ಸ್
ಕೋಲಾರದ ಕೆರೆಯಂಗಳದಲ್ಲಿ ಮಗಳನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಬೆಂಗಳೂರಿನ ಟೆಕ್ಕಿ ಅಪ್ಪ!
TV9kannada Web Team

| Edited By: sadhu srinath

Nov 25, 2022 | 4:51 PM

ಆತ ತನ್ನ ಮಗಳನ್ನು ಎದೆಯ ಮೇಲೆ ಆಟವಾಡಿಸಿಕೊಂಡು ಬೆಳೆಸಿದ್ದ. ಅದೇ ಎದೆಯಲ್ಲಿ ಮಗಳಿಗೆ ಪ್ರೀತಿಯ ಗೂಡು ಕಟ್ಟಿದ್ದ. ತನ್ನ ಮಗಳಿಗಾಗಿ ಕೇಳಿದ್ದೆಲ್ಲವನ್ನು ತಂದು ಕೊಡುತ್ತಿದ್ದ ತಂದೆ ಆತ. ಆದರೂ ಆತನಿಗೆ ಕಾಡಿದ ಅದೊಂದು ಸಾಲದ ಭಾದೆ, ಹೂಡಿಕೆಯಲ್ಲಿನ ನಷ್ಟ ತನ್ನ ಕೈಯಾರೆಯೇ ಆಡಿಸಿದ್ದ ಮಗುವನ್ನು ತಾನೇ ತನ್ನ ಎದೆಗೆ ಬಿಗಿದಪ್ಪಿ ಕೊಂದುಹಾಕುವಂತೆ ಮಾಡಿದೆ. ಅಷ್ಟಕ್ಕೂ ಏನದು ಕರುಣಾಜನಕ ಸ್ಟೋರಿ? ಇಲ್ಲಿದೆ ಡೀಟೇಲ್ಸ್​ ಓದಿ.

ವೃತ್ತಿಯಲ್ಲಿ ಸಾಫ್ಟ್​​​ವೇರ್​ ಎಂಜಿನಿಯರ್ (Techie) ಆಗಿರುವ ಆ ತಂದೆ (Father) ಒಂದೇ ಸಮನೆ ಕಣ್ಣೀರುಹಾಕುತ್ತಾ ತನ್ನ ಮಗಳನ್ನು ತಾನೇ ಕೊಂದ (Murder) ಸ್ಥಳವನ್ನು ಪೊಲೀಸರೊಂದಿಗೆ ಕೆರೆಯ ಬಳಿ ತೆರಳಿ ತೋರಿಸಿದ್ದಾನೆ. ಈ ದೃಶ್ಯ ಕಂಡು ಬಂದಿದ್ದು ಕೋಲಾರ (Kolar) ತಾಲ್ಲೂಕು ಕೆಂದಟ್ಟಿ ಬಳಿಯಲ್ಲಿ. ಹೌದು ಅದು ನವೆಂಬರ್ 16 ರಂದು ನಡೆದಿದ್ದ ಘಟನೆ. ಗುಜರಾತ್​ ಮೂಲದ ಸಾಫ್ಟ್​​​ವೇರ್​ ಎಂಜಿನಿಯರ್ ಒಬ್ಬ ತನ್ನ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದುಕೊಂಡಿದ್ದ ಪ್ರಕರಣದ ಅಸಲಿಯತ್ತು ಇದೀಗ ಬಯಲಾಗಿದೆ.

ತನ್ನ ಮಗುವನ್ನು ತನ್ನ ಕೈಯಾರೆ ಕೊಂದ ತಂದೆ ಹೇಳಿದ ಕಥೆ ಕೇಳಿದ್ರೆ ಎಂಥವರಿಗೂ ಕಣ್ಣಾಲಿಗಳು ತುಂಬಿ ಬರುತ್ತವೆ. ರಾಹುಲ್​ ಗುಜರಾತ್​ ಮೂಲದ ಸಾಫ್ಟ್​​​ವೇರ್ ಎಂಜಿನಿಯರ್​ ಬೆಂಗಳೂರಿನ ಬಾಗಲೂರಿನಲ್ಲಿ ತನ್ನ ಪ್ರೀತಿಸಿ ಮದುವೆಯಾಗಿದ್ದ ಭವ್ಯ ಎಂಬ ಹುಡುಗಿಯ ಜೊತೆಗೆ ರಾಗಾ ಅಪಾರ್ಟ್​​ಮೆಂಟ್​ನಲ್ಲಿ ವಾಸವಿದ್ದ. ಕಳೆದ ಐದಾರು ವರ್ಷಗಳಿಂದ ಇಲ್ಲಿ ವಾಸವಿದ್ದ ರಾಹುಲ್​ ಮತ್ತು ಭವ್ಯಾಗೆ ಮೂರು ವರ್ಷದ ಒಂದು ಮುದ್ದಾದ ಹೆಣ್ಣು ಮಗು ಇತ್ತು. ಆಕೆಯ ಹೆಸರು ಜಿಯಾ.

ಕಳೆದ ಒಂದೂವರೆ ವರ್ಷದಿಂದ ಕೆಲಸವಿಲ್ಲದೆ, 2016 ರಿಂದ ಬಿಟ್​ಕಾಯಿನ್​ ಮೇಲೆ ಹೂಡಿಕೆ ಮಾಡಿ ಸಾಕಷ್ಟು ನಷ್ಟ ಅನುಭವಿಸಿದ್ದ ರಾಹುಲ್​ ಅವತ್ತು ನವೆಂಬರ್​ 15 ರಂದು ತಾನು ಮಗುವನ್ನು ಶಾಲೆಗೆ ಬಿಡಲು ಸಿದ್ಧತೆ ನಡೆಸಿದ್ದ. ಅವತ್ತು ಆತನ ಸಮಸ್ಯೆಗಳೆಲ್ಲಾ ಮನೆ ಬಾಗಿಲಿಗೇ ಬಂದು ನಿಂತು ಬಿಟ್ಟಿದ್ದವು. ಸಾಲಗಾರರು ಮನೆಯ ಬಳಿ ಬಂದು ನಿಂತಿದ್ದರು. ತಾನು ನೀಡಿದ್ದ ಸುಳ್ಳು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂದು ಠಾಣೆಗೆ ಬರುವಂತೆ ಕರೆದಿದ್ದರು. ಇದರ ಜೊತೆಗೆ ತನ್ನ ಪತ್ನಿಯನ್ನು ಕೇಳಿದ್ದನ್ನು ಕೊಡಿಸಿ ಸಂತೋಷವಾಗಿಡಬೇಕು ಎನ್ನುವ ಹಪಾಹಪಿ ಆತನನ್ನು ನಿಜಕ್ಕೂ ದುಃಸ್ಥಿತಿಗೆ ತಳ್ಳಿತ್ತು.

Techie Rahul from Bagalur in Bangalore kills his toddler daughter in Kolar reason heavy loan

ಇಂಥ ಪರಿಸ್ಥಿತಿಯಲ್ಲಿ ಜೇಬಲ್ಲಿ ಒಂದು ನಯಾಪೈಸೆಯೂ ಇಲ್ಲವಾಗಿತ್ತು. ಹೀಗಿರುವಾಗ ಅವತ್ತು ತನ್ನ ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೊರಬಂದ ರಾಹುಲ್ ಗೆ​ ವಾಪಸ್ ಮನೆಗೆ ಹೋಗಲಾಗದ ಸ್ಥಿತಿ ಎದುರಾಗಿತ್ತು. ಒಂದು ವೇಳೆ ವಾಪಸು ಮನೆಗೆ ಹೋದರೂ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲಾಗದ ಪರಿಸ್ಥಿತಿ ಆತನದ್ದು. ಅದರ ಪರಿಣಾಮ ತನ್ನ ಮುದ್ದಿನ ಮಗಳಗೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ.

ಸಾಯುವ ನಿರ್ಧಾರ ಮಾಡಿ ಮನೆಯಿಂದ ಹೊರಟ ರಾಹುಲ್​ ತನ್ನ ಮಗಳೊಂದಿಗೆ ಹೊಸಕೋಟೆ ಮಾರ್ಗವಾಗಿ ಸೀದಾ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಬಂದು ನಿಂತಿದ್ದ. ಅಷ್ಟೊತ್ತಿಗೆ ಸಂಜೆಯಾಗಿತ್ತು, ತನ್ನ ಮಗಳೊಂದಿಗೆ ತಾನು ಕೆರೆಯಲ್ಲಿ ಮುಳುಗಿ ಸಾಯಲು ನಿರ್ಧಾರಿಸಿದ್ದ. ಆದರೆ ಮಗು ಬದುಕಿ ನಾನು ಸತ್ತರೆ ಎಂದು ಮೊದಲು ತನ್ನ ಮಗಳನ್ನು ತನ್ನ ಎದೆಗೆ ಬಿಗಿದಪ್ಪಿಕೊಂಡು ಮೊದಲು ತನ್ನ ಮಗಳ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರವೂ, ಅದಾಗತಾನೆ ಉಸಿರು ನಿಲ್ಲಿಸಿದ್ದ ತನ್ನ ಮಗಳನ್ನು ಎದೆಗಪ್ಪಿಕೊಂಡೇ ಕೆರೆಯ ನೀರಿಗೆ ಹಾರಿದ್ದಾನೆ.

ಆದರೆ ನೀರು ಆಳವಿರಲಿಲ್ಲ, ಸಾಯಲು ಸಾಧ್ಯವಾಗಿಲ್ಲ. ಅಷ್ಟು ಹೊತ್ತಿಗೆ ರಾಹುಲ್​ಗೆ ಸಾಯಲು ಧೈರ್ಯ ಬಂದಿಲ್ಲ. ಹಾಗಾಗಿ ಮೃತಪಟ್ಟ ತನ್ನ ಮಗುವನ್ನು ಅಲ್ಲೇ ಬಿಟ್ಟು ಕಾರ್​ನಲ್ಲಿ ಮೊಬೈಲ್​, ಪರ್ಸ್​, ಎಲ್ಲವನ್ನೂ ಅಲ್ಲೇ ಬಿಟ್ಟು ಸೀದಾ, ಯಾರೋ ವ್ಯಕ್ತಿಯೊಬ್ಬರಿಂದ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಡ್ರಾಪ್​ ತೆಗೆದುಕೊಂಡು ರೈಲು ಹತ್ತಿದ್ದಾನೆ. ರಾಹುಲ್​ ಅಲ್ಲಿಂದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ದೆಹಲಿ, ಆಗ್ರಾ ಹೀಗೆ ರೈಲಿನಲ್ಲಿ ನಾಲ್ಕೈದು ರಾಜ್ಯಗಳನ್ನು ಸುತ್ತಾಡಿದ್ದಾನೆ.

ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಮತ್ತೆ ರೈಲಿನಿಂದ ಹಾರಿ ಸಾಯಲು ಯತ್ನಿಸಿದ್ದಾನೆ. ಆದರೂ ಆತನಿಗೆ ಸಾಯಲು ಧೈರ್ಯ ಸಾಕಾಗಿಲ್ಲ. ಈ ವೇಳೆ ತನ್ನ ಹೆಂಡತಿ ಮನೆಯವರಿಗೆ ಪೋನ್​ ಮಾಡಿ ಕಿಡ್ನಾಪ್​ ಕಥೆ ಕಟ್ಟಿದ್ದಾನೆ. ಆಗ ಇವನಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ರಾಹುಲ್​ ಬೆನ್ನುಬಿದ್ದಾಗ… ರಾಹುಲ್​ ಆಂಧ್ರ ಪ್ರದೇಶದಿಂದ ರೈಲಿನಲ್ಲಿ ಬೆಂಗಳೂರಿನತ್ತ ಹೊರಟಿರುವುದು ತಿಳಿದುಬರುತ್ತದೆ. ಕೊನೆಗೂ ಪೊಲೀಸರು ಆತನನ್ನು ಬಂಧಿಸಿ ಕರೆತಂದು ವಿಚಾರಣೆ ಮಾಡಿದಾಗ ಅಸಲಿ ವಿಷಯ ತಿಳಿದು ಬಂದಿದೆ.

ಒಟ್ಟಾರೆ ತಾನು ಪ್ರೀತಿಸಿ ಮದುವೆಯಾದ ತನ್ನ ಹೆಂಡತಿಯನ್ನ, ತನ್ನ ಮುದ್ದಿನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಹಪಾಹಪಿಯಲ್ಲಿ ಹೀಗೆ ಸಾಲಸೋಲ ಮಾಡಿಕೊಂಡು ಸಾಯುವ ದುಃಸ್ಥಿತಿಗೆ ತಲುಪಿದ ಈ ಟೆಕ್ಕಿಯ ಕಥೆ ನೋಡಿದ್ರೆ ನಿಜಕ್ಕೂ ಹಿರಿಯರು ಹೇಳುತ್ತಿದ್ದ ‘ಹಾಸಿಗೆ ಇದ್ದಷ್ಟು ಕಾಲು ಚಾಚು ಮನುಜ’ ಎಂಬ ಹಿತನುಡಿ ಕಿವಿಯಲ್ಲಿ ಗುಯ್ಯ್​ ಗುಡುತ್ತದೆ. (ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada