
ಮಹಿಳೆಯರಿಂದಲೇ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ದಾವಣಗೆರೆಯಲ್ಲೊಂದು ಜಾತ್ರೆ ನಡೆಯುತ್ತೆ. ವಿಶೇಷ ಅಂದ್ರೆ ಮಹಿಳೆಯರು ಬಂದು ಹಗ್ಗ ಹಿಡಿದರೇ ಮಾತ್ರ ಆ ದೇವರ ರಥೋತ್ಸವ ಮುಂದೆ ಸಾಗೋದು.

ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಕರಿಬಸವೇಶ್ವರ ಗದ್ದಿಗೆ ಇದೆ. ಈ ಗದ್ದಿಗೆಗೆ ಪರಮೇಶ್ವರ ಸ್ವಾಮೀಜಿಗಳು ಬಂದ ಬಳಿಕ ಇಲ್ಲೊಂದು ಸಾಮಾಜಿಕ ಕ್ರಾಂತಿಯಾಗಿದೆ. ಅದೇನಪ್ಪ ಅಂದ್ರೆ ಇಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸಮಪಾಲು ನೀಡಿದ್ದಾರೆ.

ವಿಶೇಷ ಅಂದ್ರೆ ಇಲ್ಲಿನ ರಥೋತ್ಸವ ನಡೆಯುವುದು ಮಹಿಳೆಯರಿಗಾಗಿ. ಮಹಿಳೆಯರೇ ರಥ ಎಳೆದುಕೊಂಡು ಹೋಗಬೇಕು. ಹೀಗಾಗಿ ಇದಕ್ಕೆ ಮಹಿಳಾ ಯಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

ಎಲ್ಲಿ ನೋಡಿದರಲ್ಲಿ ಸಂಭ್ರಮದಲ್ಲಿ ಮಹಿಳೆಯರು ಮುಳುಗಿರುತ್ತಾರೆ. ಮಹಿಳೆಯರೇ ಇಲ್ಲಿ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಾರೆ.

ಕಳೆದ 11 ವರ್ಷಗಳಿಂದ ಈ ರಥತ್ಸೋವ ನಡೆಯುತ್ತಿದೆ. ವಾರದಲ್ಲಿ ಎರಡು ದಿನಗಳ ಕಾಲ ಇಲ್ಲಿ ಪೂಜೆ ಮತ್ತು ಅಪ್ಪಣೆ ನಡೆಯುತ್ತೆ. ಅಂದ್ರೆ ಮನೆಯಲ್ಲಿ ಯಾವುದೇ ತೊಂದರೆಗಳಿದ್ದರೇ ಅದಕ್ಕೆ ಪರಿಹಾರ ಹೇಳುವ ಕಾಯಕ ಇಲ್ಲಿದೆ.

ಇದೇ ಪರಮೇಶ್ವರ ಸ್ವಾಮೀಜಿಗಳ ಮನಸ್ಸಿನಲ್ಲಿ ಕರಿಬಸಜ್ಜಯ್ಯ ಬಂದು ಸಂದೇಶ ನೀಡುತ್ತಾರೆ ಎಂಬುದು ಜನರ ನಂಬಿಕೆ. ಈ ಜಾತ್ರೆಯ ದಿನ ಗ್ರಾಮದ ತುಂಬೆಲ್ಲಾ ಸಡಗರ ತುಂಬಿರುತ್ತೆ.

ಧನುರ್ಮಾಸ ಬಂದ್ರೆ ಸಾಕು ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಮಹಿಳೆಯರು ಈ ಪುಣ್ಯ ಕ್ಷೇತ್ರಕ್ಕೆ ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಮಾನತೆಯ ಪ್ರತಿರೂಪ ಎಂಬಂತೆ ಇಲ್ಲಿ ನಡೆಯೋ ರಥೋತ್ಸವ ನಿಜಕ್ಕೂ ಭಕ್ತರ ಮನಸೆಳೆದಿದೆ.